ಚೆನ್ನೈ: ಚಿತ್ರೋದ್ಯಮದ ಮೇಲೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ವಿಧಿಸುತ್ತಿರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರು, ಸಿನಿಮಾ ಟಿಕೆಟ್ ಮೇಲಿನ ಜಿಎಸ್ ಟಿಯನ್ನು ಮರು ಪರಿಶೀಲಿಸುವಂತೆ ಶುಕ್ರವಾರ ಒತ್ತಾಯಿಸಿದ್ದಾರೆ.
ಈ ಸಂಬಂಧ ಇಂದು ಚೆನ್ನೈನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಕಮಲ್ ಹಾಸನ್ ಅವರು, ಸಿನೆಮಾ ಟಿಕೆಟ್ ಮೇಲೆ ಶೇ.28 ರಷ್ಟು ತೆರಿಗೆ ವಿಧಿಸಲು ನಿರ್ಧರಿಸಿರುವುದು ಆಘಾತಕಾರಿ ಸಂಗತಿ. ಟಿಕೆಟ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು ಇಲ್ಲವೇ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ಹಾಲಿವುಡ್ ನವರು ಒಪ್ಪಿದರೂ ನಾವು ಒಪ್ಪುವುದಿಲ್ಲ. ಸಿನಿಮಾ ಕ್ಷೇತ್ರದ ಮೇಲೆ ಶೇ.28ರಷ್ಟು ಜಿಎಸ್ಟಿ ಜಾರಿಗೊಳಿಸಿದರೆ ತಾವು ಸಿನಿಮಾ ರಂಗಕ್ಕೆ ಗುಡ್ ಬೈ ಹೇಳುವುದಾಗಿ ಎಚ್ಚರಿಸಿದ್ದಾರೆ.
ಜುಲೈ 1 ರಿಂದ ದೇಶಾದ್ಯಂತ ಏಕ ಸ್ವರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.