ಸುದೀಪ್ ಜೊತೆ 'ಪೈಲ್ವಾನ' ಗೆ ಸುನಿಲ್ ಶೆಟ್ಟಿ ಎಂಟ್ರಿ
ಸುದೀಪ್ ಅವರ ಪೈಲ್ವಾನ ಚಿತ್ರದ ಇತ್ತೀಚಿನ ಫೋಟೋವೊಂದು ವೈರಲ್ ಆಗಿದೆ. ಎಸ್ ಕೃಷ್ಣ ನಿರ್ದೇಶನದ ಕ್ರೀಡೆಯಾಧಾರಿತ ಚಿತ್ರವಾದ ಪೈಲ್ವಾನದಲ್ಲಿ ನಟ ಸುದೀಪ್ ಬಾಕ್ಸರ್ ಮತ್ತು ಕುಸ್ತಿಪಟುವಾಗಿ ನಟಿಸುತ್ತಿದ್ದಾರೆ. ಇದಕ್ಕೆ ತಕ್ಕಂತೆ ದೇಹವನ್ನು ಭರಿಸಲು ಸುದೀಪ್ ಅವರು ದೇಹವನ್ನು ಸಾಕಷ್ಟು ಹುರುಗೊಳಿಸಿದ್ದಾರೆ. ಮಾರ್ಷಲ್ ಆರ್ಟ್ಸ್ ನಲ್ಲಿ ಕೂಡ ತರಬೇತಿ ಪಡೆದುಕೊಂಡಿದ್ದಾರೆ.
ಈ ಮಧ್ಯೆ ಸುದೀಪ್ ಹಲವು ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಚಿರಂಜೀವಿ ನಟನೆಯ ಸಾಯಿ ರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಕೂಡ ನಟಿಸಲಿದ್ದಾರೆ. ಇದೇ 16ರಿಂದ ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪೈಲ್ವಾನ ಚಿತ್ರದ ಶೂಟಿಂಗ್ ನಡೆಯಲಿದ್ದು ಅಲ್ಲಿಗೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಕೂಡ ಸೇರಲಿದ್ದಾರೆ. ಪೈಲ್ವಾನ ಮೂಲಕ ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ಸುನಿಲ್ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ.
ರಾಮೋಜಿ ಫಿಲ್ಮ್ ಸಿಟಿಯಲ್ಲಿ 25 ದಿನಗಳ ಶೂಟಿಂಗ್ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಈ ಶೆಡ್ಯೂಲ್ ನಲ್ಲಿ ನಾಯಕಿ ಆಕಾಂಕ್ಷ ಸಿಂಗ್, ರವಿ ಶಂಕರ್, ಕಬಿರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ಅವರ ಭಾಗದ ಚಿತ್ರೀಕರಣ ಕೂಡ ನಡೆಯಲಿದೆ. ಹೈದರಾಬಾದ್ ಮುಗಿದ ಮೇಲೆ ಕರ್ನಾಟಕದ ಒಳ ಪ್ರದೇಶಗಳಲ್ಲಿ ಶೂಟಿಂಗ್ ನಡೆಸಲು ನಿರ್ದೇಶಕರು ತೀರ್ಮಾನಿಸಿದ್ದಾರೆ.
ಆರ್ ಆರ್ಆರ್ ಮೋಷನ್ ಪಿಕ್ಸರ್ಸ್ ನಡಿ ತಯಾರಾಗುತ್ತಿರುವ ಪೈಲ್ವಾನ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಕರುಣಾಕರ್ ಅವರ ಛಾಯಾಗ್ರಹಣವಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ