ಬೆಂಗಳೂರು: 'ಕಿರಿಕ್ ಪಾರ್ಟಿ' ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ಯಶ್ ಬಗ್ಗೆ ಹೇಳಿಕೆ ನೀಡಿ ಅದು ಅವರ ಅಭಿಮಾನಿಗಳ ಕೋಪ, ಆಕ್ರೋಶಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಇದೀಗ ಸ್ವತಃ ನಟ ಯಶ್ ವಿವಾದಕ್ಕೆ ತೆರೆ ಎಳೆಯಲು ನಿರ್ಧರಿಸಿದ್ದಾರೆ.
ತಮ್ಮ ಅಭಿಮಾನಿಗಳ ಸಿಟ್ಟನ್ನು ತಣ್ಣಗಾಗಿಸಲು ಯಶ್ ಇಂದು ಫೇಸ್ ಬುಕ್ ನಲ್ಲಿ ವಿವರವಾದ ಹೇಳಿಕೆ ಬರೆದಿದ್ದಾರೆ. ಅದರಲ್ಲಿ ನಟ ಯಶ್, ಒಬ್ಬರ ಅಭಿಪ್ರಾಯ ಇನ್ನೊಬ್ಬರ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ಈ ವಿಷಯವನ್ನು ಇಲ್ಲಿಗೇ ಬಿಟ್ಟುಬಿಡಿ. ಅದನ್ನು ದೊಡ್ಡದು ಮಾಡುವುದು ಬೇಡ ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಶ್ಮಿಕಾ ಅವರಿಗೆ ನಿರೂಪಕರು ಕನ್ನಡದ ಯಾವ ನಟ ಮಿಸ್ಟರ್ ಶೋ ಆಫ್ ಅಂತ ನಿಮಗೆ ಅನಿಸುತ್ತದೆ ಎಂದು ಪ್ರಶ್ನೆ ಕೇಳಿದ್ದರು.
ಅದಕ್ಕೆ ರಶ್ಮಿಕಾ ಮೊದಲು, ಯಾರು ಇಲ್ಲ, ನಾನು ಈ ಪ್ರಶ್ನೆಗೆ ಉತ್ತರಿಸಲು ಇಚ್ಛಿಸುವುದಿಲ್ಲ. ಯಾಕೆಂದರೆ ನನ್ನ ಹೇಳಿಕೆ ವಿವಾದ ಸೃಷ್ಟಿಸಬಹುದು. ಹಾಗಾಗಿ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುವುದಿಲ್ಲ ಎಂದಿದ್ದರು.
ಆದರೆ ನಿರೂಪಕರು ಬಲವಂತ ಮಾಡಿದಾಗ ಕೊನೆಗೆ ಯಶ್ ಹೆಸರು ಹೇಳಿಬಿಟ್ಟರು.
ರಶ್ಮಿಕಾ ಅವರ ಈ ಉತ್ತರಕ್ಕೆ ಯಶ್ ಅಭಿಮಾನಿಗಳು ಗರಂ ಆಗಿದ್ದಾರೆ. ಯಶ್ ಅವರ ಬಗ್ಗೆ ಯಾರೂ ಸರ್ಟಿಫಿಕೇಟ್ ಕೊಡುವುದು ಬೇಕಾಗಿಲ್ಲ. ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಮ್ಮ ಯಶ್ ಮಿ. ಶೋ ಆಫ್ ಅಲ್ಲಾ, ಮಿ.ಶೋ ಮ್ಯಾನ್. ಯಶ್ ಬಾಸ್ ಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇದಕ್ಕೆ ನಟ ಯಶ್ ಈದ್ ಮುಬಾರಕ್ ಶುಭ ಕೋರಿ, ತಮ್ಮ ಅಭಿಮಾನಿಗಳನ್ನು ಈ ವಿಷಯವನ್ನು ದೊಡ್ಡದು ಮಾಡದಂತೆ ಇಲ್ಲಿಗೇ ಬಿಟ್ಟುಬಿಡುವಂತೆ ಕೋರಿದ್ದಾರೆ.