ಜಿಗರ್ ಥಂಡಕ್ಕೆ ಸುದೀಪ್ ತಾಂತ್ರಿಕ ಸ್ಪರ್ಶ

ನಟ ಸುದೀಪ್ ಅವರ ಪ್ರತಿಭೆ ನಟನೆಗೆ ಮಾತ್ರ ಸೀಮಿತವಾದದ್ದಲ್ಲ. ಅವರ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ನಡಿ ಎಸ್ ಆರ್...
ಜಿಗರ್ ಥಂಡ ಚಿತ್ರದ ದೃಶ್ಯವೊಂದರಲ್ಲಿ ನಾಯಕ ರಾಹುಲ್ ಮತ್ತು ನಾಯಕಿ ಸಂಯುಕ್ತಾ ಹೊರನಾಡು
ಜಿಗರ್ ಥಂಡ ಚಿತ್ರದ ದೃಶ್ಯವೊಂದರಲ್ಲಿ ನಾಯಕ ರಾಹುಲ್ ಮತ್ತು ನಾಯಕಿ ಸಂಯುಕ್ತಾ ಹೊರನಾಡು

ಬೆಂಗಳೂರು: ನಟ ಸುದೀಪ್ ಅವರ ಪ್ರತಿಭೆ ನಟನೆಗೆ ಮಾತ್ರ ಸೀಮಿತವಾದದ್ದಲ್ಲ. ಅವರ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ನಡಿ ಎಸ್ ಆರ್ ವಿ ಪ್ರೊಡಕ್ಷನ್ಸ್ ನಡಿ ತಯಾರಾದ ಚಿತ್ರ ಜಿಗರ್ ಥಂಡಕ್ಕೆ 18 ದಿನ ಅವರೇ ಸ್ವತಃ ಕುಳಿತು ಎಡಿಟ್ ಮಾಡಿದ್ದಾರಂತೆ.

ಈ ಕುರಿತು ಚಿತ್ರದ ನಾಯಕ ರಾಹುಲ್ ಸೋಲಂಕಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿ, ಸುದೀಪ್ ಅವರು ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆಯೂ ಈ ಚಿತ್ರದ ಎಡಿಟಿಂಗ್ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಹೇಳಿದ್ದಾರೆ.

ಚಿತ್ರದ ಶೂಟಿಂಗ್ ಆರಂಭದಿಂದಲೂ ದಿನನಿತ್ಯದ ಚಟುವಟಿಕೆ ಬಗ್ಗೆ ಸುದೀಪ್ ಅವರು ಗಮನ ಹರಿಸುತ್ತಿದ್ದರು, ಜಿಗರ್ ಥಂಡ ಸೆಟ್ ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದರು. ಸಂಪೂರ್ಣ ಚಿತ್ರ ವೀಕ್ಷಿಸಿದಾಗ ಅವರು ಎಡಿಟಿಂಗ್ ವಿಭಾಗದ ಕೆಲಸವನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಿದರು. ಚಿತ್ರದಲ್ಲಿ ನನ್ನ ಮತ್ತು ರವಿಶಂಕರ್ ಅವರ ಅಭಿನಯವನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ ಎಂದು ಖುಷಿಯಿಂದ ಹೇಳುತ್ತಾರೆ.

ಇದು ರವಿಶಂಕರ್ ಅವರ 50ನೇ ಚಿತ್ರವಾದರೆ ನಾಯಕ ರಾಹುಲ್ ಗೆ ಕಮ್ ಬ್ಯಾಕ್ ಮೂವಿ. ಚಿಕ್ಕಣ್ಣ, ಸಾಧುಕೋಕಿಲ ನಟನೆ ಚಿತ್ರದ ಹೈಲೈಟು. ರಕ್ಷಿತ್ ಶೆಟ್ಟಿ ಅತಿಥಿ ಕಲಾವಿದನಾಗಿ ನಟಿಸಿದ್ದಾರೆ. ನನ್ನ ಮೇಲೆ ನಂಬಿಕೆಯಿಟ್ಟು ಸುದೀಪ್ ಅವರು ಈ ಪಾತ್ರ ಕೊಟ್ಟಿದ್ದಾರೆ. ಚೆನ್ನಾಗಿ ಅಭಿನಯಿಸಿದ್ದೇನೆ ಎನ್ನುವ ನಂಬಿಕೆಯಿದೆ ಎಂದರು ರಾಹುಲ್.

ತಾಂತ್ರಿಕವಾಗಿ ಜಿಗರ್ ಥಂಡ ಚಿತ್ರದಲ್ಲಿ ದುಬಾರಿ ಲೆನ್ಸ್ ಗಳನ್ನು ಬಳಸಲಾಗಿದೆ. ಅತ್ಯಾಧುನಿಕ ಎಫ್ 65 ಕ್ಯಾಮರಾ ಬಳಸಲಾಗಿದ್ದು, ಕ್ಲಾಸ್, ಮಾಸ್ ಮತ್ತು ಕುಟುಂಬ ವರ್ಗದವರನ್ನು ಸೆಳೆಯುವ ಚಿತ್ರವಾಗಲಿದೆ. ಸ್ಯಾಂಡಲ್ ವುಡ್ ನಲ್ಲಿ 4 ಕೆ ತಂತ್ರಜ್ಞಾನ ಬಳಸಿ ತಯಾರಿಸಿದ ಅಪರೂಪದ ಚಿತ್ರವಾಗಿದ್ದು, ವಿದೇಶ ತಂತ್ರಜ್ಞಾನ ಬಳಸಿ ಸಂಗೀತ ಸಂಯೋಜಿಸಲಾಗಿದೆಯಂತೆ. ಹುಬ್ಬಳ್ಳಿ, ಮೈಸೂರು, ಧಾರವಾಡ ಮತ್ತು ಬೆಂಗಳೂರಿನಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆ. ಚೆನ್ನೈ ಮೂಲದ ಶಿವಾನ್ ನಿರ್ದೇಶಕರಾಗಿದ್ದು, ಜೈ ಆನಂದ್ ಛಾಯಾಗ್ರಹಣ ಮಾಡಿದ್ದಾರೆ.

ಸೆನ್ಸಾರ್ ಮಂಡಳಿಯಿಂದ ಯು/ಇ ಸರ್ಟಿಫಿಕೇಟ್ ಪಡೆದಿರುವ ಜಿಗರ್ ಥಂಡ ಇದೇ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com