ಬೆಂಗಳೂರು: ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದಿರಗಳ ಟಿಕೆಟ್ ದರ 200 ರುಪಾಯಿಗೆ ಮಿತಿಗೊಳಿಸಿ ಹೊರಡಿಸಿರುವ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಭಾರತೀಯ ಮಲ್ಟಿಪ್ಲೆಕ್ಸ್ ಸಂಘ(ಎಂಎಐ) ಗುರುವಾರ ಒತ್ತಾಯಿಸಿದೆ.
ಸರ್ಕಾರದ ಈ ಆದೇಶ ಚಿತ್ರೋದ್ಯಮ ಹಾಗೂ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದಿರುವ ಮಲ್ಟಿಪ್ಲೆಕ್ಸ್ ಸಂಘ, ಟಿಕೆಟ್ ದರವನ್ನು 200 ರುಪಾಯಿಗೆ ಮಿತಿಗೊಳಿಸಿ ಹೊರಡಿಸಿರುವ ಅಧಿಸೂಚನೆಯನ್ನು ಸರ್ಕಾರ ಈ ಕೂಡಲೇ ಹಿಂಪಡೆಯಬೇಕು ಎಂದು ಎಂಎಐ ಅಧ್ಯಕ್ಷ ದೀಪಕ್ ಅಶೆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಿಕೆಟ್ ದರ ಮಿತಿಗೊಳಿಸಿರುವುದು ಹೂಡಿಕೆದಾರರ ವಿರೋಧಿ ಕ್ರಮವಾಗಿದ್ದು, ಇದರಿಂದ ಕರ್ನಾಟಕದಲ್ಲಿ ಹೊಸ ಮಲ್ಟಿಪ್ಲೆಕ್ಸ್ ನಿರ್ಮಾಣಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಅಶೆರ್ ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದಂತೆ ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಕನ್ನಡ ಸೇರಿದಂತೆ ಎಲ್ಲಾ ಭಾಷೆಯ ಚಿತ್ರಗಳ ಟಿಕೆಟ್ ದರ ಗರಿಷ್ಠ 200 ರುಪಾಯಿಗೆ ನಿಗದಿಗೊಳಿಸಿ ಆದೇಶ ಹೊರಡಿಸಿತ್ತು.