ಬಜೆಟ್ ಅಡೆತಡೆಗಳನ್ನು ಮೀರಿ ಮುನ್ನುಗ್ಗಿದ 'ಕೆಜಿಎಫ್'

ನಟ ಯಶ್ ತಮ್ಮ ಸಮಾಜ ಸೇವೆಯಲ್ಲಷ್ಟೇ 'ಯಶೋ ಮಾರ್ಗ'ದಲ್ಲಿರದೆ, ಅವರ ವೃತ್ತಿಜೀವನ ಕೂಡ ಅದೇ ಜಾಡಿನಲ್ಲಿದೆ. ಕನ್ನಡ ಚಿತ್ರರಂಗ ಸಣ್ಣ ಬಜೆಟ್ ಸಿನೆಮಾಗಳಲ್ಲಷ್ಟೇ ಕೆಲಸ ಮಾಡುತ್ತದೆ
ನಟ ಯಶ್
ನಟ ಯಶ್
ಬೆಂಗಳೂರು: ನಟ ಯಶ್ ತಮ್ಮ ಸಮಾಜ ಸೇವೆಯಲ್ಲಷ್ಟೇ 'ಯಶೋ ಮಾರ್ಗ'ದಲ್ಲಿರದೆ, ಅವರ ವೃತ್ತಿಜೀವನ ಕೂಡ ಅದೇ ಜಾಡಿನಲ್ಲಿದೆ. ಕನ್ನಡ ಚಿತ್ರರಂಗ ಸಣ್ಣ ಬಜೆಟ್ ಸಿನೆಮಾಗಳಲ್ಲಷ್ಟೇ ಕೆಲಸ ಮಾಡುತ್ತದೆ ಎಂಬ ಮಿಥ್ಯೆಯನ್ನು ಅವರ ಮುಂದಿನ ಚಿತ್ರ 'ಕೆಜಿಎಫ್' ಸುಳ್ಳಾಗಿಸಿದೆ. ಈ ಸಿನೆಮಾದ ಬಜೆಟ್ ೫೦ ಕೋಟಿ ಮೀರಿದೆ ಎನ್ನಲಾಗಿದೆ. 
೨೦೧೫ ರಲ್ಲಿ ಪ್ರಶಸ್ತಿ ಸಮಾರಂಭವೊಂದರಲ್ಲಿ ತಮ್ಮ ಸಿನೆಮಾ 'ಮಿ ಅಂಡ್ ಮಿಸಸ್ ರಾಮಾಚಾರಿ' ಬಗ್ಗೆ ಆಡಿದ್ದ ಮಾತುಗಳನ್ನು ನೆನಪಿಸಿಕೊಳ್ಳುವ ಯಶ್ "ಆಗ ನಾನು ಹೇಳಿದ್ದೆ, ನೋಡಿ ಕಣ್ಣ ಸಿನೆಮಾ ಕೂಡ ಎತ್ತರದ ಮಟ್ಟಕ್ಕೆ ಏರಲಿದೆ ಎಂದು. ಇದು ಆರಂಭ ಮಾತ್ರ. ಅದಕ್ಕೆ 'ಕೆಜಿಎಫ್' ಉದಾಹರಣೆಯಾಗಿ ನಿಲ್ಲಲಿದೆ" ಎನ್ನುತ್ತಾರೆ. 
ಈಗ ಯಶ್ 'ಕೆಜಿಎಫ್' ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ ಮತ್ತು ಇದು ೧೨ ದಿನಗಳವರೆಗೆ ನಡೆದಿದೆ. ಈಗ ಕೋಲಾರದಲ್ಲಿ ಬೃಹತ್ ಸೆಟ್ ಹಾಕಲಾಗಿದ್ದು ಅಲ್ಲಿ ಮುಂದಿನ ಹಂತದ ಚಿತ್ರೀಕರಣ ನಡೆಯಲಿದೆ. 
"ಎರಡೂವರೆ ವರ್ಷಗಳ ಹಿಂದೆ ಘೋಷಿತವಾದ ಈ ಸಿನೆಮಾ ಈಗ ಸಾಕಷ್ಟು ಬೆಳೆದಿದೆ" ಎನ್ನುವ ಯಶ್ "ಕನ್ನಡ ಚಿತ್ರರಂಗ ಅರಳಲು ದೊಡ್ಡ ಬಜೆಟ್ ಸಿನೆಮಾಗಳು ಸಹಕರಿಸಲಿವೆ. ಕನ್ನಡ ಚಿತ್ರರಂಗದ ಅತಿ ದೊಡ್ಡ ಬಜೆಟ್ ಚಿತ್ರ ೧೦-೧೫ ಕೋಟಿ ವೆಚ್ಚದಲ್ಲಿ ಸಂಪೂರ್ಣಗೊಳ್ಳುತ್ತಿದ್ದ ಕಾಲವಿತ್ತು. ಈಗ 'ಕೆಜಿಎಫ್' ಸಿನೆಮಾ ಬಜೆಟ್ ನಿರ್ಬಂಧ ಮೀರಿ ಬೆಳೆದಿದೆ ಮತ್ತು ಒಮ್ಮೆ ಸಿನೆಮಾ ಬಿಡುಗಡೆಯಾದಾಗ ಅದು ತಿಳಿಯಲಿದೆ" ಎನ್ನುತ್ತಾರೆ. 
ದೊಡ್ಡ ಬಜೆಟ್ ಸಿನೆಮಾ ಎಂದರೆ ಕೇವಲ ಹಣವಲ್ಲ ಎನ್ನುವ ಯಶ್ ಇದು ವಿನೂತನ ಸೃಜನಶೀಲ ಹೊಳಹುಗಳನ್ನು ಒಳಗೊಳ್ಳುವ ಪ್ರಕ್ರಿಯೆ ಎನ್ನುತ್ತಾರೆ. "ನಮ್ಮ ಸೃಜನಶೀಲತೆಯಿಂದ ಸಣ್ಣ ಬಜೆಟ್ ಸಿನೆಮಾಗಳನ್ನು ಮಾಡಿ ಕೂಡ ಅತಿ ಹೆಚ್ಚು ಲಾಭ ಗಳಿಸುತ್ತಿದ್ದೇವೆ. ದೊಡ್ಡ ಬಜೆಟ್ ಸಿನೆಮಾಗಳು ಮಾರುಕಟ್ಟೆ ವಿಸ್ತರಣೆಗೆ ಸಹಕರಿಸುತ್ತವೆ ಮತ್ತು ಅದರಿಂದ ಸಣ್ಣ ಬಜೆಟ್ ಸಿನೆಮಾಗಳಿಗೆ ಸಹಾಯ ಆಗಲಿದೆ. ಬೇರೆ ಭಾಷೆಯ ಸಿನೆಮಾಗಳ ಸವಾಲಿನ ನಡುವೆಯೂ ನಮ್ಮ ಚಿತ್ರರಂಗ ಪ್ರತಿರೋಧ ಒಡ್ಡಲು ಇದು ಸಹಕರಿಸುತ್ತದೆ" ಎನ್ನುತ್ತಾರೆ. 
ಪ್ರಶಾಂತ್ ನೀಲ್ ನಿರ್ದೇಶನದ ಈ ಮಹತ್ವಾಕಾಂಕ್ಷೆಯ ಚಿತ್ರದ ಕಾರ್ಯ ಮೂರು ವರ್ಷಗಳಿಂದ ಅವಿರತವಾಗಿ ನಡೆಯುತ್ತಿದೆ. "ಪ್ರಶಾಂತ್ ಗೆ ಬೇರೆ ಅವಕಾಶಗಳಿದ್ದರೂ ಅವನ್ನು ತೆಗೆದುಕೊಳ್ಳದೆ ನನಗಾಗಿ ಕಾದರು. ಅವರು ನನ್ನ ಒಳ್ಳೆಯ ಗೆಳೆಯ. ನಿರ್ದೇಶಕ ನಟನನ್ನು ಗೌರವಿಸಿದಾಗ ಕೆಲಸ ಚೆನ್ನಾಗಿ ಮೂಡಿ ಬರುತ್ತದೆ. ಚಿತ್ರತಂಡದೊಂದಿಗೆ ಅತ್ಯುತ್ತಮವಾದದ್ದನ್ನು ನೀಡಲು ನಾನು ಶ್ರಮವಹಿಸಿದ್ದೇನೆ" ಎನ್ನುತ್ತಾರೆ ಯಶ್.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com