ಉತ್ತಮ ಕಥೆ ಇದ್ದರೆ ಕಡಿಮೆ ಬಜೆಟ್ ಚಿತ್ರವೂ ಯಶಸ್ವಿಯಾಗುತ್ತದೆ: ಸಿಎಂ ಕುಮಾರಸ್ವಾಮಿ

ಉತ್ತಮ ಕಥೆ ಇದ್ದರೆ ಕಡಿಮೆ ಬಜೆಟ್ ಚಿತ್ರ ಸಹ ಯಶಸ್ವಿಯಾಗುತ್ತದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ಹೇಳಿದ್ದಾರೆ.
ಸಿನಿಮೋತ್ಸವಕ್ಕೆ ಚಾಲನೆ ನೀಡುತ್ತಿರುವ ಸಿಎಂ
ಸಿನಿಮೋತ್ಸವಕ್ಕೆ ಚಾಲನೆ ನೀಡುತ್ತಿರುವ ಸಿಎಂ
ಬೆಂಗಳೂರು: ಉತ್ತಮ ಕಥೆ ಇದ್ದರೆ ಕಡಿಮೆ ಬಜೆಟ್ ಚಿತ್ರ ಸಹ ಯಶಸ್ವಿಯಾಗುತ್ತದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿರುವ ಬ್ಯಾಂಕ್ವೆಟ್​ ಹಾಲ್​ನಲ್ಲಿ 11ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ, ಕನ್ನಡದಲ್ಲಿ ಕಲಾತ್ಮಕ ಚಿತ್ರಗಳನ್ನು ಕೊಟ್ಟ ನಿರ್ದೇಶಕರಿದ್ದಾರೆ. ಡಾ.ರಾಜ್ ​ಕುಮಾರ್ ಎಲ್ಲ ತರಹದ ಪಾತ್ರ ಮಾಡಿದ ಕಲಾವಿದ. ಕನ್ನಡ ಚಿತ್ರಗಳ ಬೆಳವಣಿಗೆಗೆ ಬೇಕಾಗುವ ಬ್ಲೂ ಪ್ರಿಂಟ್ ಕೊಡಿ. ನಾವು ಅದಕ್ಕೆ ಸ್ಪಂದಿಸಲು ಸಿದ್ಧ ಎಂದು ಭರವಸೆ ನೀಡಿದರು.
ಕೆಜಿ ರಸ್ತೆಯಲ್ಲಿ ಅನೇಕ ಚಿತ್ರಮಂದಿರಗಳಿದ್ದವು. ಈಗ ಎಲ್ಲವೂ ನೆಲಸಮಗೊಂಡಿವೆ. ನಮ್ಮ ಚಿತ್ರರಂಗದಲ್ಲಿಯೇ ಒಮ್ಮತದ ಯೋಚನೆ ಮತ್ತು ಯೋಜನೆ ಇಲ್ಲ. ಸಿಎಂ ಕಚೇರಿಯಲ್ಲಿಯೇ ಕುಳಿತು ಚಿತ್ರದ ಕಲೆಕ್ಷನ್ ಹೇಳಬಲ್ಲೆ. ಕಥೆ, ಚಿತ್ರಕಥೆ, ಮೇಕಿಂಗ್ ಬಗ್ಗೆ ಗಮನ ಕೊಡಿ. ಜನ ಕಡಿಮೆ ಬಜೆಟ್ ನ ಸಿನಿಮಾನೂ ನೋಡಿ ಗೆಲ್ಲಿಸುತ್ತಾರೆ ಎಂದರು. ಅಲ್ಲದೆ ಇದಕ್ಕೆ ರಿಶಬ್ ಶೆಟ್ಟಿ ಅವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಉದಾಹರಣೆಯಾಗಿ ನೀಡಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ನಾಳೆಯಿಂದ ಒಂದು ವಾರ ಸಿನಿಮಾ ಸುಗ್ಗಿಯ ಸಂಭ್ರಮ. ಕೆಟ್ಟ ಸಿನಿಮಾಗಳು ಇಲ್ಲವೇ ಇಲ್ಲ. ಒಳ್ಳೆ ಸಿನಿಮಾಗಳ ಆಯ್ಕೆ ಮಾಡಿದ್ದೇವೆ.  ದುಂದು ವೆಚ್ಚ ಮಾಡಬೇಡಿ ಅಂತ ಸಿ.ಎಂ.ಹೇಳಿದ್ದರು ಅದನ್ನು ಪಾಲಿಸಿದ್ದೇವೆ ಎಂದರು.
ಒಟ್ಟು ಎಂಟು ದಿನಗಳ ಕಾಲ ನಡೆಯುವ ಸಿನಿಮೋತ್ಸವದಲ್ಲಿ 60 ದೇಶಗಳ 225 ಸಿನಿಮಾ ಸಿನಿಮಾಗಳು ಪ್ರದರ್ಶನ ಕಾಣಲಿವೆ. ಪಂಕಜ್ ಕುಮಾರ್ ಪಾಂಡೆ ಸ್ವಾಗತ ಭಾಷಣ ಮಾಡಿದರೆ, ಸಿನಿಮೋತ್ಸವದ ಕಿರು ಹೊತ್ತಿಗೆಯನ್ನು ಅನಂತನಾಗ್  ಬಿಡುಗಡೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಬಾಲಿವುಡ್​ ಖ್ಯಾತ ಚಲನಚಿತ್ರ ನಿರ್ದೇಶಕ ರಾಹುಲ್​ ರವೈಲ್​, ಹರ್ಷಿಕಾ ಪೂಣಚ್ಚ ಸೇರಿ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪರ್ಷಿಯನ್​ ಭಾಷೆಯ ‘ಬಾಂಬ್​, ಎ ಲವ್​ ಸ್ಟೋರಿ’ ಹೆಸರಿನ ಚಿತ್ರ ಪ್ರದರ್ಶನಗೊಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com