ವರನಟ ಡಾ.ರಾಜ್ ಕುಮಾರ್ ಅವರ ಆಸ್ತಿ ಮಕ್ಕಳಿಗೆ ಸಮಾನ ಹಂಚಿಕೆ?

ದಿವಂಗತ ವರನಟ ಡಾ.ರಾಜ್‍ಕುಮಾರ್ ಅವರ ಆಸ್ತಿ ಸೋಮವಾರ ಅಧಿಕೃತವಾಗಿ ವಿಭಜನೆಯಾಗಿದ್ದು, ಅವರ ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿಗೆ ಆಸ್ತಿಯನ್ನು ಸಮಾನವಾಗಿ ಹಂಚಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ರಾಜ್ ಕುಟುಂಬ (ಸಂಗ್ರಹ ಚಿತ್ರ)
ರಾಜ್ ಕುಟುಂಬ (ಸಂಗ್ರಹ ಚಿತ್ರ)

ಚಾಮರಾಜನಗರ: ದಿವಂಗತ ವರನಟ ಡಾ.ರಾಜ್‍ಕುಮಾರ್ ಅವರ ಆಸ್ತಿ ಸೋಮವಾರ ಅಧಿಕೃತವಾಗಿ ವಿಭಜನೆಯಾಗಿದ್ದು, ಅವರ ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿಗೆ  ಆಸ್ತಿಯನ್ನು ಸಮಾನವಾಗಿ ಹಂಚಿಕೆ ಮಾಡಲಾಗಿದೆ.

ಡಾ. ರಾಜ್ ಕುಮಾರ್ ಅವರ ಹುಟ್ಟೂರಾದ ಚಾಮರಾಜನಗರದಲ್ಲಿರುವ ಗಾಜನೂರಿನಲ್ಲಿರುವ ಐವತ್ತು ಎಕರೆಗೂ ಹೆಚ್ಚು ಆಸ್ತಿಯನ್ನು ನಿನ್ನೆ ಅಧಿಕೃತವಾಗಿ ಮಕ್ಕಳಿಗೆ ಹಂಚಿಕೆ ಮಾಡಲಾಗಿದೆ.  ರಾಜ್ ಕುಮಾರ್ ಅವರ ಪುತ್ರರಾದ ಡಾ.ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಸೇರಿದಂತೆ ರಾಜ್ ಕುಮಾರ್ ಅವರ ಇಬ್ಬರು ಪುತ್ರಿಯರಾದ  ಲಕ್ಷ್ಮೀ ಗೋವಿಂದರಾಜ್ ಮತ್ತು ಪೂರ್ಣಿಮಾ ರಾಮ್ ಕುಮಾರ್ ಅವರ ಹೆಸರಿಗೆ ಭಾಗ ಮಾಡಿಕೊಡಲಾಗಿದೆ ಎಂದು ತಿಳಿದುಬಂದಿದೆ.

ನಿನ್ನೆ ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಸೇರಿದಂತೆ ಇಡೀ ರಾಜ್ ಕುಟುಂಬ ಗಾಜನೂರಿನಲ್ಲಿ ಬೀಡುಬಿಟ್ಟಿತ್ತು. ರಾಜ್ ಕುಟುಂಬವನ್ನು  ನೋಡಲು ಸಾವಿರಾರು ಗ್ರಾಮಸ್ಥರು ರಿಜಿಸ್ಟ್ರಾರ್ ಕಚೇರಿ ಹಾಗೂ ರಾಜ್ ಮನೆಯ ಮುಂದೆ ನೆರೆದಿದ್ದರು.

ಆದರೆ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಾಜ್ ಪುತ್ರ ರಾಘವೇಂದ್ರ ರಾಜ್ ಕುಮಾರ್ ಅವರು, ಪೂಜೆಯೊಂದರಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಕುಟುಂಬಸ್ಥರೆಲ್ಲರೂ  ಗಾಜನೂರಿಗೆ ತೆರಳಿದ್ದೆವು. ಹಾಗೆಯೇ ಕುಟುಂಬದ ಆಸ್ತಿ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದೆವು ಅಷ್ಟೇ. ಆಸ್ತಿ ಭಾಗ ಮಾಡಿಕೊಂಡಿಲ್ಲ  ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com