
ಹೈದರಾಬಾದ್: ಟಾಲಿವುಡ್ ನಟ ಜ್ಯೂನಿಯರ್ ಎನ್'ಟಿಆರ್ ಅವರ 25ನೇ ಚಿತ್ರವಾಗಿರುವ ನಾನ್ನಕು ಪ್ರೇಮತೊ ಚಿತ್ರ ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ನಟ ಪವನ್ ಕಲ್ಯಾಣ್ ಅವರು ಚಿತ್ರದ ನಿರ್ಮಾಪನ ವಿರುದ್ಧ ದೂರು ದಾಖಲಿಸಿದ್ದಾರೆ.
ನಾನ್ನಕು ಪ್ರೇಮತೋ ಚಿತ್ರದ ನಿರ್ಮಾಪಕ ಬಿವಿಎಸ್ಎನ್ ಪ್ರಸಾದ್ ವಿರುದ್ಧ ಪವನ್ ಕಲ್ಯಾಣ್ ಅವರು ಪ್ರಕರಣ ದಾಖಲಿಸಿದ್ದಾರೆಂದು ಹೇಳಲಾಗುತ್ತಿದೆ. ದೂರಿಗೆ ಇಬ್ಬರ ನಡುವಿನ ಆರ್ಥಿಕ ವ್ಯವಹಾರವೇ ಕಾರಣ ಎಂದು ತಿಳಿದುಬಂದಿದೆ.
ಈ ಹಿಂದೆ ಪ್ರಸಾದ್ ನಿರ್ಮಾಣದ ಅತ್ತಾರಿಂಟಿಕಿ ದಾರೇದಿ ಚಿತ್ರದಲ್ಲಿ ನಟಿಸಿದ್ದ ಪವನ್ ಕಲ್ಯಾಣ್ ಅವರಿಗೆ ಸಂಪೂರ್ಣ ಸಂಭಾವನೆಯನ್ನು ನಿರ್ಮಾಪಕ ನೀಡಿಲ್ಲ ಎಂದು ಹೇಳಲಾಗುತ್ತಿತ್ತು. ಇದೀಗ ಸಂಭಾವನೆ ಕುರಿತಂತೆ ಪವನ್ ಕಲ್ಯಾಣ್ ಅವರು ಪ್ರಸಾದ್ ವಿರುದ್ಧ ದೂರು ದಾಖಲಿಸಿದ್ದು, ಒಪ್ಪಂದದ ಪ್ರಕಾರ ಪ್ರಸಾದ್ ಅವರು ನನಗೆ ಇನ್ನು 2 ಕೋಟಿ ರುಪಾಯಿಗಳಷ್ಟು ಹಣವನ್ನು ನೀಡಬೇಕಿತ್ತು. ನಾನ್ನಕು ಪ್ರೇಮತೋ ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನವೇ ಹಣ ನೀಡುವುದಾಗಿ ಹೇಳಿದ್ದರು. ಆದರೆ ಈ ವರೆಗೂ ಹಣವನ್ನು ನೀಡಿಲ್ಲ ಎಂದು ದೂರಿನಲ್ಲಿ ಹೇಳಿದ್ದಾರೆ.
2013ರಲ್ಲಿ ತೆರೆಕಂಡಿದ್ದ ಪವರ್ ಸ್ಟಾರ್ ಪವನ್ ಕಲ್ಯಾಣ್ ಹಾಗೂ ಸಮಂತಾ ಅಭಿನಯದ 'ಅತ್ತಾರಿಂಟಿಕಿ ದಾರೇದಿ' ಚಿತ್ರ ಟಾಲಿವುಡ್ ನಲ್ಲಿ ಬ್ಲಾಕ್ ಬಸ್ಟರ್ ಚಿತ್ರವಾಗಿತ್ತು. ಅಲ್ಲದೇ, 75 ಕೋಟಿಗೂ ಹೆಚ್ಚು ಹಣವನ್ನು ಬಾಚಿಕೊಂಡಿತ್ತು.
Advertisement