ಹೈದರಾಬಾದ್: ಖ್ಯಾತ ತೆಲುಗು ಚಿತ್ರ ನಿರ್ದೇಶಕ, ಮಾಜಿ ಕೇಂದ್ರ ಸಚಿವ ದಾಸರಿ ನಾರಾಯಣ ರಾವ್ ದೀರ್ಘಕಾಲದ ಅನಾರೋಗ್ಯದ ನಂತರ ಇಂದು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಈ ವರ್ಷದ ಆರಂಭದಲ್ಲಿ ಅವರು ಶ್ವಾಸಕೋಶ ಮತ್ತು ಕಿಡ್ನಿ ಸೋಂಕಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ತೆಲುಗು, ತಮಿಳು ಮತ್ತು ಹಿಂದಿಯಲ್ಲಿ 125 ಚಿತ್ರಗಳನ್ನು ನಿರ್ದೇಶಿಸಿದ್ದ ರಾವ್ ಗಿನ್ನೆಸ್ ದಾಖಲೆ ಗಳಿಸಿದ್ದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೇಂದ್ರ ಕಲ್ಲಿದ್ದಲು ಖಾತೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದ ದಾಸರಿ ನಾರಾಯಣ ರಾವ್ ವಿರುದ್ಧ ಕೂಡ ಕಲ್ಲಿದ್ದಲು ಹಗರಣಕ್ಕೆ ಸಂಬಂಧಪಟ್ಟಂತೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.
ಪ್ರೇಮಾಭಿಷೇಕಂ,ಮೇಘಾ ಸಂದೇಶ, ಒಸಿ ರಾಮುಲಮ್ಮ ಮತ್ತು ಟಾಟಾ ಮನವಡು ಮೊದಲಾದ ಖ್ಯಾತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನಾಧಾರಿತ ಚಿತ್ರ ತಯಾರಿಸುವ ಯೋಚನೆಯಲ್ಲಿ ದಾಸರಿ ನಾರಾಯಣ ರಾವ್ ಇದ್ದರು.