

ಚಿತ್ರದ ಕಥೆ ಇಷ್ಟವಾದರೆ ನಾನು ಯಾವುದೇ ಭಾಷೆಯಲ್ಲಿಯೂ ಅಭಿನಯಿಸಲು ಸಿದ್ಧ ಎಂದು ನಟಿ ರಶ್ಮಿಕಾ ಮಂದಣ್ಣ ಈ ಹಿಂದೆ ಹೇಳಿದ್ದರು. ಇದೀಗ ಅವರಿಗೆ ಇಷ್ಟವಾಗುವ ಕಥೆ ಸಿಕ್ಕಿದೆ ಎನಿಸುತ್ತದೆ. ಮುಂದಿನ ಕನ್ನಡ ಸಿನಿಮಾಕ್ಕೆ ಅವರು ಸಹಿ ಹಾಕಿದ್ದಾರೆ.
ಕಿರಿಕ್ ಪಾರ್ಟಿಯ ಸಾನ್ವಿಯಾಗಿ ಸ್ಯಾಂಡಲ್ ವುಡ್ ನಲ್ಲಿ ನಟಿಯಾಗಿ ಕಾಲಿಟ್ಟ ರಶ್ಮಿಕಾ ಮಂದಣ್ಣ ರಾತ್ರೋರಾತ್ರಿ ಟಾಲಿವುಡ್ ನಲ್ಲಿ ಕೂಡ ಜನಪ್ರಿಯರಾದರು. ಇದೀಗ ಮತ್ತೆ ಕನ್ನಡಕ್ಕೆ ಬಂದಿರುವ ರಶ್ಮಿಕಾ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರಕ್ಕೆ ನಾಯಕಿಯಾಗಿ ಸಹಿ ಮಾಡಿದ್ದಾರೆ. ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರವನ್ನು ಗಂಗಾಧರ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಮೊದಲ ಶೆಡ್ಯೂಲ್ ನಲ್ಲಿ ಶಾಲೆಯ ಭಾಗದ ಚಿತ್ರೀಕರಣ ಮುಗಿದಿದೆ. ನಂತರ ನಿರ್ದೇಶಕರು ಚಿತ್ರದ ಕಥೆಯ ಕೆಲಸಗಳಲ್ಲಿ ತೊಡಗಿದ್ದರು. ಆ ಸಂದರ್ಭದಲ್ಲಿ ಧ್ರುವ ಸರ್ಜಾ ಮಾವ ನಟ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ.
ಚಿತ್ರದ ತಯಾರಿ ಕೆಲಸ ಮುಂದುವರಿದಿರುವಾಗ, ನಾಯಕಿಯ ಹುಡುಕಾಟ ನಡೆಯುತ್ತಿತ್ತು. ಪಾತ್ರಕ್ಕೆ ರಶ್ಮಿಕಾ ಮಂದಣ್ಣನೇ ಸೂಕ್ತ ಎಂದು ನಿರ್ಧರಿಸಿದ ತಂಡ ಅವರನ್ನು ಸಂಪರ್ಕಿಸಿದೆ. ಚಿತ್ರದ ಕಥೆ ಕೇಳಿ ಇಷ್ಟವಾಗಿ ರಶ್ಮಿಕಾ ಕೂಡ ಒಪ್ಪಿದ್ದಾರೆ. ಪೊಗರು ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಚಿತ್ರದ ಎರಡನೇ ಭಾಗದ ಚಿತ್ರೀಕರಣ ಈ ತಿಂಗಳ 20ರಂದು ಆರಂಭವಾಗಲಿದೆ. ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ಕೂಡ ಅಭಿನಯಿಸುತ್ತಿರುವ ರಶ್ಮಿಕಾ ಮಂದಣ್ಣನ ಹಾಡಿನ ಭಾಗದ ಚಿತ್ರೀಕರಣ ನಡೆಯುವುದೊಂದು ಬಾಕಿಯಿದೆ. ನಂತರ ಅವರು ಪೊಗರು ತಂಡವನ್ನು ಸೇರಿಕೊಳ್ಳಲಿದ್ದಾರೆ.
ಇನ್ನೊಂದೆಡೆ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ವಿಜಯ್ ದೇವರಕೊಂಡ ಜೊತೆಗೆ ಡಿಯರ್ ಕಾಮ್ರೆಡ್ ನಲ್ಲಿ ಅಭಿನಯಿಸುತ್ತಿದ್ದಾರೆ.