ನಟಿ ಭಾವನಾ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ವದಂತಿಗಳಿಗೆ ರೆಕ್ಕೆ ಪುಕ್ಕ ಬಲಿತಿದ್ದು ಏಪ್ರಿಲ್ ನಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎಂದು ತಿಳಿದುಬಂದಿದೆ. "ಆದರೆ ನಾವು ವಿವಾಹಕ್ಕೆ ದಿನಾಂಕವನ್ನಿನ್ನೂ ನಿಗದಿಪಡಿಸಿಲ್ಲ.
ಬೆಂಗಳೂರು: ನಟಿ ಭಾವನಾ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ವದಂತಿಗಳಿಗೆ ರೆಕ್ಕೆ ಪುಕ್ಕ ಬಲಿತಿದ್ದು ಏಪ್ರಿಲ್ ನಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎಂದು ತಿಳಿದುಬಂದಿದೆ. "ಆದರೆ ನಾವು ವಿವಾಹಕ್ಕೆ ದಿನಾಂಕವನ್ನಿನ್ನೂ ನಿಗದಿಪಡಿಸಿಲ್ಲ. ಅಂತರ್ಜಾಲ ಮಾಧ್ಯಮದವರಿಗೆ ಮದುವೆ ಮಾಡಲು ಹೆಚ್ಚು ಉತ್ಸಾಹವಿದೆ. ಅವರಿಂದ ನನ್ನ ಮಗಳ ಮದುವೆಯ ಹೆಚ್ಚಿನ ವಿವರಗಳನ್ನು ತಿಳಿಯಲು ಬಯಸುತ್ತೇನೆ" ಎಂದು ನಗುತ್ತ ಹೇಳುತ್ತಾರೆ ಭಾವನಾ ಅವರ ತಾಯಿ ಪುಷ್ಪ.
ಎಲ್ಲ ಊಹಾಪೋಹಗಳಿಗೆ ಅಂತ್ಯ ಹಾಡುವ ಪುಷ್ಪ, ಭಾವನಾ ಕನ್ನಡ ನಿರ್ಮಾಪಕ ನವೀನ್ ಅವರನ್ನು ವರಿಸುತ್ತಿರುವುದಾಗಿ ಧೃಢಪಡಿಸುತ್ತಾರೆ. "ಭಾವನಾ ತಂದೆ ಬದುಕಿದ್ದಾಗಲೇ ಅವರ ಮದುವೆ ನಿಗದಿಯಾಗಿತ್ತು. ದಿನಾಂಕ ನಿಗದಿಯಾದ ಮೇಲೆ ಭಾವನಾ ಅಧಿಕೃತ ಘೋಷಣೆ ಮಾಡಲಿದ್ದಾಳೆ" ಎನ್ನುತ್ತಾರೆ.
ನಟಿ ಸದ್ಯಕ್ಕೆ 'ಹನಿ ಬೀ' ಸಿನೆಮಾದ ಎರಡನೇ ಭಾಗದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ಮತ್ತು ಶೀಘ್ರದಲ್ಲೇ 'ಚಾರ್ಲಿ' ಸಿನೆಮಾದ ಕನ್ನಡ ರಿಮೇಕ್ ನಲ್ಲಿ ನಟಿಸಲಿದ್ದಾರೆ. ಮೂಲದಲ್ಲಿ ಪಾರ್ವತಿ ಮೆನನ್ ನಟಿಸಿದ್ದ ಪಾತ್ರದಲ್ಲಿ ಭಾವನಾ ನಟಿಸಲಿದ್ದಾರೆ.
"ಮದುವೆ ದಿನಾಂಕ ಮತ್ತು ವಿವಾಹದ ನಂತರ ನಟನೆ ಮುಂದುವರೆಸಲಿದ್ದಾರೆಯೇ, ಎಂಬೆಲ್ಲಾ ನಿರ್ಧಾರಗಳನ್ನು ಭಾವನಾ ತೆಗೆದುಕೊಳ್ಳಲಿದ್ದಾಳೆ" ಎನ್ನುತ್ತಾರೆ ತಾಯಿ ಪುಷ್ಪ.
೨೦೧೨ ರಲ್ಲಿ ಕನ್ನಡ ಸಿನೆಮಾ 'ರೋಮಿಯೋ' ಚಿತ್ರೀಕರಣದ ವೇಳೆ ಭಾವನಾ ಮತ್ತು ನಿರ್ಮಾಪಕ ನವೀನ್ ಅವರ ಭೇಟಿಯಾಗಿ ಸಂಬಂಧ ಬೆಳೆಸಿದ್ದರು ಎಂಬ ವದಂತಿ ಹಿಂದೆಯೇ ಹರಡಿತ್ತು.