

ವಿಭಿನ್ನ ಚಿತ್ರಗಳ ಮೂಲಕ ಈಗಾಗಲೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ನಟಿ ಹರಿಪ್ರಿಯಾ, ಇದೀಗ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. ಸೂಜಿದಾರ ಇಂತಹ ಚಿತ್ರಗಳಲ್ಲೊಂದಾಗಿತ್ತು. ನೀರ್ ದೋಸೆ ಹಿರೋಯಿನ್ ಹರಿಪ್ರಿಯಾ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಅದು ನಟಿ ಪ್ರಧಾನ ಚಿತ್ರವಾಗಿದೆ. ಇನ್ನೂ ಹೆಸರಿಡದ ಈ ಚಿತ್ರ ಥ್ರಿಲ್ಲರ್ ಆಗಿದ್ದು ಇನ್ನೂ ಸ್ಕ್ರಿಪ್ಟ್ ಹಂತದಲ್ಲಿದೆ. ದಿಶಾ ಎಂಟರ್ಟೈನ್ ಮೆಂಟ್ ಅಡಿಯಲ್ಲಿ ನಿರ್ದೇಶಕ ಜೆ. ಶಂಕರ್ ನಿರ್ದೇಶಿಸುತ್ತಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದರೆ ಶಂಕರ್ ಅವರ ಮೊದಲ ಚಿತ್ರ ಎಂಟಿವಿ ಸುಬ್ಬಲಕ್ಷ್ಮಿಯಾಗಬೇಕಿತ್ತು. ಆದರೆ ಆ ಚಿತ್ರ ಅರ್ಧದಲ್ಲಿ ನಿಂತಿದೆ. ಹೀಗಾಗಿ ಹರಿಪ್ರಿಯಾ ಅವರ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಕಳೆದ ಶನಿವಾರ ಚಿತ್ರದ ಮುಹೂರ್ತ ನೆರವೇರಿತು. ಈ ತಿಂಗಳ ಮಧ್ಯಭಾಗದಿಂದ ಶೂಟಿಂಗ್ ಆರಂಭವಾಗಲಿದೆ. ಈ ಮಧ್ಯೆ ಚಿತ್ರದ ಕಲಾವಿದರನ್ನು ನಿರ್ದೇಶಕರು ಅಂತಿಮಗೊಳಿಸಲಿದ್ದಾರೆ.
ಬೆಲ್ ಬಾಟಮ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಹರಿಪ್ರಿಯಾ ಅವರ ಈ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಮುಂದಿನ ದಿನಗಳಲ್ಲಿ ಸಿಗಲಿದೆ.