'ಡಿ ಡಿ ಎಲ್ ಜೆ' ಇಂದಿಗೂ ಅತಿ ನೆಚ್ಚಿನ ಬಾಲಿವುಡ್ ಪ್ರೇಮಕಥೆ: ಸಮೀಕ್ಷೆ
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಮತ್ತು ಕಾಜೋಲ್ ಜೋಡಿಯ ಬಾಲಿವುಡ್ ಸಿನೆಮಾ 'ದಿಲ್ವಾಲೇ ದುಲ್ಹನಿಯಾ ಲೇ ಜಾಯೆಂಗೆ', ಸಮೀಕ್ಷೆಯೊಂದರ ಪ್ರಕಾರ ವಯಸ್ಸು ಮತ್ತು ಲಿಂಗಗಳನ್ನು ಮೀರಿ ಇಂದಿಗೂ ನಿತ್ಯ ಹಸಿರಿನ ಅತಿ ಹೆಚ್ಚಿನ ಜನಪ್ರಿಯ ಬಾಲಿವುಡ್ ಪ್ರೇಮಕಥೆಯ ಚಿತ್ರವಾಗಿ ಹೊರಹೊಮ್ಮಿದೆ.
ಅಂತರ್ಜಾಲ ಸಮೀಕ್ಷೆ ಮತ್ತು ಮಾರುಕಟ್ಟೆ ಸಂಶೋಧನೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಸೊಗೋಸರ್ವೇ ಮಾಡಿರುವ ಸಮೀಕ್ಷೆಯ ಪ್ರಕಾರ ಆದಿತ್ಯ ಚೋಪ್ರಾ ನಿರ್ದೇಶನದ, ರಾಜ್ (ಶಾರುಕ್ ಖಾನ್) ಮತ್ತು ಸಿಮ್ರಾನ್ (ಕಾಜೋಲ್) ಪಾತ್ರಗಳ ನಡುವಿನ ಬಾಲಿವುಡ್ ಪ್ರೇಮಕತೆ ವಿವಿಧ ವಯಸ್ಸಿನ ಜನರ ಮಧ್ಯೆ ಜನಪ್ರಿಯ ಸಿನೆಮಾ ಆಗಿ ಉಳಿದಿದೆ ಎಂದು ತಿಳಿಸಿದೆ.
ಮುಂಬೈ, ದೆಹಲಿ, ಪುಣೆ, ಕೋಲ್ಕತ್ತ, ಹೈದರಾಬಾದ್ ಮುಂತಾದ ನಗರಗಳಲ್ಲಿ ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಸುಮಾರು ೪೧೦೦ ಜನರಲ್ಲಿ ಶೇಕಡಾ ೪೭.೩೩ ಜನ 'ಡಿ ಡಿ ಎಲ್ ಜೆ' ಬಾಲಿವುಡ್ ನ ನಿತ್ಯ ಹಸಿರಿನ ಪ್ರೇಮ ಕಥೆ ಎಂದು ಆಯ್ಕೆ ಮಾಡಿದ್ದಾರೆ.
ಯುವಕರಷ್ಟೇ ಅಲ್ಲ ೩೬ ವಯಸ್ಸಿನ ಮೇಲ್ಪಟ್ಟ ವಯಸ್ಕರು ಕೂಡ ಈ ಸಿನೆಮಾವನ್ನು ಮೆಚ್ಚಿದ್ದಾರಂತೆ. ೩೬ ರಿಂದ ೫೦ ವಯಸ್ಸಿನ ಜನರಲ್ಲಿ ೬೨% 'ಡಿ ಡಿ ಎಲ್ ಜೆ' ಬಾಲಿವುಡ್ ನ ನಿತ್ಯ ಹಸಿರಿನ ಪ್ರೇಮ ಕಥೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಪಟ್ಟಿಯಲ್ಲಿ 'ಡಿ ಡಿ ಎಲ್ ಜೆ' ನಂತರದ ಸ್ಥಾನದಲ್ಲಿ ಆದಿತ್ಯ ರಾಯ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅವರ 'ಆಶಿಕಿ-೨' (ಶೇಕಡ ೧೪.೬೬), ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಟನೆಯ 'ಬಾಜಿರಾವ್ ಮಸ್ತಾನಿ' (೧೧.೯೯%), ಅರ್ಜುನ್ ಕಪೂರ್ ಮತ್ತು ಆಲಿಯಾ ಭಟ್ ಅವರ '೨ ಸ್ಟೇಟ್ಸ್' (೫.೮೪%), ಶಹೀದ್ ಕಪೂರ್ ಮತ್ತು ಕರೀನಾ ಕಪೂರ್ ಜೋಡಿಯ 'ಜಬ್ ವಿ ಮೆಟ್' (೫.೩೫%) ಹಾಗೂ ಶಾರುಕ್ ಖಾನ್ ಮತ್ತು ಪ್ರೀತಿ ಜಿಂಟಾ ನಟನೆಯ 'ವೀರ್ ಜರಾ' (೫.೦೮%) ಸಿನೆಮಾಗಳಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ