ಕೇರಳ ಚಲನಚಿತ್ರ ಪ್ರಶಸ್ತಿ ಸಮಾರಂಭಕ್ಕೆ ಮೋಹನ್ ಲಾಲ್ ಆಹ್ವಾನಿಸಬಾರದೆಂಬ ಪತ್ರಕ್ಕೆ ಸಹಿ ಹಾಕಿಲ್ಲ; ಪ್ರಕಾಶ್ ರೈ ಸ್ಪಷ್ಟನೆ

ಮಲಯಾಳಂ ಚಿತ್ರೋದ್ಯಮದಲ್ಲಿನ ವಿವಾದ ಕೊನೆಯಾಗುವಂತೆ ಕಂಡುಬರುತ್ತಿಲ್ಲ. ರಾಜ್ಯ ಚಲನಚಿತ್ರ ಪ್ರಶಸ್ತಿ...
ಪ್ರಕಾಶ್ ರೈ
ಪ್ರಕಾಶ್ ರೈ

ಮಲಯಾಳಂ ಚಿತ್ರೋದ್ಯಮದಲ್ಲಿನ ವಿವಾದ ಕೊನೆಯಾಗುವಂತೆ ಕಂಡುಬರುತ್ತಿಲ್ಲ. ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವ ಗಣ್ಯರ ಪಟ್ಟಿಯಲ್ಲಿ ಮೋಹನ್ ಲಾಲ್ ಹೆಸರನ್ನು ಸೇರಿಸಬಾರದೆಂದು ಮುಖ್ಯಮಂತ್ರಿಗೆ ಸಾಮೂಹಿಕವಾಗಿ ಸಹಿ ಮಾಡಿ ಪತ್ರ ಬರೆದು ಒತ್ತಾಯಿಸಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು.

ಈ ಪತ್ರಕ್ಕೆ 105 ಮಂದಿ ವಿವಿಧ ವರ್ಗದ ಜನರು ಸಹಿ ಹಾಕಿದ್ದಾರೆ. ಅವರಲ್ಲಿ ನಟ ಪ್ರಕಾಶ್ ರೈ, ಬರಹಗಾರ ಎನ್ ಎಸ್ ಮಾಧವನ್, ನಿರ್ದೇಶಕ ರಾಜೀವ್ ರವಿ, ಡಾ ಬಿಜು, ಸಿದ್ಧಾರ್ಥ ಶಿವ, ವಿಧು ವಿನ್ಸೆಂಟ್ ಮತ್ತು ಗೀತು ಮೋಹನ್ ದಾಸ್ ಮತ್ತು ನಟಿ ರಿಮಾ ಕಲ್ಲಿಂಗಾಲ್ ಪ್ರಮುಖರು. ಈ ಪತ್ರದ ಜೊತೆ ಹೇಳಿಕೆಯೊಂದನ್ನು ಕೂಡ ಬಿಡುಗಡೆ ಮಾಡಿದ್ದಾರೆ.
ಆದರೆ ನಟ ಪ್ರಕಾಶ್ ರೈ, ತಾವು ಅಂತಹ ಯಾವುದೇ ಮನವಿ ಪತ್ರಗಳಿಗೆ ಸಹಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಟ್ವಿಟ್ಟರ್ ನಲ್ಲಿ ನಿನ್ನೆ ಸ್ಪಷ್ಟನೆ ನೀಡಿದ ಅವರು, ಕೇರಳ ಚಲನಚಿತ್ರ ಸಮಾರಂಭದಲ್ಲಿ ಮೋಹನ್ ಲಾಲ್ ಅವರು ಭಾಗವಹಿಸಬಾರದೆಂದು ಒತ್ತಾಯಿಸಿ ಮುಖ್ಯಮಂತ್ರಿಗೆ ಬರೆದಿರುವ ಪತ್ರಕ್ಕೆ ನಾನು ಸಹಿ ಹಾಕಿದ್ದೇನೆ ಎಂಬ ಸುದ್ದಿ ಹರಡಿದೆ. ಆದರೆ ಅದು ನಿಜವಲ್ಲ. ನಾನು ಅಂತಹ ಮನವಿ ಪತ್ರಕ್ಕೆ ಸಹಿ ಹಾಕಿಲ್ಲ ಮತ್ತು ಆ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಕೇರಳ ಚಲನಚಿತ್ರ ಕಲಾವಿದರ ಸಂಘ 'ಅಮ್ಮಾ' ತೆಗೆದುಕೊಂಡ ಕೆಲವು ನಿರ್ಧಾರಗಳ ಬಗ್ಗೆ ನನ್ನ ವಿರೋಧವಿದೆ, ಅಮ್ಮಾ ತೆಗೆದುಕೊಂಡ ಕೆಲವು ನಿರ್ಧಾರಗಳು ಅಸಂವೇದಿಯಾಗಿದೆ ಅದನ್ನು ನಾನು ಒಪ್ಪುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ.  ಆದರೆ ಮೋಹನ್ ಲಾಲ್ ರಂಥ ಖ್ಯಾತ ನಟನಿಗೆ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ನೀಡಬಾರದೆಂಬ ಮನವಿಗೆ ನಾನು ಸಹಿ ಹಾಕಿದ್ದೇನೆನ್ನುವುದು ಸುಳ್ಳು ಸುದ್ದಿ. ನಾನು ಅಂತಹ ಮನವಿ ಪತ್ರಕ್ಕೆ ಸಹಿ ಹಾಕಿಲ್ಲ ಎಂದಿದ್ದಾರೆ.

ರಾಜ್ಯ ಚಲನಚಿತ್ರ ಪ್ರಶಸ್ತಿ ಒಂದು ಅತ್ಯಂತ ಗೌರವಾನ್ವಿತ ಪ್ರಶಸ್ತಿ ಪ್ರದಾನವಾಗಿರುತ್ತದೆ. ಹೀಗಾಗಿ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ತುಂಬಿದ ಸಭೆಯಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಿದರೆ ಒಳ್ಳೆಯದು. ಶಾಂತಿಯುತ ವಾತಾವರಣದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಸಾಂಸ್ಕ್ರೃತಿಕ ಸಚಿವರ ಸಮ್ಮುಖದಲ್ಲಿ ನೀಡಬೇಕು. ಮುಖ್ಯಮಂತ್ರಿ ಮತ್ತು ಪ್ರಶಸ್ತಿ ವಿಜೇತರನ್ನು ಹಿಂದಿಕ್ಕಿ ಸೆಲೆಬ್ರಿಟಿ ಅತಿಥಿಗಳನ್ನು ಸಮಾರಂಭಕ್ಕೆ ಕರೆತರುವುದು ಶೋಭೆ ಅಲ್ಲ. ಇದು ಪ್ರಶಸ್ತಿ ವಿಜೇತರನ್ನು ಅಲಕ್ಷ್ಯ ಮಾಡಿದಂತೆ ಎಂದು ಮುಖ್ಯಮಂತ್ರಿಗೆ ಸಲ್ಲಿಸುವ ಮನವಿ ಪತ್ರದಲ್ಲಿನ ಸಾರಾಂಶವಾಗಿದೆ.

ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳದ ಆರೋಪ ಹೊತ್ತಿದ್ದ ಖ್ಯಾತ ನಟನನ್ನು ಅಮ್ಮಾ ಸಂಘಟನೆಗೆ ಮರು ಸೇರ್ಪಡೆ ಮಾಡಿಕೊಂಡಿರುವ ಮೋಹನ್ ಲಾಲ್ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com