ರಜನಿಕಾಂತ್
ಸಿನಿಮಾ ಸುದ್ದಿ
ಹ್ಯಾಟ್ಸ್ ಆಫ್ ಮೋದಿಯವರೇ, ಹೊಸ ಭಾರತದ ಉದಯವಾಗಿದೆ: ರಜನಿಕಾಂತ್ ಮೆಚ್ಚುಗೆ
ಇನ್ನು ಮುಂದೆ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳು ಚಲಾವಣೆಗೆ ಇಲ್ಲ...
ವದೆಹಲಿ: ಇನ್ನು ಮುಂದೆ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳು ಚಲಾವಣೆಗೆ ಇಲ್ಲ ಎಂದು ಕಳೆದ ರಾತ್ರಿ ಘೋಷಿಸಿದ ಕೆಲವೇ ಹೊತ್ತಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶಾದ್ಯಂತ ವಿಜೃಂಭಿಸಿದರು. ದೇಶದಲ್ಲಿ ಭ್ರಷ್ಟಾಚಾರ, ನಕಲಿ ನೋಟುಗಳ ಹಾವಳಿ ಮತ್ತು ಕಪ್ಪು ಹಣವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ದಿಟ್ಟ ಕ್ರಮ ಎಂದು ಮೋದಿ ಭಾಷಣದಲ್ಲಿ ಹೇಳಿದರು.
ಪ್ರಧಾನಿಯವರ ಈ ಕ್ರಮವನ್ನು ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಖ್ಯಾತ ನಟ, ನಟಿಯರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಖ್ಯಾತ ನಟ ರಜನಿಕಾಂತ್ ಟ್ವೀಟ್ ಮಾಡಿ, ಹ್ಯಾಟ್ಸ್ ಆಫ್ ನರೇಂದ್ರ ಮೋದಿ ಜಿ. ಹೊಸ ಭಾರತದ ಉದಯವಾಗಿದೆ, ಜೈ ಹಿಂದ್ ಎಂದು ಬರೆದಿದ್ದಾರೆ.
ಇನ್ನು ಋಷಿ ಕಪೂರ್, ಮೋದಿಯವರೇ, ಬಾಲು ಸ್ಟೇಡಿಯಂ ಹೊರಗಿದೆ, ನೋಟು ಚಲಾವಣೆ ರದ್ದು ಮಾಡುವುದು ಸರಿಯಾದ ಉತ್ತರ, ಧನ್ಯವಾದಗಳು ಎಂದಿದ್ದಾರೆ.
ನಟಿ ಅನುಷ್ಕಾ ಶರ್ಮ ಟ್ವೀಟ್ ಮಾಡಿ, ಮೋದಿಯವರ ಈ ನಿರ್ಧಾರಕ್ಕೆ ಭಾರತೀಯರಾದ ನಾವೆಲ್ಲಾ ಸಹಕರಿಸಬೇಕು ಎಂದಿದ್ದಾರೆ.
ನಟ ಪ್ರಕಾಶ್ ರೈ ಟ್ವೀಟ್ ಮಾಡಿ, ಆತಂಕಪಡುವ ಅಗತ್ಯವಿಲ್ಲ, ನಿಮ್ಮ ಬಳಿ 500, 1000ದ ನೋಟು ಇದ್ದರೆ ಬ್ಯಾಂಕಿಗೆ ಹೋಗಿ ಬದಲಾಯಿಸಿಕೊಳ್ಳಿ, ಕಪ್ಪು ಹಣ ಇಟ್ಟುಕೊಂಡಿರುವವರಿಗೆ ಮಾತ್ರ ತೊಂದರೆಯಾಗುತ್ತದೆ.
ನಟ ಅರ್ಜುನ್ ಕಪೂರ್ ವಿಭಿನ್ನವಾಗಿ ಟ್ವೀಟ್ ಮಾಡಿದ್ದಾರೆ, ಕಪ್ಪು ಹಣದ ಹಾವಳಿಯನ್ನು ತಡೆಗಟ್ಟಲು ಉತ್ತಮ ನಿರ್ಧಾರವೇ, ಆದರೆ ಈ ಮಧ್ಯೆ ಮೂಲ ಸೌಕರ್ಯ ಮತ್ತು ಇತರ ವಿಷಯಗಳಿಗೂ ಪ್ರಾಮುಖ್ಯತೆ ಕೊಡಬೇಕು, ಪ್ರಧಾನಿಯವರ ಈ ಕ್ರಮ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದಿದ್ದಾರೆ.

