ಮಂಡ್ಯ ಬಸ್ ದುರಂತ 'ಮಂಡ್ಯದ ಗಂಡು' ಅಂಬಿ ಮನಸ್ಸಿಗೆ ತುಂಬಾ ಗಾಸಿ ಮಾಡಿತ್ತಾ?
ಮಂಡ್ಯ ಬಸ್ ದುರಂತದಲ್ಲಿ 30 ಮಂದಿ ಮೃತಪಟ್ಟಿದ್ದು ಈ ದಾರುಣ ಸುದ್ದಿ ಕೇಳಿ ಆಘಾತವಾಗಿ ಬೇಸರಗೊಂಡು ರೆಬೆಲ್ ಸ್ಟಾರ್ ಅಂಬರೀಶ್ ಮೃತಪಟ್ಟಿದ್ದಾರಾ ಎನ್ನುವ ಪ್ರಶ್ನೆಗೆ ಅಂಬಿ ಆಪ್ತರು ಹೌದು ಎನ್ನುತ್ತಿದ್ದಾರೆ...
ಬೆಂಗಳೂರು: ಮಂಡ್ಯ ಬಸ್ ದುರಂತದಲ್ಲಿ 30 ಮಂದಿ ಮೃತಪಟ್ಟಿದ್ದು ಈ ದಾರುಣ ಸುದ್ದಿ ಕೇಳಿ ಆಘಾತವಾಗಿ ಬೇಸರಗೊಂಡು ರೆಬೆಲ್ ಸ್ಟಾರ್ ಅಂಬರೀಶ್ ಮೃತಪಟ್ಟಿದ್ದಾರಾ ಎನ್ನುವ ಪ್ರಶ್ನೆಗೆ ಅಂಬಿ ಆಪ್ತರು ಹೌದು ಎನ್ನುತ್ತಿದ್ದಾರೆ.
ಮಂಡ್ಯದಲ್ಲಿ ಹುಟ್ಟಿ ಬೆಳೆದಿದ್ದ ಅಂಬರೀಶ್ ಅವರಿಗೆ ತವರು ಜಿಲ್ಲೆಯ ಜನತೆಯ ಮೇಲೆ ಮೊದಲಿನಿಂದಲೂ ಅಪಾರ ಪ್ರೀತಿ. ಹೀಗಾಗಿ ಮಂಡ್ಯ ಕುರಿತ ಸುದ್ದಿ ಬಂದಾಗ ವಿಶೇಷವಾಗಿ ಗಮನಿಸುತ್ತಿದ್ದರು. ಶನಿವಾರ ಮಧ್ಯಾಹ್ನ ಬಸ್ ಅಪಘಾತವಾಗಿ 30 ಮಂದಿ ಮೃತಪಟ್ಟಿದ್ದ ಸುದ್ದಿ ಕೇಳಿ ಅಂಬರೀಶ್ ಅಘಾತಗೊಂಡಿದ್ದಾರೆ.
ಬಸ್ ದುರಂತದಲ್ಲಿ ಎಳೆಯ ಕಂದಮ್ಮಗಳು ಮೃತಪಟ್ಟಿದ್ದನ್ನು ನೋಡಿ ಮಮ್ಮಲ ಮರುಗಿದ್ದರು. ಈ ವಿಚಾರವಾಗಿ ಕೆಲ ಮಾಧ್ಯಮದ ಜತೆ ಮಾತನಾಡುವಾಗಲು ಅವರ ಧ್ವನಿ ಗುಂದಿತ್ತು. ಅವರ ಮಾತುಗಳಲ್ಲಿ ಅಪಾರ ನೋವು ಕಾಣಿಸುತ್ತಿತ್ತು.
ಈ ವಿಚಾರವಾಗಿ ಮನಸ್ಸಿಗೆ ಹೆಚ್ಚು ನೋವು ಮಾಡಿಕೊಂಡಿದ್ದರಿಂದ ಅವರ ದೇಹದ ಮೇಲೆ ಪರಿಣಾಮ ಬೀರಿತ್ತು. ರಕ್ತದ ಒತ್ತಡ ಏರುಪೇರಾಗಿ ಮನೆಯಲ್ಲೇ ಅಂಬರೀಶ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ವಿಕ್ರಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.