
ಕೊಚ್ಚಿ: ಮಲಯಾಳಂ ನಟಿ ಅಪಹರಣ, ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಮಾಸ್ಟರ್ ಮೈಂಡ್ ಪಲ್ಸರ್ ಸುನಿ ಮತ್ತು ಆತನ ಸ್ನೇಹಿತ ವಿಜೇಶ್ ಎಂಬುವರಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಪನಾಂಗಡ್ ಸಬ್ ನ್ಸ್ ಪೆಕ್ಟರ್ ಚಾರ್ಲಿ ಎಂಬುವರು ಕೊಯಂಬತ್ತೂರಿನ ಪೀಲ್ಯಾಮಡ್ ಎಂಬಲ್ಲಿ ಈ ಇಬ್ಬರು ಆರೋಪಿಗಳಿಗೆ ಆಶ್ರಯ ನೀಡಿದ್ದರು. ಈ ಸಂಬಂಧ ಮಲಯಾಳಂ ನ್ಯೂಸ್ ಚಾನಲ್ ಜೊತೆ ಮಾತನಾಡಿರುವ ಎಸ್ ಐ ಚಾರ್ಲಿ, ನನಗೆ ಪ್ರಕರಣದ ಬಗ್ಗೆ ತಿಳಿದಿರಲಿಲ್ಲ, ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ಹೇಳಿರುವ ಅವರು, ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳು ಅವರು ಎಂಬುದು ನನಗೆ ತಿಳಿದಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೊಯಂಬತ್ತೂರಿನಲ್ಲಿ ವಿಜೇಶ್ ಮತ್ತು ನಾನು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದೆವು. ಆದರೆ ಸುನೀಲ್ ಬಗ್ಗೆ ನನಗೆ ತಿಳಿದರಿಲಿಲ್ಲ. ನನ್ನ ಬಳಿ ಅವರಿಬ್ಬರು ಯಾವುದೇ ವಿಷಯ ಹೇಳಿರಲಿಲ್ಲ. ಯಾವುದೋ ಪ್ರಮುಖ ಕೆಲಸದ ಮೇಲೆ ಬಂದಿದ್ದು, ಒಂದು ದಿನ ಮನೆಯಲ್ಲಿ ಉಳಿಯಲು ಅವಕಾಶ ಕೇಳಿದ್ದರು.
ಒಂದು ದಿನ ಇದ್ದ ನಂತರ ನನ್ನ ಸ್ನೇಹಿತನ ಬೈಕ್ ಕದ್ದು ಪರಾರಿಯಾಗಿದ್ದರು ಎಂದು ಚಾರ್ಲಿ ಹೇಳಿದ್ದಾರೆ. ನಂತರ ವಾಟ್ಸ್ ಅಪ್ ನಲ್ಲಿ ಬಂದ ಮೆಸೇಜ್ ನೋಡಿ ಈ ಇಬ್ಬರು ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿಯಿತು. ಪ್ರಕರಣ ಗಂಭೀರತೆಯನ್ನು ಅರಿತ ಚಾರ್ಲಿ ಕೊಚ್ಚಿಯಲ್ಲಿ ಪೊಲೀಸರಿಗೆ ಶರಣಾಗಿದ್ದಾಗಿ ಹೇಳಿದ್ದಾರೆ. ಪಲ್ಸರ್ ಸುನಿ ಮನೆಯಲ್ಲಿದ್ದ ಪೂರ್ತಿ ಸಮಯ ನಿದ್ರಿಸಿದ್ದ. ಆತ ಹೆಚ್ಚು ಮಾತನಾಡಲಿಲ್ಲ ಎಂದು ಚಾರ್ಲಿ ಹೇಳಿದ್ದಾರೆ.
Advertisement