
ಸಂಕ್ರಾಂತಿಯ ಶುಭ ಮುಹೂರ್ತಕ್ಕೆ ನಿರ್ಮಾಪಕರಾದ ಜಯಣ್ಣ ಮತ್ತು ಬೋಗೇಂದ್ರ ನಿರ್ಮಾಣದ ಎರಡು ಚಿತ್ರಗಳು ಮುಹೂರ್ತ ಕಂಡಿವೆ. ಬೆಂಗಳೂರಿನ ದೇವಾಲಯವೊಂದರಲ್ಲಿ ಚಿತ್ರಗಳಿಗೆ ನಟರಾದ ರವಿಚಂದ್ರನ್ ಮತ್ತು ಯಶ್ ಕ್ಲಾಪ್ ಹೊಡೆದರು. ಅದರಲ್ಲಿ ಒಂದು ಚಿತ್ರ ಯೋಗಿ ಬಿ.ರಾಜ್ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಮತ್ತು ಇನ್ನೊಂದು ರವಿಚಂದ್ರನ್ ಪುತ್ರ ಮನೋರಂಜನ್ ನ ಮೊದಲ ಚಿತ್ರ. ಅದಕ್ಕೆ ಸಾಹೇಬ ಎನ್ನುವ ಶೀರ್ಷಿಕೆಯಿಡುವ ಯೋಜನೆ ನಿರ್ದೇಶಕರದ್ದು. ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಕಂಠಿ ಚಿತ್ರದ ಖ್ಯಾತಿಯ ಭರತ್.
ಚಿತ್ರದ ಬಗ್ಗೆ ಸಂತೋಷದಿಂದ ಮಾತನಾಡಿದ ನಿರ್ಮಾಪಕ ಜಯಣ್ಣ, ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಬ್ಬರು ಪ್ರಮುಖ ನಟರಿಂದ ಎರಡು ಚಿತ್ರಗಳು ಒಟ್ಟಿಗೆ ಮುಹೂರ್ತ ಕಾಣುತ್ತಿವೆ. ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಹಾಗೂ ರವಿಚಂದ್ರನ್ ಪತ್ನಿ ಆರ್. ಸುಮತಿ ಕ್ಯಾಮರಾಗೆ ಚಾಲನೆ ನೀಡಿದರು.ಕ್ಯಾಮರಾಮೆನ್ ಸೀತಾರಾಮ್ ಗಳಿಗೆಯನ್ನು ಸೆರೆಹಿಡಿದರು.
ಮನೋರಂಜನ್ ಅಭಿನಯದ ಚಿತ್ರದ ಚಿತ್ರೀಕರಣ ನಾಡಿದ್ದು 18ರಿಂದ ಆರಂಭವಾಗಲಿದೆ. ಯೋಗಿಯವರ ಚಿತ್ರ ಫೆಬ್ರವರಿ ಕೊನೆ ವೇಳೆಗೆ ಶುರುವಾಗಲಿದೆ. ಚಿತ್ರಗಳಿಗೆ ಹೀರೋಯಿನ್ ಮತ್ತು ಪೋಷಕ ನಟರ ಆಯ್ಕೆ ಸದ್ಯದಲ್ಲಿಯೇ ನಡೆಯಲಿದೆಯಂತೆ.
ತನ್ನ ಮೊದಲ ಚಿತ್ರದ ಬಗ್ಗೆ ಕಾತರದಿಂದ ಮಾತನಾಡುವ ಮನೋರಂಜನ್, ಇದು ನನ್ನ ಜೀವನದಲ್ಲಿ ಹೊಸ ಪಯಣ. ನನ್ನ ಭವಿಷ್ಯ ಚೆನ್ನಾಗಿರುತ್ತದೆ ಎಂದು ಭಾವಿಸುತ್ತೇನೆ. ಇದುವರೆಗೆ ನನ್ನನ್ನು ಎಲ್ಲರೂ ಹರಸಿ ಹಾರೈಸಿದ್ದಾರೆ. ಚೆನ್ನಾಗಿ ಮಾಡು ಎಂದು ಹೇಳುವ ನನ್ನ ತಂದೆಯ ಮಾತುಗಳು ನನಗೆ ಪ್ರೇರಣೆ ನೀಡುತ್ತವೆ ಎನ್ನುತ್ತಾರೆ.
ವಿ.ಹರಿಕೃಷ್ಣನ್ ಎರಡೂ ಚಿತ್ರಗಳಿಗೆ ಸಂಗೀತ ನೀಡಿದರೆ ಸಾಹಸ ನಿರ್ದೇಶನ ರವಿ ವರ್ಮ ಅವರದ್ದು.
Advertisement