ಬೆಂಗಳೂರು: "ದ್ರುವ ನಮ್ಮೊಂದಿಗಿಲ್ಲ ಎನ್ನುವುದನ್ನು ನನಗಿನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ನಾನು ಹಾಗೂ ದ್ರುವ ಹದಿನೈದು ವರ್ಷಗಳಿಂದ ಸ್ನೇಹಿತರು. ಅವನಿಷ್ಟು ಬೇಗ ದೂರವಾದದ್ದು ನನಗೆ ಅತೀವ ನೋವುಂಟುಮಾಡಿದೆ" ಹುಡುಗರು ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಅಭಿನಯ ಹೇಳಿದ್ದಾರೆ.
ದ್ರುವ ಶರ್ಮ ಅವರೊಡನೆ ನಾಯಕಿಯಾಗಿ ಅಭಿನಯಿಸಿದ ’ಕಿಚ್ಚು’ ಚಿತ್ರ ಈ ವಾರ ತೆರೆ ಕಾಣುತ್ತಿದ್ದು ಎಕ್ಸ್ ಪ್ರೆಸ್ ನಟಿ ಅಭಿನಯ ಅವರನ್ನು ವಾಟ್ಸ್ ಅಪ್ ನ ಮೂಲಕ ಸಂಪರ್ಕಿಸಿ ಮಾತನಾಡಿಸಿದೆ.
ಸ್ನೇಹಿತನೊಡನೆ ತೆರೆ ಹಂಚಿಕೊಂಡ ಕ್ಷಣಗಳನ್ನು ಮೆಲುಕು ಹಾಕಿದ ಅಭಿನಯ ಕಿಚ್ಚು ಚಿತ್ರದಲ್ಲಿ ’ನಂದಿನಿ’ ಆಗಿ ಕಾಣಿಸಲಿದ್ದಾರೆ. ದ್ರುವ ಶರ್ಮ ಹಾಗೂ ಈಕೆ ಚಿತ್ರದಲ್ಲಿ ಸಾಮಾಜಿಕ ಕಾರ್ಯಕರ್ತರ ಪಾತ್ರದಲ್ಲಿ ನಟಿಸಿದ್ದಾರೆ.
ವಿಶೇಷವೆಂದರೆ ರಾಗಿಣಿ ಹಾಗೂ ಸುದೀಪ್ ಸಹ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ವಿಶೇಷ ಪಾತ್ರಗಳಲ್ಲಿ ವೈದ್ಯರಾಗಿ ಅವರು ಅಭಿನಯಿಸಿದ್ದಾರೆ.
"ನಾನು ಸುದೀಪ್ ಹಾಗೂ ರಾಗಿಣಿಯನ್ನು ತುಂಬಾ ಇಷ್ಟಪಡುತ್ತೇನೆ. ಅವರೊಡನೆ ನಟಿಸಬೇಕೆನ್ನುವುದು ನನ್ನ ಬಹು ಕಾಲದ ಆಸೆಯಾಗಿತ್ತು. ಅದೃಷ್ಟವಶಾತ್, ನಿರ್ದೇಶಕ ಪ್ರದೀಪ್ ರಾಜ್ ತಮ್ಮ ಚಿತ್ರಕ್ಕೆ ಅವರನ್ನೇ ಆಯ್ಕೆ ಮಾಡಿಕೊಂಡಿದ್ದರು. ಚಿತ್ರೀಕರಣದ ಪ್ರತಿ ಕ್ಷಣವೂ ಅತ್ಯಂತ ಆನಂದದಾಯಕವಾಗಿತ್ತು. " ನಟಿ ಹೇಳಿದ್ದಾರೆ.
ಅಭಿನಯ ಯಾವಾಗಲೂ ಸವಾಲನ್ನು ಇಷ್ಟಪಡುತ್ತಾರೆ. ಅದಕ್ಕಾಗಿ ಅವರು ವಿಭಿನ್ನ ಪಾತ್ರಗಲನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. "ನನಗೆ ತಿಳಿದಿರುವ ಭಾಷೆ ಇಂಗ್ಲಿಷ್ ಮಾತ್ರ. ನಾನು ಎಲಾ ಭಾಷೆಯ ಚಿತ್ರಗಳಲ್ಲಿ ಅಭಿನಯಿಸುತ್ತೇನೆ ಎಂದರೆ ಅದಕ್ಕೆ ನನ್ನ ತಾಯಿ ಕಾರಣ, ಅವರಿಗೆ ಧನ್ಯವಾದ. ನನ್ನ ಸಂಭಾಷಣೆಯ ಪ್ರತಿಯೊಂದ ಡೈಲಾಗಿನ ಅರ್ಥವನ್ನು ಆಕೆ ನನಗೆ ಬಿಡಿಸಿ ಹೇಳುತ್ತಾರೆ"
ನನಗೆ ಐಶ್ವರ್ಯಾ, ತ್ರಿಶಾ, ಶ್ರೀದೇವಿಯರ ನಟನೆ ಇಷ್ಟ ಎನ್ನುವ ಈಕೆ ತಾವು ಇಂಗ್ಲಿಷ್ ಚಿತ್ರದಲ್ಲಿ ಅಭಿನಯಿಸುವ ಅವಕಾಶಕ್ಕೆ ಎದುರು ನೋಡುತ್ತಿದ್ದಾರೆ. ಅಭಿನಯ ನಟನೆಯ ’ಎ ಲಿಟಲ್ ಫಿಂಗರ್’ ಎನ್ನುವ ಫೀಚರ್ ಚಿತ್ರವೊಂದು ಸದ್ಯವೇ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ.
ಈ ನಡುವೆಯೇ ಅವರು ಎರಡು ತಮಿಳು ಚಿತ್ರಗಳಲ್ಲಿ ಸಹ ಅಭಿನಯಿಸುತ್ತಿದ್ದಾರೆ."ನನ್ನ ಎರಡು ತಮಿಳು ಚಿತ್ರಗಳ ಚಿತ್ರೀಕರಣ ಸಹ ಇಷ್ಟರಲ್ಲಿಯೇ ಪ್ರಾರಂಭವಾಗಲಿದೆ" ಅವರು ಹೇಳಿದ್ದಾರೆ. ಐತಿಹಾಸಿಕ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಇಚ್ಚೆ ಇರುವ ನಟಿ ’ಬಾಹುಬಲಿ’ಯಂತಹಾ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕರೆ ಉತ್ತಮ ಎನ್ನುತ್ತಾರೆ.