'ಶಿವಗಾಮಿ' ಪಾತ್ರಕ್ಕೆ ನಿರಾಕರಣೆ: ಕೊನೆಗೂ ಮೌನ ಮುರಿದ ನಟಿ ಶ್ರೀದೇವಿ
ಭಾರತೀಯ ಚಿತ್ರರಂಗದಲ್ಲಿಯೇ ಹೊಸ ಇತಿಹಾಸ ಬರೆದಿರುವ ಬಾಹುಬಲಿ ಚಿತ್ರದಲ್ಲಿ ನಟಿಸಲು ನಿರಾಕರಿಸಿ ಸಾಕಷ್ಟು ಗಾಸಿಪ್ ಗಳಿಗೆ ಗುರಿಯಾಗಿದ್ದ ನಟಿ ಶ್ರೀದೇವಿಯವರು ಕೊನೆಗೂ ಯಾವ ಕಾರಣಕ್ಕೆ ನಿರಾಕರಿಸಿದೆ ಎನ್ನುವುದರ ಬಗ್ಗೆ ಮೌನ ಮುರಿದಿದ್ದಾರೆ...
ನವದೆಹಲಿ: ಭಾರತೀಯ ಚಿತ್ರರಂಗದಲ್ಲಿಯೇ ಹೊಸ ಇತಿಹಾಸ ಬರೆದಿರುವ ಬಾಹುಬಲಿ ಚಿತ್ರದಲ್ಲಿ ನಟಿಸಲು ನಿರಾಕರಿಸಿ ಸಾಕಷ್ಟು ಗಾಸಿಪ್ ಗಳಿಗೆ ಗುರಿಯಾಗಿದ್ದ ನಟಿ ಶ್ರೀದೇವಿಯವರು ಕೊನೆಗೂ ಯಾವ ಕಾರಣಕ್ಕೆ ನಿರಾಕರಿಸಿದೆ ಎನ್ನುವುದರ ಬಗ್ಗೆ ಮೌನ ಮುರಿದಿದ್ದಾರೆ.
ಬಾಹುಬಲಿ ಚಿತ್ರದಲ್ಲಿ ಪ್ರಮುಖ ಪಾತ್ರವಾಗಿರುವ ಶಿವಗಾಮಿ ಪಾತ್ರ ನಿರ್ವಹಿಸುವಂತೆ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರು ಶ್ರೀದೇವಿಯವರನ್ನು ಕೇಳಿದ್ದರು. ಆದರೆ, ಈ ಆಫರ್ ನ್ನು ಶ್ರೀದೇವಿಯವರು ನಿರಾಕರಿಸಿದ್ದರು. ನಂತರ ರಮ್ಯಾ ಕೃಷ್ಣಾ ಅವರಿಗೆ ಪಾತ್ರ ಒಲಿದಿತ್ತು ಎಂಬ ಮಾತುಗಳು ಕೇಳಿಬಂದಿದ್ದವು.
ಇದಾದ ಬಳಿಕ ಬಾಹುಬಲಿ ಚಿತ್ರ ಬಹು ದೊಡ್ಡ ಹಿಟ್ ಆದ ಮೇಲೆ ನಟಿ ಶ್ರೀದೇವಿಯವರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ಹಾಗೂ ಗಾಸಿಪ್ ಗಳು ಕೇಳಿಬಂದಿದ್ದವು. ಈ ವಿಚಾರ ತಿಳಿಸಿದ್ದ ಶ್ರೀದೇವಿಯವರ ಅಭಿಮಾನಿಗಳು ಆಶ್ಚರ್ಯ ಪಟ್ಟಿದ್ದರು.
ಇದೀಗ ಶ್ರೀದೇವಿಯವರೇ ಪಾತ್ರ ನಿರಾಕರಿಸಿದರ ಕುರಿತಂತೆ ಕೊನೆಗೂ ಮೌನ ಮುರಿದು ಮಾತನಾಡಿದ್ದು, ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಈ ಪಾತ್ರವನ್ನು ನಿರಾಕರಿಸಿದ್ದು ದೊಡ್ಡ ವಿಷಯವಾಗಿ ಹೋಗಿದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಖಾಸಗಿ ಕಾರಣಗಳಿರುತ್ತವೆ. ಬಾಹುಬಲಿಯಂತೆಯೇ ನಾನು ಸಾಕಷ್ಟು ಸಿನಿಮಾಗಳನ್ನು ನಿರಾಕರಿಸಿದ್ದೆ. ಆ ಚಿತ್ರಗಳ ಕುರಿತಂತೆ ಉದ್ಭವಿಸದ ಪ್ರಶ್ನೆಗಳು ಈ ಚಿತ್ರಕ್ಕೆ ಏಕೆ?... ಬಾಹುಬಲಿ ನಿರಾಕರಿಸಿದ್ದು ಮಾತ್ರ ಇನ್ನೂ ಕೂಡ ಚರ್ಚೆಯಾಗುತ್ತಲೇ ಇದೆ ಎಂದು ಹೇಳಿದ್ದಾರೆ.