ಮದುವೆ ಮನೆಯಲ್ಲಿ 'ಜಗ್ಗುದಾದ' ಸಖತ್ ಸ್ಟೆಪ್ಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದಲ್ಲಿ ಮೂಡಿಬರುತ್ತಿರುವ ಜಗ್ಗುದಾದ ಚಿತ್ರದ ಚಿತ್ರೀಕರಣ ನಗರದ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದು, ಚಿತ್ರದ ಹಾಡೊಂದಕ್ಕೆ ನಟ ದರ್ಶನ್ ಸಖತ್ ಸ್ಟೆಪ್ ಹಾಕುತ್ತಿದ್ದಾರೆ.
ಜಗ್ಗುದಾದ ಚಿತ್ರದ ಚಿತ್ರೀಕರಣ ಈಗಾಗಲೇ ಶೇ.75 ರಷ್ಟು ಪೂರ್ಣಗೊಂಡಿದ್ದು, ಚಿತ್ರದ ತಂಡ ಇದೀಗ ಹಾಡೊಂದರ ಚಿತ್ರೀಕರಣದಲ್ಲಿ ತೊಡಗಿದೆ. ಇದೀಗ ಶೂಟಿಂಗ್ ಮಾಡುತ್ತಿರುವ ಹಾಡು ಚಿತ್ರದಲ್ಲಿ ಸಾಕಷ್ಟು ವಿಶೇಷತೆಯನ್ನು ಹೊಂದಿದ್ದು, ಹಾಡಿನಲ್ಲಿ 450 ಕಿರಿಯ ಕಲಾವಿದರು, 110 ನೃತ್ಯಗಾರರು ಮತ್ತು 20 ಹಿರಿಯ ಮಹಿಳೆಯರು ಭಾಗಿಯಾಗಿದ್ದಾರೆಂದು ನಟ ದರ್ಶನ್ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.
ಚಿತ್ರದ ತಂಡ ಇದೀಗ ಚೆನ್ನೈನಿಂದ ನಗರದ ಪ್ಯಾಲೆಸ್ ಗ್ರೌಂಡ್ ಗೆ ಇಳಿದಿದ್ದು, ಇದೀಗ ಮದುವೆ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಎಂದು ಹೇಳಿದ್ದಾರೆ.
ಚಿತ್ರದ ನಿರ್ದೇಶಕ ರಾಘವೇಂದ್ರ ಹೆಗ್ಡೆ ಮಾತನಾಡಿ, ಚಿತ್ರದ ಎರಡನೇ ಹಾಡಿನ ಶೂಟಿಂಗ್ ನಡೆಯುತ್ತಿದ್ದು, ಚಿತ್ರದ ಹಾಡಿಗೆ ಶಿವರಾಜ್ ಕುಮಾರ್ ಅವರ ಪುತ್ರಿ ಮದುವೆಯಾದ ಸ್ಥಳದಲ್ಲೇ ಸೆಟ್ ಹಾಕಲಾಗಿದೆ. ಎಲ್ಲಾ ಚಿತ್ರದ ನಟರನ್ನು ಹಾಡಿನಲ್ಲಿ ತೋರಿಸುವ ಪ್ರಯತ್ನವನ್ನು ಮಾಡಲಾಗಿದೆ. ಹಾಡನ್ನು ವಿ ಹರಿಕೃಷ್ಣ ಅವರು ಸಂಯೋಜನೆ ಮಾಡಿದ್ದು, ಚಿತ್ರೀಕರಣ ಒಂದು ವಾರ ನಡೆಯಲಿದೆ.
ಚಿತ್ರದಲ್ಲಿ ಮತ್ತಷ್ಟು ಹಾಡುಗಳಿದ್ದು, ಉಳಿದ ಹಾಡಿನ ಚಿತ್ರೀಕರಣ ಇಟಲಿಯಲ್ಲಿ ಮಾಡಲಾಗುತ್ತದೆ. ಚಿತ್ರೀಕರಣಕ್ಕೆ ಈಗಾಲೇ ಪರಿಪೂರ್ಣ ಸ್ಥಳವನ್ನು ಆಯ್ಕೆ ಮಾಡಲಾಗಿದ್ದು, ಮಾರ್ಚ್ 25 ರ ನಂತರ ಅಲ್ಲಿ ಚಿತ್ರೀಕರಣವನ್ನು ಮಾಡಲಾಗುತ್ತದೆ.ಇದಕ್ಕೂ ಮುನ್ನು ಚಿತ್ರದ ಅಂತಿಮ ದೃಶ್ಯವನ್ನು ಚಿತ್ರೀಕರಿಸಲಾಗುತ್ತದೆ. ಚಿತ್ರೀಕರಣ ಅಂದುಕೊಂಡಂತೆ ಆಗುತ್ತಿದ್ದು, 67 ದಿನಗಳ ಕಾಲ ಚಿತ್ರೀಕರಣವನ್ನು ಮಾಡಲಾಗಿದೆ. 95 ದಿನಗಳೊಳಗಾಗಿ ಚಿತ್ರದ ಚಿತ್ರೀಕರಣ ಸಂಪೂರ್ಣಗೊಳ್ಳಲಿದೆ ಎಂದು ನಂಬಿದ್ದೇನೆಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ