ಮಕ್ಕಳ ಮೇಲೆ ನಿಂದನೆ ಆರೋಪ: ಬ್ರಾಡ್ ಪಿಟ್ ವಿರುದ್ಧ ತನಿಖೆ ಆರಂಭ

ಮಕ್ಕಳ ಜೊತೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ, ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ...
ಮಕ್ಕಳೊಂದಿಗೆ ಬ್ರಾಂಜೆಲಿನಾ ದಂಪತಿ(ಸಂಗ್ರಹ ಚಿತ್ರ)
ಮಕ್ಕಳೊಂದಿಗೆ ಬ್ರಾಂಜೆಲಿನಾ ದಂಪತಿ(ಸಂಗ್ರಹ ಚಿತ್ರ)
ಲಾಸ್ ಏಂಜಲೀಸ್: ಮಕ್ಕಳ ಜೊತೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ, ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಹಾಲಿವುಡ್ ನ ಜನಪ್ರಿಯ ತಾರೆ ಆಂಜಲಿನಾ ಜೂಲಿ ತನ್ನ ಪತಿ ಬ್ರಾಡ್ ಪಿಟ್ ನಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಸಂಯುಕ್ತ ತನಿಖಾ ದಳ(ಎಫ್ ಬಿಐ) ಬ್ರಾಡ್ ಪಿಟ್ ವಿರುದ್ಧ ತನಿಖೆ ಆರಂಭಿಸಿದೆ.
ಅಮೆರಿಕಾದ ಸೆಲೆಬ್ರಿಟಿ ವೆಬ್ ಸೈಟ್ ಟಿಎಂಜೆಡ್ ವರದಿ ಮಾಡಿರುವಂತೆ, ಪೊಲೀಸರು ಬ್ರಾಡ್ ಪಿಟ್ ವಿಚಾರಣೆಯನ್ನು ಆರಂಭಿಸಿದ್ದಾರೆ. ಈ ಬಗ್ಗೆ ತನಿಖಾ ದಳ ಕೂಡ ನಿನ್ನೆ ಈ ವಿಷಯವನ್ನು ಖಚಿತಪಡಿಸಿದೆ.
ಆದರೆ ತನಿಖೆಯ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದೆ. ಇನ್ನೊಂದೆಡೆ ಲಾಸ್ ಏಂಜಲೀಸ್ ಪೊಲೀಸ್ ಇಲಾಖೆ ಇದುವರೆಗೆ ಪಿಟ್ ವಿಚಾರಣೆ ನಡೆಸಿಲ್ಲ.
ಆಂಜಲಿನಾ-ಬ್ರಾಡ್ ಪಿಟ್ ಜೋಡಿಯ ವಿಚ್ಛೇದನ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದೆ. ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ದೈಹಿಕವಾಗಿ ಮತ್ತು ಮಾನಸಿಕವಾಗಿ ಮಕ್ಕಳಿಗೆ ನಿಂದನೆ ಮಾಡುತ್ತಾನೆ ಎಂದು ಆಂಜಲಿನಾ ಬ್ರಾಡ್ ಪಿಟ್ ಜೊತೆಗೆ ಸಂಬಂಧವನ್ನು ಮುರಿದುಕೊಳ್ಳಲು ನಿರ್ಧರಿಸಿದ್ದಳು.
41 ವರ್ಷದ ಆಂಜಲಿನಾ, 52 ವರ್ಷದ ಬ್ರಾಡ್ ಪಿಟ್ ನಿಂದ ವಿಚ್ಛೇದನ ಕೋರಿ ಮೊನ್ನೆ ಸೋಮವಾರ ಅರ್ಜಿ ಸಲ್ಲಿಸಿದ್ದರು. ತಮ್ಮ ನಡುವೆ ಸರಿ ಹೋಗದ ಭಿನ್ನಾಭಿಪ್ರಾಯಗಳಿದ್ದು 6 ಮಕ್ಕಳ ಪಾಲನೆಯನ್ನು ತನಗೆ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಹಾಲಿವುಡ್ ನಲ್ಲಿ ಬ್ರಾಂಜೆಲಿನಾ ಎಂದೇ ಜನಪ್ರಿಯರಾಗಿರುವ ಈ ಜೋಡಿಗೆ ಮೂವರು ಸ್ವಂತ ಮತ್ತು ಮೂವರು ದತ್ತು ಮಕ್ಕಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com