ನಾನು ಮತ್ತು ನನ್ನ ಪಾತ್ರಗಳು ಒಂದೇ ರೀತಿ: ಸುದೀಪ್

21 ವರ್ಷಗಳನ್ನು ಚಿತ್ರರಂಗದಲ್ಲಿ ಕಳೆದ ಕನ್ನಡದ ಖ್ಯಾತ ನಟ ಸುದೀಪ್, ಸಿನಿಮಾ ಭರವಸೆಯ ಮೇಲೆ ಓಡುತ್ತದೆ ಎಂದು...
ಹೆಬ್ಬುಲಿ ಚಿತ್ರದಲ್ಲಿ ಸುದೀಪ್
ಹೆಬ್ಬುಲಿ ಚಿತ್ರದಲ್ಲಿ ಸುದೀಪ್
21 ವರ್ಷಗಳನ್ನು ಚಿತ್ರರಂಗದಲ್ಲಿ ಕಳೆದ ಕನ್ನಡದ ಖ್ಯಾತ ನಟ ಸುದೀಪ್, ಸಿನಿಮಾ ಭರವಸೆಯ ಮೇಲೆ ಓಡುತ್ತದೆ ಎಂದು ಹೇಳುತ್ತಾರೆ. ಸಂತೋಷದ ಜೀವನ ನಡೆಸಲು ಈ ನಟ ಹೇಳುವ ಮಂತ್ರ ' ಈ ದಿನವನ್ನು ಸಂತೋಷವಾಗಿ ಕಳೆಯಿರಿ, ತುಂಬಾ ಯೋಚಿಸಬೇಡಿ' ಎನ್ನುತ್ತಾರೆ. ತಮ್ಮ ಮನೆಯಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಚಿತ್ರ ಜಗತ್ತಿನ ಬಗ್ಗೆ ತಮ್ಮ ಯೋಚನೆಗಳು ಮತ್ತು ಮುಂದಿನ ಬಹು ನಿರೀಕ್ಷಿತ ಚಿತ್ರ ಹೆಬ್ಬುಲಿಯ ಬಗ್ಗೆ ಅನುಭವ ಹಂಚಿಕೊಂಡರು.
ಪಾತ್ರಕ್ಕಾಗಿ ತಯಾರಾಗುವುದರಲ್ಲಿ ನನಗೆ ನಂಬಿಕೆಯಿಲ್ಲ: ಹೆಬ್ಬುಲಿಯಲ್ಲಿ ಸುದೀಪ್ ಅವರದ್ದು ಸೇನಾ ಕಮಾಂಡರ್ ಪಾತ್ರ. ಇಂತಹ ಪಾತ್ರವನ್ನು ಅವರು ಮಾಡುತ್ತಿರುವುದು ಇದು ಮೊದಲ ಸಲ. ಹಾಗೆಂದು ಈ ಪಾತ್ರಕ್ಕಾಗಿ ಹಗಲಿರುಳು ತೀವ್ರವಾದ ತಯಾರಿ ಮಾಡುವುದರಲ್ಲಿ ತಮಗೆ ನಂಬಿಕೆಯಿಲ್ಲ. ಕಮಾಂಡೊಗಳ ನಡತೆಯ ಬಗ್ಗೆ ಮೂಲವಾಗಿ ತಿಳಿದುಕೊಂಡರೆ ಸಾಕು ಎನ್ನುತ್ತಾರೆ. ಸೇನೆ, ಯುದ್ಧ ಅಥವಾ ಜೀವನ ಚರಿತ್ರೆ ಬಗ್ಗೆ ಮಾಡುವುದಿದ್ದರೆ ಆ ಪಾತ್ರದ ಆಳಕ್ಕೆ ನಾನು ಹೋಗಬೇಕಾಗುತ್ತದೆ. ಹೆಬ್ಬುಲಿಗೆ ಮೇಲಿಂದ ಮೇಲೆ ತಿಳಿದುಕೊಂಡರೆ ಸಾಕಿತ್ತು. ಕೆಲವು ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸೆಟ್ ನಲ್ಲಿ ಹೆಚ್ಚು ಕಲಿತುಕೊಂಡೆ ಎನ್ನುತ್ತಾರೆ.
ಪಾರಾ ಕಮಾಂಡೊ ಆಗಿ ಇಡೀ ಚಿತ್ರದಲ್ಲಿ ಇದ್ದೇನೆ: ಹೆಬ್ಬುಲಿ ಸಂಪೂರ್ಣವಾಗಿ ಸೇನೆಗೆ ಸಂಬಂಧಪಟ್ಟ ಚಿತ್ರವಲ್ಲ. ನಾನಿಲ್ಲಿ ಪಾರಾ ಕಮಾಂಡೊ ಆಗಿ ಪಾತ್ರ ನಿರ್ವಹಿಸಿದ್ದೇನೆ. ಹೆಬ್ಬುಲಿಯಲ್ಲಿ ಹೊಸ ಆಲೋಚನೆಯಿದೆ. ಅದು ಜನರು ಯೋಚಿಸುವಂತೆ ಮಾಡುತ್ತದೆ ಏಕೆಂದರೆ ಅದು ಪ್ರತಿಯೊಬ್ಬರ ಜೀವನಕ್ಕೆ ಸಂಬಂಧಪಟ್ಟ ವಿಷಯ. ನಿರ್ದೇಶಕ ಎಸ್. ಕೃಷ್ಣ(ಕಿಟ್ಟಪ್ಪ) ಅವರು ಕಥೆಯನ್ನು ವಿವರಿಸಿದ ರೀತಿ ಸುಂದರವಾಗಿದೆ. ಯೋಧರು ದೇಶದ ಗಡಿಭಾಗದಲ್ಲಿ ದೇಶ  ರಕ್ಷಣೆಗೆ ತಮ್ಮ ಜೀವವನ್ನು ತ್ಯಾಗ ಮಾಡುವ ಕಥೆಯಿದು. ಆದರೆ ಅವನ ಕುಟುಂಬವನ್ನು ರಕ್ಷಣೆ ಮಾಡಲು ಯಾರೂ ಇಲ್ಲದಿದ್ದಾಗ ಆತ ಹೇಗೆ ಪ್ರತಿಕ್ರಿಯಿಸುತ್ತಾನೆ ಎನ್ನುವುದು ಈ ಚಿತ್ರದಲ್ಲಿದೆ. ತರಬೇತಿ ಪಡೆದ ಕಮಾಂಡೊ ರೆಬೆಲ್ ಆದರೆ ಆತ ಅತ್ಯಂತ ಅಪಾಯಕಾರಿ ಶಸ್ತ್ರಾಸ್ತ್ರವಿದ್ದಂತೆ.
ಸ್ಕ್ರಿಪ್ಟ್ ಓದದೆ ಒಪ್ಪಿಕೊಂಡೆ: ನಿರ್ದೇಶಕರ ಮೇಲಿನ ನಂಬಿಕೆಯಿಂದ ಚಿತ್ರದ ಕಥೆಯನ್ನು ಕೇಳದೆ ಒಪ್ಪಿಕೊಂಡೆ.ಕಿಟ್ಟಪ್ಪ ಮತ್ತು ನಾನು ಅನೇಕ ವರ್ಷಗಳಿಂದ ಸಹೋದ್ಯೋಗಿಗಳು. ನಾನು ಅವರಿಗೆ ದಿನಾಂಕ ನಿಗದಿಪಡಿಸಿದ ತಕ್ಷಣ ಅವರು ನನ್ನಲ್ಲಿ ಕೇಳಿದ್ದು ನೀವು ಕಥೆಯನ್ನೇ ಕೇಳಿಲ್ಲ ಎಂದು. ಶೂಟಿಂಗ್ ದಿನಾಂಕ ಹತ್ತಿರವಾಗುತ್ತಿದ್ದಾಗ ಅವರ ಬಳಿ ಕುಳಿತು ಪಾತ್ರದ ಬಗ್ಗೆ ಚರ್ಚೆ ಮಾಡಿದೆ. ಆಗ ನಾನು ಅವರಲ್ಲಿ ಕಥೆ ವಿವರಿಸಲು ಹೇಳಿದ್ದು. ನಾನು ಮೊದಲ ಬಾರಿಗೆ ರಾಜಮೌಳಿಯವರ ಈಗ ಚಿತ್ರದಲ್ಲಿ ಕೇವಲ  30 ಸೆಕೆಂಡ್ ಗಳಲ್ಲಿ ಒಪ್ಪಿಕೊಂಡಿದ್ದೆ. ನಂತರ ಅಷ್ಟು ಬೇಗನೆ ಒಪ್ಪಿಕೊಂಡ ಎರಡನೇ ಚಿತ್ರವೇ ಹೆಬ್ಬುಲಿ. ಪ್ರತಿ ಸಲವೂ ನಾವು ಚಿತ್ರವನ್ನು ಒಪ್ಪಿಕೊಳ್ಳುವಾಗ ಹಣ ಮತ್ತು ಸಮಯ ನೋಡಲು ಸಾಧ್ಯವಾಗುವುದಿಲ್ಲ. ಪ್ರೀತಿಗಾಗಿಯೂ ಮಾಡಬೇಕಾಗುತ್ತದೆ.
ಅಭಿರುಚಿಯುಳ್ಳ ನಿರ್ಮಾಪಕರು ನಮಗೆ ಸ್ಫೂರ್ತಿ: ಅನೇಕ ಬಾರಿ ಸುದೀಪ್ ಚಿತ್ರ ಬಿಡುಗಡೆಗೆ ನಿರ್ಮಾಪಕರಿಗೆ ಸಹಾಯ ಮಾಡಿದ್ದುಂಟು.ಆದರೆ ಹೆಬ್ಬುಲಿಯಲ್ಲಿ ಹಾಗಾಗಿಲ್ಲ. ರಘುನಾಥ್ ಮತ್ತು ಉಮಾಪತಿ ಉತ್ತಮ ನಿರ್ಮಾಪಕರು. ಅವರಿಂದ ಈ ಚಿತ್ರವನ್ನು ಇನ್ನೂ ಚೆನ್ನಾಗಿ ತಯಾರಿಸಲು ಸಾಧ್ಯವಾಯಿತು. ಸಾಮಾನ್ಯವಾಗಿ ನಾನು ನಿರ್ಮಾಣದ ವಿಷಯದಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ. ಆದರೆ ಈ ಚಿತ್ರದಲ್ಲಿ ನನ್ನ ಕಡೆಯಿಂದ ಯಾವುದನ್ನೂ ತಪ್ಪಿಸಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ತಂಡದ ಚರ್ಚೆ,ವಾಗ್ವಾದಗಳೆಲ್ಲವೂ ನಮ್ಮ ಮನೆಯ ಸಣ್ಣ ಗಾರ್ಡನ್ ನಲ್ಲಿಯೇ ನಡೆಯಿತು. ಯಾವುದೇ ಚಿತ್ರ ಮುಗಿಯಬೇಕಾದರೆ 6ರಿಂದ 8 ತಿಂಗಳು ಬೇಕು. ಅಷ್ಟು ಸಮಯದಲ್ಲಿ ನಾವೆಲ್ಲಾ ಒಂದಾಗುತ್ತೇವೆ. ಇಂದು ಚಿತ್ರದ ಯಶಸ್ಸಿನಲ್ಲಿ ವಿತರಣೆ ಪ್ರಮುಖ ಕೊಡುಗೆ ನೀಡುತ್ತಿದ್ದು ಜಾಕ್ ಮಂಜು ವಿತರಕರಾಗಿ ಬೆಳವಣಿಗೆ ಹೊಂದಿದ್ದಾರೆ ಎನ್ನುತ್ತಾರೆ ಸುದೀಪ್.
ಚಿತ್ರದಲ್ಲಿನ ಪಾತ್ರ ನನ್ನ ನಿಜ ಜೀವನಕ್ಕೆ ಹತ್ತಿರವಾಗಿದೆ: ನನ್ನ ಪಾತ್ರದ ಅಭಿವ್ಯಕ್ತಿ ಹೆಬ್ಬುಲಿಯಲ್ಲಿ ತೀವ್ರವಾಗಿದೆ.ನನ್ನ ವ್ಯಕ್ತಿತ್ವಕ್ಕಿಂತ ತುಂಬಾ ದೂರದಲ್ಲಿರುವ ಪಾತ್ರ ನನಗೆ ಮಾಡಲು ಇಷ್ಟವಿಲ್ಲ. ಆರ್ಮಿ ಆಫೀಸರ್ ಆಗಿ, ಪೊಲೀಸ್ ಅಧಿಕಾರಿಯಾಗಿ ಅಥವಾ ರೌಡಿ ಪಾತ್ರದಲ್ಲಾಗಲಿ ಅಲ್ಲಿ ನಾನು ಏನು ಮಾಡುತ್ತೇನೆ ಎಂಬುದನ್ನು ಯೋಚಿಸುತ್ತೇನೆ. ನಾನು ಜೀವನಚರಿತ್ರೆಯನ್ನು ಮಾಡಬೇಕೆಂದರೆ ಆ ವ್ಯಕ್ತಿತ್ವದಲ್ಲಿ ನಾನು ಯೋಚಿಸಬೇಕು. ಇಲ್ಲದಿದ್ದರೆ ಬೇರೆ ಚಿತ್ರಗಳಲ್ಲಿ ನನ್ನ ನಿಜವಾದ ಸ್ವಭಾವ ನೋಡಬಹುದು. ಕಥೆಗೆ ಪೂರಕವಾಗಿ ನನ್ನ ಸ್ಟೈಲ್ ನಲ್ಲಿ ನಟಿಸುತ್ತೇನೆ.
ನಾನು ಅಥವಾ ನನ್ನ ಚಿತ್ರ ಟ್ರೆಂಡ್ ಹುಟ್ಟು ಹಾಕಿದರೆ ಖುಷಿಯಾಗುತ್ತದೆ:ಹೆಬ್ಬುಲಿಯಲ್ಲಿ ಸುದೀಪ್ ಕೇಶ ವಿನ್ಯಾಸ ಆನ್ ಲೈನ್, ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೆಂಡ್ ಸೃಷ್ಟಿಮಾಡಿದೆ. ನಾವು ಹೊರಗೆ ಹೋಗಿ ಚಿತ್ರವನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಮಕ್ಕಳು ನನ್ನ ಹೇರ್ ಸ್ಟೈಲ್ ನೋಡಿ ಹಾಗೆ ಮಾಡಿಕೊಳ್ಳಲು ಯತ್ನಿಸಿದಾಗ ಆಗ ತುಂಬಾ ಖುಷಿಯಾಗುತ್ತದೆ.
ನಾನು ಸುಂದರ ಚಿತ್ರದ ಒಂದು ಭಾಗ: ಇದು ವಾಣಿಜ್ಯ ಚಿತ್ರಗಳಿಂದ ದೂರ ಹೋಗುವ ಸಮಯವೇ ಎಂದು ಕೇಳಿದಾಗ ಅದಕ್ಕೆ ಸುದೀಪ್ ಕೊಡುವ ಉತ್ತರ, ಯಾಕೆ? ಜನರು ನನ್ನನ್ನು ಇಷ್ಟಪಡುತ್ತಾರೆ. ಒಂದು ಸಮಯದಲ್ಲಿ ನನ್ನನ್ನು ಮೂಲೆಗುಂಪು ಮಾಡಲಾಗಿತ್ತು. ಅದರಿಂದ ನಾನು ಸಾಕಷ್ಟು ಕಲಿತೆ. ಬಾಕ್ಸ್ ಆಫೀಸ್ ನಲ್ಲಿ ಚೆನ್ನಾಗಿ ಕಲೆಕ್ಷನ್ ಆದರೆ ನಾನಿಲ್ಲಿ ಉಳಿಯುತ್ತೇನೆ. ಕೇವಲ ಜನರು ನನ್ನನ್ನು ಇಷ್ಟಪಟ್ಟರೆ ಸಾಲದು. ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಗೆಲುವು ಕಾಣಬೇಕು ಎಂಬುದನ್ನು ಅರಿತಿದ್ದೇನೆ. ಆರಂಭದಲ್ಲಿ ಚಿತ್ರ ಚೆನ್ನಾಗಿ ಓಪನಿಂಗ್ ಕಾಣುವ ವಿಷಯದ ಕುರಿತು ನಾನು ಯೋಚಿಸುತ್ತಿದ್ದೇನೆ. ಪ್ರತಿ ನಿರ್ದೇಶಕರು ಬಣ್ಣ ಬಣ್ಣವಾಗಿ ಚಿತ್ರಿಸಿದ್ದಾರೆ ಅದರಲ್ಲಿ ನಾನು ಚಿತ್ರವಾಗಿದ್ದೇನೆ ಎನ್ನುತ್ತಾರೆ.
ಹೋಲಿಕೆ ಮಾಡುವುದಿಲ್ಲ: ಸ್ಯಾಂಡಲ್ ವುಡ್ ನ್ನು ಬೇರೆ ಭಾಷೆಗಳೊಂದಿಗೆ ಹೋಲಿಸಬಹುದೇ? ಧೀರುಬಾಯಿ ಅಂಬಾನಿಯವರ ಜೊತೆ ಹೋಲಿಕೆ ಮಾಡಿ ನನ್ನ ತಂದೆ-ತಾಯಿ ಅವರಿಗಿಂತ ಕೀಳು ಎಂದು ನಾನೆಂದಿಗೂ ಯೋಚಿಸಿಲ್ಲ. ಅದೇ ರೀತಿ ಬೇರೆ ದೊಡ್ಡ ನಟರೊಂದಿಗೆ ಹೋಲಿಸಿ ನಮ್ಮ ಮಗ ಅವರಿಗಿಂತ ಚಿಕ್ಕವನು ಎಂದು ನನ್ನ ತಂದೆ-ತಾಯಿಯೂ ಎಂದೂ ನೋಡಿಲ್ಲ. ಅವರು ಕುಳಿತು ನನ್ನ ಯಶಸ್ಸನ್ನು ನೋಡುತ್ತಾ ಸಂತೋಷಪಡುತ್ತಿದ್ದಾರೆ ಮತ್ತು ನಾನು ಎಲ್ಲ ಕಡೆ ಸಂಚರಿಸುತ್ತಿದ್ದೇನೆ ಎಂದು ಸುದೀಪ್ ಖುಷಿಯಿಂದ ಹೇಳಿಕೊಳ್ಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com