ನಟ ಕಲಾಭವನ್ ಮಣಿ ನಿಗೂಢ ಸಾವು ಪ್ರಕರಣ: ಸಿಬಿಐ ತನಿಖೆಗೆ ಕೇರಳ 'ಹೈ' ಆದೇಶ

ನಟ ಕಲಾಭವನ್ ಮಣಿ ನಿಗೂಢ ಸಾವು ಪ್ರಕರಣವನ್ನು ಸಿಬಿಐ ತನಿಖೆ ನಡೆಸುವಂತೆ ಕೇರಳ ಹೈ ಕೋರ್ಟ್ ಬುಧವಾರ ಆದೇಶಿಸಿದೆ...
ನಟ ಕಲಾಭವನ್ ಮಣಿ
ನಟ ಕಲಾಭವನ್ ಮಣಿ
ಕೊಚ್ಚಿ: ನಟ ಕಲಾಭವನ್ ಮಣಿ ನಿಗೂಢ ಸಾವು ಪ್ರಕರಣವನ್ನು ಸಿಬಿಐ ತನಿಖೆ ನಡೆಸುವಂತೆ ಕೇರಳ ಹೈ ಕೋರ್ಟ್ ಬುಧವಾರ ಆದೇಶಿಸಿದೆ. 
ಕಲಾಭವನ್ ಮಣಿ ಅನುಮಾನಾಸ್ಪದ ಸಾವು ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿರುವ ಏಕಸದಸ್ಯ ಪೀಠ, ತಿಂಗಳೊಳಗಾಗಿ ಸಿಬಿಐ ತನಿಖೆ ಕೈಗೊಳ್ಳುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. 
ಕಲಾಭವನ್ ಅವರು ಮಲಯಾಳಂನ ಪ್ರತಿಭಾವಂತ ಕಲಾವಿದರಾಗಿದ್ದು, ತಮಿಳು, ಕನ್ನಡ ಸೇರಿದಂತೆ ಹಲವು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. 2016ರ ಮಾರ್ಚ್ 6 ರಂದು ಕಲಾಭವನ್ ಮಣಿಯವರು ನಿಗೂಢವಾಗಿ ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ ಸಾಕಷ್ಟು ಅನುಮಾನಗಳು ಮೂಡತೊಡಗಿದ್ದವು. 
ಪತಿಯ ಸಾವಿನ ಹಿಂದೆ ಸಾಕಷ್ಟು ನಿಗೂಢತೆಗಳಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಕೋರಿ ಕಲಾಭವನ್ ಮಣಿಯವರ ಪತ್ನಿ ಹಾಗೂ ಸಹೋದರ ಆರ್'ಎಲ್'ವಿ ರಾಮಕೃಷ್ಣನ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. 
ವಿಚಾರಣೆ ವೇಳೆ, ಈಗಾಗಲೇ ಸಾಕಷ್ಟು ಪ್ರಕರಣಗಳ ತನಿಖೆ ಪ್ರಗತಿಯಲ್ಲಿದ್ದು, ಕಲಾಭವನ್ ಮಣಿಯವರ ಪ್ರಕರಣವನ್ನು ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ. ರಾಜ್ಯ ಪೊಲೀಸರು ಸರಿಯಾದ ದಿಕ್ಕಿನಲ್ಲೇ ತನಿಖೆ ನಡೆಸುತ್ತಿದ್ದು. ಪ್ರಕರಣವನ್ನು ಸಿಬಿಐ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಎಂದು ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು. ಸಿಬಿಐ ಅಧಿಕಾರಿಗಳ ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯವು, ಪ್ರಕರಣವನ್ನು ತನಿಖೆ ನಡೆಸುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. 
ಕೆಲ ದಿನಗಳ ಹಿಂದಷ್ಟೇ ಕಲಾಭವನ್ ಮಣಿಯವರ ಮರಣೋತ್ತರ ಪರೀಕ್ಷಾ ವರದಿಯೊಂದು ಬಹಿರಂಗಗೊಂಡಿತ್ತು. ಕಲಾಭವನ್ ಅವರು ಅನಾರೋಗ್ಯದಿಂದಾಗಿ ಮೃತಪಟ್ಟಿಲ್ಲ. ಅವರ ದೇಹದಲ್ಲಿ ಅಪಾಯಕಾರಿ ಕೀಟನಾಶಕ ಇರುವುದಾಗಿ ತಿಳಿದುಬಂದಿತ್ತು. 
ಮಣಿ ಅವರ ಅಂಗಾಂಗಳ ಮಾದರಿಯನ್ನು ಕೇರಳದ ಕಕನಾಡುವಿನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪರೀಕ್ಷೆ ನಡೆಸಿದ ತಜ್ಞರು ಮಣಿಯವರ ದೇಹದಲ್ಲಿ ಅತ್ಯಂತ ಅಪಾಯಕಾರಿ ವಿಷ ಪತ್ತೆಯಾಗಿದೆ ಎಂದು ಹೇಳಿದ್ದರು. ಕ್ರೋರ್ ಪೈರಿಪೋಸ್ ಎಂಬ ಅತಿ ಅಪಾಯಕಾರಿ ಕೀಟನಾಶಕ ಮಣಿಯವರ ದೇಹದ ಅಂಗಗಳಲ್ಲಿ ಕಂಡುಬಂದಿದ್ದು, ಇದೇ ಕಾರಣಕ್ಕೆ ಅವರು ಮೃತಪಟ್ಟಿದ್ದರೆಂದು ವರದಿಗಳು ತಿಳಿಸಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com