
ನವದೆಹಲಿ: ಇತ್ತ ಕರ್ನಾಟಕದಲ್ಲಿ ಡಬ್ಬಿಂಗ್ ವಿವಾದ ಸಂಬಂಧ ಭಾರಿ ಚರ್ಚೆಗಳಾಗುತ್ತಿರುವಂತೆಯೇ ಅತ್ತ ಸುಪ್ರೀಂ ಕೋರ್ಟ್ ಡಬ್ಬಿಂಗ್ ವಿರೋಧಿಗಳಿಗೆ ಭಾರಿ ಶಾಕ್ ನೀಡಿದ್ದು, ಡಬ್ಬಿಂಗ್ ಸಿನಿಮಾ, ಧಾರಾವಾಹಿ ಪ್ರಸಾರ ತಪ್ಪಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
ಭಾಷೆಯ ರಕ್ಷಣೆಯ ಹೆಸರಿನಲ್ಲಿ ಅನ್ಯ ಭಾಷೆಯ ಚಿತ್ರ ಹಾಗೂ ಧಾರಾವಿಗಳನ್ನು ಟಿವಿ ಚಾನಲ್ ಗಳಲ್ಲಿ ಪ್ರಸಾರ ಮಾಡದಂತೆ ತಡೆಯುವುದು ಸ್ಪರ್ಧಾತ್ಮಕ ಕಾಯ್ದೆ-2002ರ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಹಾಭಾರತ ಹಿಂದಿ ಧಾರಾವಾಹಿಯನ್ನು ಬೆಂಗಾಳಿ ಭಾಷೆಗೆ ಡಬ್ಬಿಂಗ್ ಮಾಡಿ ವಿವಿಧ ಟಿವಿ ಚಾನಲ್ ಗಳಲ್ಲಿ ಪ್ರಸಾರ ಮಾಡುವ ಕುರಿತು ಎದ್ದಿರುವ ವಿವಾದ ಸಂಬಂಧ ಶುಕ್ರವಾರ ಸುಪ್ರೀಂ ಕೋರ್ಟ್ ತನ್ನ ಮಹತ್ವದ ತೀರ್ಪು ನೀಡಿದೆ.
ಈ ಹಿಂದೆ ಈಸ್ಟರ್ನ್ ಇಂಡಿಯೋ ಮೋಷನ್ ಪಿಕ್ಟರ್ ಅಸೋಸಿಯೇಷನ್ ಮತ್ತು ಕಲಾವಿದರು, ಪಶ್ಚಿಮ ಬಂಗಾಳ ಚಲನಚಿತ್ರ ತಂತ್ರಜ್ಞರು ಮತ್ತು ಟಿವಿ ಮಾಲೀಕರ ಸಂಘ ಮಹಾಭಾರತ ಧಾರಾವಾಹಿಯನ್ನು ಬೆಂಗಾಳಿ ಭಾಷೆಗೆ ಡಬ್ಬಿಂಗ್ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದವು. ಡಬ್ಬಿಂಗ್ ಸಿನಿಮಾ ಧಾರಾವಾಹಿಗಳಿಂದ ಕಲಾವಿದರು ಮತ್ತು ತಂತ್ರಜ್ಞರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಇದರಿಂದ ಸ್ಥಳೀಯ ಭಾಷೆಯ ಧಾರಾವಾಹಿ ಮತ್ತು ಸಿನಿಮಾಗಳಿಗೆ ಹೊಡೆತ ಬೀಳಲಿದೆ ಎಂದು ಹೇಳಿತ್ತು. ಅಂತೆಯೇ ವಿವಿಧ ಚಾನಲ್ ಗಳಿಗೆ ಪತ್ರಬರೆದು ಮಹಾಭಾರತ ಡಬ್ಬಿಂಗ್ ಧಾರಾವಾಹಿಯನ್ನು ಪ್ರಸಾರ ಮಾಡದಂತೆಯೂ ಸೂಚಿಸಿತ್ತು.
ಈ ಕುರಿತು ಚಾನಲ್ ವೊಂದು ದೂರು ನೀಡಿತ್ತು. ದೂರಿನ ವಿಚಾರಣೆ ನಡೆಸಿದ ಸ್ಪರ್ಧಾತ್ಮಕ ಆಯೋಗ, ಡಬ್ಬಿಂಗ್ ನಿಷೇಧದಿಂದ ಸ್ಪರ್ಧಾತ್ಮಕತೆಗೆ ಧಕ್ಕೆಯಾಗುತ್ತದೆ ಹೇಳಿತ್ತು. ಇದಕ್ಕೆ ವ್ಯಕ್ತಿರಿಕ್ತ ಎಂಬಂತೆ ಸ್ಪರ್ಧಾತ್ಮಕ ಮೇಲ್ಮನವಿ ನ್ಯಾಯಮಂಡಳಿ ಡಬ್ಬಿಂಗ್ ಧಾರಾವಾಹಿ ಪ್ರಸಾರ ಸ್ಥಗಿತದಿಂದಾಗಿ ಸ್ಪರ್ಧಾತ್ಮಕತೆಗೆ ಧಕ್ಕೆಯೇನು ಆಗಿಲ್ಲ ಎಂದು ಹೇಳಿತ್ತು. ಈ ತೀರ್ಪಿನ ವಿರುದ್ಧ ಸ್ಪರ್ಧಾತ್ಮಕ ಆಯೋಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಕೆ ಸಿಕ್ರಿ ಮತ್ತು ಎಎಂ ಸಪ್ರೆ ಅವರ ಧ್ವಿಸದಸ್ಯ ಪೀಠ ಭಾರತೀಯ ಸ್ಪರ್ಧಾತ್ಮಕ ಆಯೋಗದ ಆದೇಶವನ್ನು ಎತ್ತಿ ಹಿಡಿದಿದೆ.
Advertisement