
ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಚಿತ್ರ ನಟಿ ದೀಪಾ ಸನ್ನಿಧಿ ಹಾಗೂ ಸೃಜನ್ ಲೋಕೇಶ್ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಮೊದಲ ಹಂತದಲ್ಲಿ ನಟಿ ದೀಪಾ ಸನ್ನಿಧಿ ಹಾಗೂ ಸೃಜನ್ ಲೋಕೇಶ್ ರೊಂದಿಗೆ ಮೈಸೂರಿನಲ್ಲಿ ಚಿತ್ರೀಕರಣ ಆರಂಭಿಸಿರುವ ಚಿತ್ರದ ತಂಡ, ಇದೀಗ ಚಿತ್ರದಲ್ಲಿ ದೀಪಾ ಸನ್ನಿಧಿಯವರ ಪಾತ್ರದ ಮೊದಲ ನೋಟವನ್ನು ಬಿಡುಗಡೆ ಮಾಡಿದೆ. ಚಿತ್ರ ತಂಡ ಬಿಡುಗಡೆ ಮಾಡಿರುವ ಚಿತ್ರದಲ್ಲಿ ದೀಪಾ ಸನ್ನಿಧಿಯವರ ಪಾತ್ರ ಗೃಹಿಣಿ ಪಾತ್ರದಲ್ಲಿರುವಂತೆ ತೋರುತ್ತಿದ್ದು, ಚಿತ್ರದಲ್ಲಿ ದೀಪಾ ಅವರು ಶಾಂತಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ.
ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತಂತೆ ಮಾತನಾಡಿರುವ ದೀಪಾ, ಇದೊಂದು ಹೊಸ ಕಥೆಯಾಗಿದೆ. ಭೂಗತ ಹಿನ್ನೆಲೆಯಿರುವ ಮನೆಯಲ್ಲಿ ಶಾಂತಿ ತರುವ ಪಾತ್ರ ಇದಾಗಿದೆ. ಚಿತ್ರದಲ್ಲಿ ಯಾವುದೇ ರೀತಿಯ ರೊಮಾನ್ಸ್ ಇಲ್ಲ. ಇದೊಂದು ಹೊಸ ಪಾತ್ರವಾಗಿದ್ದು, ದರ್ಶನ್ ಅವರಿಗೂ ಇದೊಂದು ಹೊಸ ಪಾತ್ರವಾಗಿದೆ ಎಂದು ಕೊಂಡಿದ್ದೇನೆಂದು ಹೇಳಿದ್ದಾರೆ.
ಚಿತ್ರದಲ್ಲಿ ದರ್ಶನ್ ಅವರೊಂದಿಗೆ ನಿರ್ಣಾಯಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಪಾತ್ರ ಭಾವನಾತ್ಮಕವಾಗಿದ್ದು, ಇದೇ ನನ್ನಲ್ಲಿರುವ ಆಸಕ್ತಿಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಚಕ್ರವರ್ತಿಯಲ್ಲಿ ನನ್ನ ಪ್ರಯಾಣ ಆರಂಭವಾಗಿದ್ದು, ಇದು ಆರಂಭಿಕವಷ್ಟೇ ಎಂದು ಹೇಳಿದ್ದಾರೆ.
ಪ್ರಸ್ತುತ ಚಿತ್ರದ ತಂಡ ಹೈದರಾಬಾದ್ ನಲ್ಲಿ ಬೀಡುಬಿಟ್ಟಿದ್ದು, ಚಿತ್ರೀಕರಣಕ್ಕೆ ಉತ್ತಮ ತಾಣಗಳನ್ನು ಹುಡುಕುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಚಿತ್ರೀಕರಣಕ್ಕೆ ಉತ್ತಮ ತಾಣಗಳು ಸಿಗುತ್ತಿಲ್ಲ. ಎದುರಾಳಿ ಪಾತ್ರದಲ್ಲಿ ದಿನಕರ್ ಅವರು ನಟಿಸುತ್ತಿದ್ದು, ಆದಿತ್ಯ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಎರಡನೇ ಹಂತದ ಚಿತ್ರೀಕರಣವನ್ನು ಜುಲೈ ತಿಂಗಳಿನಲ್ಲಿ ಆರಂಭಿಸಲಾಗುತ್ತದೆ ಎಂದು ನಿರ್ದೇಶಕ ಚಿಂತನ್ ಅವರು ಹೇಳಿದ್ದಾರೆ.
Advertisement