
ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದ 'ಚಾರ್‍ಮಿನಾರ್' ಚಿತ್ರ ತೆಲುಗಿಗೆ ರಿಮೇಕ್ ಆಗಿದ್ದು ಎಲ್ಲರಿಗೂ ಗೊತ್ತಿದೆ. ಈ ಚಿತ್ರವನ್ನು ತೆಲುಗಿನಲ್ಲೂ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಹೆಸರಿನಲ್ಲಿ ಆರ್ ಚಂದ್ರು ಅವರೇ ನಿರ್ದೇಶಿಸಿದ್ದು, ಸುದೀಪ್ ಬಾಬು, ನಂದಿತಾ ಜೋಡಿಯಾಗಿ ಅಭಿನಯಿಸಿದ್ದರು. ಕಳೆದ ವರ್ಷ ತೆಲುಗಿನಲ್ಲಿ ಮ್ಯೂಸಿಕಲ್ ಹಿಟ್ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಇದೇ ಸಿನಿಮಾ ಈಗ ಜೈಪುರ್ ಫಿಲ್ಮಿ ಫೆಸ್ಟಿವಲ್‍ನಲ್ಲಿ ಪ್ರಶಸ್ತಿಗೆ ಪಾತ್ರವಾಗಿದೆ. ಕಳೆದ ವರ್ಷ ನಡೆದ ಈ ಚಿತ್ರೋತ್ಸವದಲ್ಲಿ ನೂರಾರು ಸಿನಿಮಾಗಳು ಪ್ರದರ್ಶನಗೊಂಡಿದ್ದವು. ಮೂರು ವಿಭಾಗಗಳಲ್ಲಿ ನೂರಾರು ಚಿತ್ರಗಳು ಪಾಲ್ಗೊಂಡಿದ್ದವು. ಈ ಪೈಕಿ 'ಬೆಸ್ಟ್ ರೊಮ್ಯಾಂಟಿಕ್ ಫಿಲಂ' ವಿಭಾಗದಲ್ಲಿ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ. 'ನಾನು ಯಾವುದೇ ಪ್ರಶಸ್ತಿಯನ್ನು ನಿರೀಕ್ಷೆ ಮಾಡದೆ ಚಿತ್ರೋತ್ಸವಕ್ಕೆ ಚಿತ್ರವನ್ನು ಕಳುಹಿಸಿಕೊಟ್ಟೆ. ಆದರೆ, ಬೇರೆ ಬೇರೆ ದೇಶಗಳ ದೊಡ್ಡ ನಿರ್ದೇಶಕರ ಚಿತ್ರಗಳ ಸಾಲಿನಲ್ಲಿ ಕನ್ನಡದ ನಿರ್ದೇಶಕನ ಚಿತ್ರಕ್ಕೆ ಅವಾರ್ಡ್ ಬಂದಿರುವುದು ಕನ್ನಡಿಗನಾಗಿ ಹೆಮ್ಮೆ ಪಟ್ಟುಕೊಳ್ಳುತ್ತೇನೆ. ಈ ಪ್ರಶಸ್ತಿ ನನ್ನ ಚಿತ್ರಕ್ಕೆ ಬಂದಿರುವುದು ಮತ್ತಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡುವುದಕ್ಕೆ ಸಾಧ್ಯವಾಗಿಸಿದೆ' ಎನ್ನುತ್ತಾರೆ ಚಂದ್ರು. ಸದ್ಯ ಪ್ರಶಸ್ತಿ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಚಿತ್ರತಂಡದ ಗೆಳೆಯರು ಆರ್ ಚಂದ್ರು ಅವರನ್ನು ಹೈದರಾಬಾದ್‍ಗೆ ಆಹ್ವಾನಿಸಿದ್ದಾರೆ. ತೆಲುಗು ಚಿತ್ರರಂಗದ ಹಲವು ಗಣ್ಯರ ಸಮ್ಮುಖದಲ್ಲಿ ಚಂದ್ರು ಅವರನ್ನು ಸನ್ಮಾನಿಸಲಾಗುತ್ತಿದೆ.
Advertisement