ಕನ್ನಡ ಸಿನೆಮಾಗಳ ರದ್ದು

ಪರಭಾಷೆಯ ಚಿತ್ರಗಳ ಹಾವಳಿಯಿಂದ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ ಎಂದು ಸುದ್ದಿಯಾದ ಬೆನ್ನಲ್ಲೇ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ತೋರುತ್ತಿರುವ ಕನ್ನಡ ವಿರೋಧಿ ನೀತಿ ಖಂಡಿಸಿ ನಿರ್ದೇಶಕ ಕವಿರಾಜ್ ನೇತೃತ್ವದಲ್ಲಿ ಕನ್ನಡ ಸಿನಿ ಪ್ರಿಯರು...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)

ಬೆಂಗಳೂರು: ಪರಭಾಷೆಯ ಚಿತ್ರಗಳ ಹಾವಳಿಯಿಂದ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ ಎಂದು ಸುದ್ದಿಯಾದ ಬೆನ್ನಲ್ಲೇ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ತೋರುತ್ತಿರುವ ಕನ್ನಡ ವಿರೋಧಿ ನೀತಿ ಖಂಡಿಸಿ ನಿರ್ದೇಶಕ ಕವಿರಾಜ್ ನೇತೃತ್ವದಲ್ಲಿ ಕನ್ನಡ ಸಿನಿ ಪ್ರಿಯರು ಗುರುವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದಾರೆ.

ರಾಜ್ಯದಲ್ಲಿ ಪರಭಾಷೆ ಚಿತ್ರಗಳಿಗೆ ರತ್ನಗಂಬಳಿ ಹಾಸಿರುವ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು, ಕಲೆಕ್ಷನ್ ಉತ್ತಮವಾಗಿರುವ `ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಪ್ರದರ್ಶನವನ್ನು ಏಕಾಏಕಿ ರದ್ದು ಮಾಡುತ್ತಿವೆ. ಸಿನಿಮಾ ನೋಡಲು ಬಂದ ಪ್ರೇಕ್ಷಕರನ್ನು ಬಲವಂತವಾಗಿ ವಾಪಸು ಕಳುಹಿಸಲಾಗಿದೆ ಎಂಬುದು ಚಿತ್ರದ ನಿರ್ದೇಶಕರೂ ಆಗಿರುವ ಕವಿರಾಜ್ ಆರೋಪ. ಒರಾಯನ್ ಮಾಲ್ ನ ಪಿವಿಆರ್‍ನಲ್ಲಿ ಬುಧವಾರ ರಾತ್ರಿ 9.55ಕ್ಕೆ `ಮದುವೆಯ ಮಮತೆಯ ಕರೆಯೋಲೆ' ಪ್ರದರ್ಶನವಿತ್ತು. ಈ ಪ್ರದರ್ಶನಕ್ಕೆ ಶೇ.80 ಭಾಗ ಟಿಕೆಟ್ ವಿತರಣೆಯೂ ಆಗಿತ್ತು. ಆದರೆ, ಇದಕ್ಕಿದ್ದಂತೆ ತಾಂತ್ರಿಕ ನೆಪವೊಡ್ಡಿ ಚಿತ್ರದ ಪ್ರದರ್ಶನ ರದ್ದು ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಪ್ರೇಕ್ಷಕರನ್ನು ಪಿವಿಆರ್ ಸಿನಿಮಾಸ್‍ನವರು ಪೊಲೀಸರ ನೆರವಿನಿಂದ ಹೊರದೂಡಿದ್ದಾರೆ ಎಂಬುದು ಪ್ರತಿಭಟನಕಾರರ ಆಕ್ರೋಶ.

ಈ ವಿಷಯ ಚಿತ್ರತಂಡದ ಗಮನಕ್ಕೆ ಬಂದ ಕೂಡಲೇ ಒರಾಯನ್ ಮಾಲ್‍ಗೆ ನಿರ್ದೇಶಕ ಕವಿರಾಜ್ ತಂಡ ಧಾವಿಸಿತು. ಪರಭಾಷಾ ಚಿತ್ರಗಳಿಗೆ ಸ್ಕ್ರೀನ್ ಬಿಟ್ಟು ಕೊಡುವ ಹುನ್ನಾರದಿಂದ ಶೇ.80 ಟಿಕೆಟ್ ಮಾರಾಟವಾಗಿದ್ದರೂ `ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಪ್ರದರ್ಶನ ರದ್ದು ಮಾಡಿದ್ದಾರೆಂಬ ವಿಷಯಗೊತ್ತಾಗಿದೆ. ಈ ಬಗ್ಗೆ ಪಿವಿಆರ್‍ನವರನ್ನು ಚಿತ್ರತಂಡ ತರಾಟೆಗೆ ತೆಗೆದುಕೊಂಡ ಮೇಲೆ ಕ್ಷಮೆ ಕೇಳಿ, ಸಿನಿಮಾ ನೋಡಲು ಬಂದ ಪ್ರೇಕ್ಷಕರಿಗೆ ಹೆಚ್ಚುವರಿ ಹಣ ನೀಡುವುದಾಗಿ ಸಮಜಾಯಿಷಿ ನೀಡಿದ್ದಾರೆ ಎನ್ನಲಾಗಿದೆ. ಪಿವಿಆರ್ ಸಿನಿಮಾಸ್‍ನವರ ಈ ಕನ್ನಡ ಸಿನಿಮಾ ವಿರೋಧಿ ಧೋರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಚಿತ್ರತಂಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರನ್ನು ಒತ್ತಾಯಿಸಿದೆ.

ಜ.15ಕ್ಕೆ ಕನ್ನಡ ಸೇರಿದಂತೆ ಇತರೆ ಭಾಷೆಯ ಒಟ್ಟು 20 ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇದರಿಂದ ಈಗಾ- ಗಲೇ ನಾಲ್ಕು ಕನ್ನಡ ಸಿನಿಮಾಗಳ ಪ್ರದರ್ಶನ ರದ್ದು ಮಾಡಲಾಗಿದೆ.

ಇನ್ನು ಪ್ರದರ್ಶನವಾಗುತ್ತಿರುವ ಕನ್ನಡ ಸಿನಿಮಾಗಳನ್ನು ಹೀಗೆ ಏಕಾಏಕಿ ಎತ್ತಂಗಡಿ ಮಾಡುತ್ತಿರುವುದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬುದನ್ನು ಎಚ್ಚರಿಸಲಾಗಿತ್ತು.. ಆದರೆ, ಕನ್ನಡ ಸಿನಿಮಾಗಳಿಗೆ ಥಿಯೇಟರ್‍ಗಳು ಸಿಗದ ಸಮಸ್ಯೆ ಬಗ್ಗೆ ಸಂಬಂಧಪಟ್ಟವರು ಯೋಚಿಸುತ್ತಿಲ್ಲ. ಹೀಗಾಗಿ ಚಿತ್ರೋದ್ಯಮದ ಅಂಗಸಂಸ್ಥೆಯ ಪ್ರಮುಖರು ಈ ಬಗ್ಗೆ ಗಮನ ಹರಿಸಬೇಕಿದೆ ಎನ್ನುವುದು ಕನ್ನಡ ಸಿನಿಮಾ ಪ್ರೇಕ್ಷಕರ ಒತ್ತಾಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com