ಉಪೇಂದ್ರ
ಸಿನಿಮಾ ಸುದ್ದಿ
ರಾಜಕೀಯ ಎಂಟ್ರಿಗೂ ಮುನ್ನ ಇದು ಉಪೇಂದ್ರ ಅವರ ಕೊನೆಯ ಸಿನಿಮಾ!
ರಾಜಕೀಯ ಜೀವನ ಆರಂಭಿಸಲು ತಯಾರಾಗಿರುವ ನಟ ಉಪೇಂದ್ರ ಎಲ್ಲಾ ಸಿದ್ಧತೆಗಳಲ್ಲೂ ತೊಡಗಿದ್ದಾರೆ. ಇದರ ನಡುವೆ ಅಭಿಮಾನಿಗಳು ತೆರೆಯ ಮೇಲೆ...
ಬೆಂಗಳೂರು: ರಾಜಕೀಯ ಜೀವನ ಆರಂಭಿಸಲು ತಯಾರಾಗಿರುವ ನಟ ಉಪೇಂದ್ರ ಎಲ್ಲಾ ಸಿದ್ಧತೆಗಳಲ್ಲೂ ತೊಡಗಿದ್ದಾರೆ. ಇದರ ನಡುವೆ ಅಭಿಮಾನಿಗಳು ತೆರೆಯ ಮೇಲೆ ಉಪೇಂದ್ರ ಅವರನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಅಭಿಮಾನಿಗಳಿಗಾಗಿ ಉಪೇಂದ್ರ ರಾಜಕೀಯ ಎಂಟ್ರಿಗೂ ಮುನ್ನ ಉಪ್ಪಿ-ರುಪ್ಪಿ ಸಿನಿಮಾದಲ್ಲಿ ನಟಿಸಲಿದ್ದಾರೆ.
ಸದ್ಯ ಶ್ರೀ ಹರಿ ನಿರ್ದೇಶನದ ಹೋಂ ಮಿನಿಸ್ಟರ್ ಸಿನಿಮಾ ಶೂಟಿಂಗ್ ನಲ್ಲಿ ಉಪೇಂದ್ರ ಬ್ಯುಸಿಯಾಗಿದ್ದಾರೆ, ಇದರ ಜೊತೆಗೆ ಕೆ. ಮಾದೇಶ ನಿರ್ದೇಶನದ ಉಪ್ಪಿ-ರುಪ್ಪಿ ಸಿನಿಮಾಗಾಗಿ ಅಕ್ಟೋಬರ್ 8 ರಿಂದ ಡೇಟ್ಸ್ ನೀಡಿದ್ದು, 7 ದಿನಗಳು ಥಾಯ್ಲೆಂಡ್ ನಲ್ಲಿ ಶೂಟಿಂಗ್ ನಡೆಸಲಿದ್ದಾರೆ.
ಈಗಾಗಲೇ 15 ದಿನಗಳ ಕಾಲ ಶೂಟಿಂಗ್ ನಡೆಸಿದ್ದು, ಉಳಿದ ಕೆಲ ಭಾಗದ ಶೂಟಿಂಗ್ ಥಾಯ್ಲೆಂಡ್ ನಲ್ಲಿ ಮಾಡಲಾಗುವುದು ಎಂದು ನಿರ್ದೇಶಕ ಕೆ.ಮಾದೇಶ್ ಹೇಳಿದ್ದಾರೆ.
ನಮಗೆ ಸಮಯಾವಕಾಶ ಕಡಿಮೆಯಿದ್ದು, ನವೆಂಬರ್ ಒಳಗೆ ಸಿನಿಮಾ ಶೂಟಿಂಗ್ ಮುಗಿಸಬೇಕಿದೆ. ರಾಜಕೀಯ ಎಂಟ್ರಿಗೂ ಮುನ್ನ ಉಪ್ಪಿ-ರುಪ್ಪಿ ಸಿನಿಮಾದಲ್ಲಿ ಉಪೇಂದ್ರ ಅಭಿನಯಿಸುತ್ತಿದ್ದು, ಮೋದಿ ಅವರ ನೋಟು ಅಮಾನ್ಯೀಕರಣದಿಂದಾಗಿ ದೇಶದ ಮೇಲೆ ಉಂಟಾದ ಪರಿಣಾಮಗಳ ಕುರಿತಾದ ಸಿನಿಮಾವಾಗಿದೆ. ಈ ಚಿತ್ರದಲ್ಲಿ ಉಪೇಂದ್ರ ಅವರ ಪಾತ್ರ ಆಸಕ್ತಿದಾಯಕವಾಗಿದೆ. ಸಾಮಾನ್ಯ ವ್ಯಕ್ತಿಯೊಬ್ಬ ನಾಯಕನಾಗುವ ಚಿತ್ರಕತೆಯಾಗಿದೆ. ಅವರ ಪಾತ್ರ ಭ್ರಷ್ಟ ರಾಜಕಾರಣಿಗಳ ಮುಖಕ್ಕೆ ಹಿಡಿದ ಕನ್ನಡಿಯಾಗಿದೆ. ಕೇವಲ ಉಪೇಂದ್ರ ಅವರೊಬ್ಬರಿಂದ ಮಾತ್ರ ಈ ರಾಜಕೀಯ ಡ್ರಾಮಾ ಮಾಡಲು ಸಾಧ್ಯ ಎಂದು ಅಭಿಪ್ರಾ ಪಟ್ಟಿದ್ದಾರೆ.
ಎಂ,ಎಸ್ ರಮೇಶ್ ಜೊತೆ ಉಪೇಂದ್ರ ಕೂಡ ಕೆಲ ಸನ್ನಿವೇಶಗಳ ಚಿತ್ರಕಥೆ ಬರೆದಿದ್ದಾರೆ ಎಂದು ಅವರು ಹೇಳಿದ್ದಾರೆ. ಉಪ್ಪಿ-ರುಪ್ಪಿ ಸಿನಿಮಾವನ್ನು ವಿಜಯಲಕ್ಷ್ಮಿ ಅರಸ್ ನಿರ್ಮಿಸುತ್ತಿದ್ದಾರೆ, ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ, ಸಿನಿಮಾಗೆ ಸಾಧು ಕೋಕಿಲಾ ಸಂಗೀತ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ