ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

2017 ಕನ್ನಡ ಚಿತ್ರರಂಗದ ಏಳುಬೀಳು!

2017ರಲ್ಲಿ ಕನ್ನಡ ಚಿತ್ರರಂಗದಲ್ಲಿ ಏನೆಲ್ಲಾ ಆಯಿತು ಎಂದು ಸುಲಭವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ಚಿತ್ರರಂಗದಲ್ಲಿನ ಕೆಲ ಸಾಧಕ-ಬಾಧಕ, ಸೋಲು-ಗೆಲುವು ಆರೋಪ...
Published on
2017ರಲ್ಲಿ ಕನ್ನಡ ಚಿತ್ರರಂಗದಲ್ಲಿ ಏನೆಲ್ಲಾ ಆಯಿತು ಎಂದು ಸುಲಭವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ಚಿತ್ರರಂಗದಲ್ಲಿನ ಕೆಲ ಸಾಧಕ-ಬಾಧಕ, ಸೋಲು-ಗೆಲುವು ಆರೋಪ-ಪ್ರತ್ಯಾರೋಪ, ವಿವಾದಗಳು...ಇವೆಲ್ಲದರ ಮೇಲೆ ಸ್ವಲ್ಪ ಮಟ್ಟಿಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಲಾಗಿದೆ. 
ಕನ್ನಡದ ಚಿತ್ರರಂಗದಲ್ಲಿ ಶಿವರಾಜ್ ಕುಮಾರ್ ಅಭಿನಯದ ಶ್ರೀಕಂಠ ಮತ್ತು ರಮೇಶ್ ಅರವಿಂದ್ ನಟನೆಯ ಪುಷ್ಪಕ ವಿಮಾನ ಬಿಡುಗಡೆ ಮೂಲಕ 2017ರ ವರ್ಷ ಪ್ರಾರಂಭವಾಯಿತು. ಆದರೆ ಈ ಎರಡು ಚಿತ್ರಗಳು ಹೇಳಿಕೊಳ್ಳುವಂತಾ ಯಶಸ್ಸು ಗಳಿಸುವುದರಲ್ಲಿ ವಿಫಲವಾದವು. ನಂತರ ಬಂದ ಸಾಲು ಸಾಲು ಚಿತ್ರಗಳು ಸಹ ಗೆಲುವಿನ ಸೂಚನೆಗಳನ್ನು ನೀಡಲಿಲ್ಲ. ಈ ವೇಳೆ ಮಕಾಡೆ ಮಲಗಿದ್ದ ಚಿತ್ರರಂಗವನ್ನು ಬಡಿದೆಬ್ಬಿಸಿದ್ದು ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಚಿತ್ರ. ಈ ಚಿತ್ರ ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಮಾಡಿ ಕನ್ನಡ ಚಿತ್ರರಂಗ ಇತಿಹಾಸದಲ್ಲೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಖ್ಯಾತಿಗೆ ಭಾಜನವಾಯಿತು. ಇನ್ನು ಕಳೆದ ವರ್ಷ ಅಂತ್ಯದಲ್ಲಿ ಬಿಡುಗಡೆಯಾಗಿದ್ದ ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಸಹ 50 ಕೋಟಿ ಗಳಿಕೆ ಮಾಡಿತು. ಈ ಮೂಲಕ ಈ ಎರಡು ಚಿತ್ರಗಳು 2017ರ ಬ್ಲಾಕ್ ಬಸ್ಟರ್ ಚಿತ್ರಗಳು ಎಂಬ ಖ್ಯಾತಿ ಪಡೆದಿವೆ. ಆ ನಂತರ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾದ ಭರ್ಜರಿ ಚಿತ್ರ ಸಹ ಭರ್ಜರಿಯಾಗಿ ಕಲೆಕ್ಷನ್ ಮಾಡಿತು. ಇನ್ನು ಸುದೀಪ್ ಅಭಿನಯದ ಹೆಬ್ಬುಲಿ, ದರ್ಶನ್ ಅಭಿನಯದ ಚಕ್ರವರ್ತಿ, ಗಣೇಶ್ ಅಭಿನಯದ ಮುಗುಳುನಗೆ, ಪಟಾಕಿ ಸ್ವಲ್ಪ ಮಟ್ಟಿಗೆ ನಿರ್ಮಾಪಕರ ಜೇಬು ತುಂಬಿಸಿತು. 
ಈ ಮಧ್ಯೆ ಕೆಲ ಸಣ್ಣ ಬಜೆಟ್ ಚಿತ್ರಗಳು ಭಾರೀ ಸದ್ದು ಮಾಡಿದವು. ಆ ಸಾಲಿನಲ್ಲಿ ಶುದ್ಧಿ, ಒಂದು ಮೊಟ್ಟೆ ಕಥೆ, ಅಪರೇಷನ್ ಅಲಮೇಲಮ್ಮ ಚಿತ್ರಗಳು ಉತ್ತಮ ಪ್ರಶಂಸೆಗೆ ಪಾತ್ರವಾದವು. ಇನ್ನು ವರ್ಷಾಂತ್ಯದಲ್ಲಿ ಬಿಡುಗಡೆಯಾದ ಶ್ರೀಮುರಳಿ ಅಭಿನಯದ ಮಫ್ತಿ ಕೂಡ ಉತ್ತಮ ಕಲೆಕ್ಷನ್ ಮಾಡಿದ್ದು ಪುನೀತ್ ಅಭಿನಯದ ಅಂಜನಿಪುತ್ರ ಸಹ ಉತ್ತಮ ಪ್ರದರ್ಶನ ಕಾಣುತ್ತಿವೆ. ಇದೇ ವರ್ಷದಲ್ಲಿ ಕೆಲ ಚಿತ್ರಗಳು ಬಿಡುಗಡೆ ಸುದ್ದಿ ತಿಳಿಯುವಷ್ಟರಲ್ಲೇ ಚಿತ್ರಮಂದಿರಗಳಿಂದ ಎತ್ತಂಗಡಿಯಾಗಿದ್ದವು. ಸರ್ವಸ್ವ, ಸೈಕೋ ಶಂಕ್ರ, ನಿಶ್ಯಬ್ದ-2, ನುಗ್ಗೇಕಾಯಿ, ಒನ್ಸ್ ಮೋರ್ ಕೌರವ, ಜಾಲಿಬಾರು ಮತ್ತು ಪೋಲಿ ಹುಡುಗರು, ನನ್ನ ಮಗಳೇ ಹಿರೋಯಿನ್, ಸಿಲಿಕಾನ್ ಸಿಟಿ, ಹುಲಿರಾಯ, ಅಲ್ಲಮ. ಈ ವರ್ಷ ನೂರು ಸಂಖ್ಯೆಯಲ್ಲಿ ಚಿತ್ರಗಳು ಬಿಡುಗಡೆಯಾದರೂ ಗೆದ್ದಿದ್ದು ಮಾತ್ರ ಬೆರಳೆಣಿಕೆಯ ಚಿತ್ರಗಳು. 
ಡಬ್ಬಿಂಗ್ ಗುಮ್ಮ!
ಕನ್ನಡ ಚಿತ್ರರಂಗದಲ್ಲಿ ಈ ಬಾರಿ ರಿಮೇಕ್ ಚಿತ್ರಗಳ ಸಂಖ್ಯೆ ಕಡಿಮೆಯಾಗಿದ್ದವು. ಆದರೆ ಈ ಬಾರಿ ಪರಭಾಷೆಗಳಿಂದ ಕನ್ನಡಕ್ಕೆ ಡಬ್ ಆದ ಕೆಲವು ಚಿತ್ರಗಳು ಬಿಡುಗಡೆಯಾಗಿವೆ. ಮೊದಲಿಗೆ ತಮಿಳು ನಟ ಅಜಿತ್ ಅಬಿನಯದ ಎನ್ನೈ ಅರಿಂದನಾಲ್ ಕನ್ನಡದಲ್ಲಿ ಸತ್ಯದೇವ್ ಐಪಿಎಸ್ ಆಗಿ ಬಿಡುಗಡೆಯಾಯಿತು. ಈ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಆದರೆ ಚಿತ್ರ ಮಾತ್ರ ಬಂದಂತೆ ಮಾಯವಾಯಿತು. ಇದಾದ ನಂತರ ಹಾಲಿವುಡ್ ಚಿತ್ರ ಸ್ಪೈಡರ್ ಮ್ಯಾನ್ ಕನ್ನಡಕ್ಕೆ ಡಬ್ ಆಗುತ್ತದೆ ಎಂಬ ಸುದ್ದಿಯಾಗಿತ್ತು. ಕನ್ನಡದಲ್ಲೂ ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು. ಆದರೆ ಡಬ್ ಆದ ಚಿತ್ರ ಮಾತ್ರ ತೆರೆಗೆ ಬಂದಿಲ್ಲ. ನಂತರ ಮತ್ತೆ ಅಜಿತ್ ಅಭಿನಯದ ಆರಂಭಂ ಚಿತ್ರವು ಧೀರ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಡಬ್ ಆಗಿ ಬೆಂಗಳೂರಿನ ಹೊಸಕೆರೆಹಳ್ಳಿಯ ಕೋಕಿಲ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು. ಮತ್ತೇ ಹಾಲಿವುಡ್ನ ಫಾಸ್ಟ್ ಆ್ಯಂಡ್ ಫ್ಯೂರಿಯಸ್ 8 ಚಿತ್ರವು ವೇಗ ಮತ್ತು ಉದ್ವೇಗ ಹೆಸರಿನಲ್ಲಿ ಡಬ್ ಆಗಿ ಹುಬ್ಬಳ್ಳಿಯ ರೂಪಂ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು. ಆದರೆ ಚಿತ್ರಗಳನ್ನು ನೋಡವ ಪ್ರೇಕ್ಷಕರೇ ಇಲ್ಲದಂತಾಯಿತು. 
ಹೊಸ ಪಕ್ಷ ಕಟ್ಟಿ ಆಟೋ ಹತ್ತಿದ ರಿಯಲ್ ಸ್ಟಾರ್ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಬಹಳ ವರ್ಷಗಳ ಹಿಂದೆಯೇ ರಾಜಕೀಯಕ್ಕೆ ಬರುವ ಸೂಚನೆಯನ್ನು ಕೊಟ್ಟಿದ್ದರು. ಅದರಂತೆ ಕರ್ನಾಟಕ ಪ್ರಜ್ಞಾವಂತ ಜನತಾಪಕ್ಷ(ಕೆಪಿಜೆಪಿ) ಹೆಸರಿನಲ್ಲಿ ಹೊಸ ಪಕ್ಷವನ್ನು ಕಟ್ಟಿದ್ದಾರೆ. ಕನ್ನಡದಲ್ಲಿ ಯಾವೊಬ್ಬ ನಟ ಸಹ ಇದುವರೆಗೂ ಈ ತರಹ ಪಕ್ಷ ಸ್ಥಾಪನೆ ಮಾಡಿ, ರಾಜಕೀಯ ಮಾಡಿದ ಉದಾಹರಣೆಯಿರಲಿಲ್ಲ. ಈಗ ಉಪೇಂದ್ರ ತಾವೇ ಉದಾಹರಣೆಯಾಗಿದ್ದಾರೆ. 
ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರೆಯರು
2017ರಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವು ತಾರೆಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಲೂಸ್ ಮಾದ ಯೋಗಿ, ಅಮೂಲ್ಯ, ರಮ್ಯಾ ಬಾರ್ನಾ, ಸಿಂಧು ಲೋಕನಾಥ್, ಪ್ರಿಯಾಮಣಿ, ದೀಪಿಕಾ ಕಾಮಯ್ಯ, ನಿಧಿ ಸುಬ್ಬಯ್ಯ, ರಿಷಭ್ ಶೆಟ್ಟಿ, ಸುನಿ, ಪಿಸಿ ಶೇಖರ್ ಇವರೆಲ್ಲಾ ಹಸಮಣೆ ಏರಿದರು. ಇನ್ನು ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ, ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್, ಪವನ್ ಒಡೆಯರ್ ಮತ್ತು ಅಪೇಕ್ಷಾ, ಸಂತೋಷ್ ಆನಂದರಾಮ್ ಮತ್ತು ಸುರಭಿ, ತನುಷ್ ಮತ್ತು ಇಂಚರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 
ಚಿತ್ರರಂಗಕ್ಕೆ ಸ್ಟಾರ್ ಮಕ್ಕಳ ಪಾದಾರ್ಪಣೆ
ಕನ್ನಡ ಚಿತ್ರರಂಗಕ್ಕೆ ಖ್ಯಾತ ನಟ-ನಟಿಯರ ಮಕ್ಕಳು ಪಾದಾರ್ಪಣೆ ಮಾಡುವುದು ವಾಡಿಕೆ. ಅಂತೆ ಈ ವರ್ಷ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಸಾಹೇಬ ಚಿತ್ರದ ಮೂಲಕ ಎಂಟ್ರಿಕೊಟ್ಟರು. ಹ್ಯಾಪಿ ನ್ಯೂ ಇಯರ್ ಚಿತ್ರದ ಮೂಲಕ ಬಿಸಿ ಪಾಟೀಲ್ ಅವರ ಮಗಳು ಸೃಷ್ಠಿ ಪಾಟೀಲ್ ನಟಿಯಾಗಿ ಗುರುತಿಸಿಕೊಂಡರು. ವಿನಯಾ ಪ್ರಸಾದ್ ಮಗಳು ಪ್ರಥಮ ಲಕ್ಷ್ಮೀನಾರಾಯಣರ ಪ್ರಪಂಚವೇ ಬೇರೆ ಚಿತ್ರದ ಮೂಲಕ ಬಣ್ಣ ಹಚ್ಚಿದರು. ಅತಿರಥ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಮೂಲಕ ಸಾಧು ಕೋಕಿಲ ಮಗ ಸುರಾಗ್ ಸಂಗೀತ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿದ್ದಾರೆ. 
- ವಿಶ್ವನಾಥ್ ಎಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com