

ವಿರಾಟ್ ಚಿತ್ರ ಬಿಡುಗಡೆಯ ವಿಷಯದಲ್ಲಿ ನಟ ದರ್ಶನ್ ಹಾಗೂ `ವಿರಾಟ್' ಚಿತ್ರದ ನಿರ್ಮಾಪಕ ಸಿ.ಕಲ್ಯಾಣ್ ನಡುವೆ ಸಣ್ಣ ಕ್ಲ್ಯಾಶ್ ಆಗಿದೆಯಾ ಎಂಬ ಅನುಮಾನ ಮೂಡುತ್ತಿದೆ.
ದರ್ಶನ್ ತಮ್ಮ ಫೇಸ್ಬುಕ್ ಅಕೌಂಟ್ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ. 'ವಿರಾಟ್' ಚಿತ್ರ ಈ ಜನವರಿಯಲ್ಲಿ ಬಿಡುಗಡೆಯಾಗುವುದು ಇಷ್ಟವಿಲ್ಲ ಎಂದು ಹೇಳಿಕೊಂಡಿದ್ದಾರೆ. ದರ್ಶನ್ ಹಾಗೆ ಹೇಳುವುದಕ್ಕೂ ಕಾರಣವಿದೆ. 'ವಿರಾಟ್' ಚಿತ್ರ ಶುರುವಾಗಿದ್ದು ಮೂರು ವರ್ಷಗಳ ಹಿಂದೆ. ಹೀಗಿರುವಾಗ ಅದನ್ನು ಇನ್ನೂ ಸ್ವಲ್ಪ ತಡ ಮಾಡಿ ಬಿಡುಗಡೆ ಮಾಡಿದರೆ ಅದರಿಂದ ಯಾರಿಗೂ ನಷ್ಟವಿಲ್ಲ. ಆದರೆ, ನಿರ್ಮಾಪಕ ಸಿ. ಕಲ್ಯಾಣ್ ಮಾತ್ರ ಚಿತ್ರವನ್ನು ಜನವರಿ 22 ಅಥವಾ 29ಕ್ಕೆ ಬಿಡುಗಡೆ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ.
ಹಾಗೇನಾದರೂ `ವಿರಾಟ್' ಬಿಡುಗಡೆಯಾದರೆ, ಅದರಿಂದ ಸಾಕಷ್ಟು ಕನ್ನಡ ಚಿತ್ರಗಳಿಗೆ ತೊಂದರೆಯಾಗುತ್ತದೆ ಎಂಬುದು ದರ್ಶನ್ ಅವರ ವಾದ. ಅದು ಸರಿಯೂ ಹೌದು. ಏಕೆಂದರೆ, ಹಲವು ಚಿತ್ರಗಳು ಜನವರಿಯಲ್ಲಿ ಬಿಡುಗಡೆಯಾಗುವುದಕ್ಕೆ ಸಿದ್ಧತೆ ನಡೆಸಿವೆ.
'ವಿರಾಟ್' ಬಿಡುಗಡೆಯಾಗುವುದರಿಂದ ಅವೆಲ್ಲಕ್ಕೂ ಸಮಸ್ಯೆ ಆಗಲಿವೆ. ಹಾಗಾಗಿ ಈಗಲೇ ಚಿತ್ರ ಬಿಡುಗಡೆ ಬೇಡ ಎನ್ನುತ್ತಿದ್ದಾರೆ ದರ್ಶನ್. ಅಷ್ಟೇ ಅಲ್ಲ, 'ವಿರಾಟ್' ಚಿತ್ರದ ಚಿತ್ರೀಕರಣ ಇನ್ನೂ ಮುಗಿದಿಲ್ಲ. ಮೂರು ದಿನಗಳ ಚಿತ್ರೀಕರಣ ಬಾಕಿ ಇರುವುದರಿಂದ ತರಾತುರಿಯಲ್ಲಿ ಚಿತ್ರ ಬಿಡುಗಡೆ ಮಾಡುವ ಅವಶ್ಯಕತೆ ಇಲ್ಲ ಎಂದು ದರ್ಶನ್ ಹೇಳಿದ್ದಾರೆ.