ನನ್ನನ್ನು ಹೆಚ್ಚು ಅನ್ವೇಷಿಸುವಂಥ ಪಾತ್ರಗಳು ಇನ್ನೂಸಿಕ್ಕಿಲ್ಲ: ರಶ್ಮಿಕಾ ಮಂದಣ್ಣ

ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಸುದ್ದಿಯಲ್ಲಿದ್ದಾರೆ. ಅವರ ಕೈಯಲ್ಲಿ ಸಾಕಷ್ಟು ...
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ
ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಸುದ್ದಿಯಲ್ಲಿದ್ದಾರೆ. ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ತೆಲುಗಿನಲ್ಲಿ 3, ಕನ್ನಡ ಮತ್ತು ತಮಿಳಿನಲ್ಲಿ ತಲಾ ಒಂದೊಂದು ಚಿತ್ರಗಳಿವೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೆಡ್ ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ತಮ್ಮ ಚಿತ್ರ, ನಟನೆ ಬಗ್ಗೆ ಮಾತನಾಡಿದ್ದಾರೆ.
ಡಿಯರ್ ಕಾಮ್ರೆಡ್ ಗಾಗಿ ಕ್ರಿಕೆಟ್ ಆಡುವುದನ್ನು ಕಲಿತರಂತೆ, ಅದರ ಅನುಭವ ಹೇಗಿತ್ತು?
-ಹೌದು, ಚಿತ್ರಕ್ಕಾಗಿ ಕಲಿಯಬೇಕಾಯಿತು, ನಿರ್ದೇಶನ ತಂಡದ ಜೊತೆಗೆ ಸಹ ಕೆಲವು ಮ್ಯಾಚ್ ಗಳನ್ನು ನಂತರ ಆಡಿದ್ದೇನೆ. ಚಿತ್ರದಲ್ಲಿ ಕೇವಲ 5 ನಿಮಿಷಗಳ ಕ್ರಿಕೆಟ್ ಸನ್ನಿವೇಶ ಇದ್ದರೂ ಕೂಡ ಇದಕ್ಕಾಗಿ ನಾಲ್ಕೈದು ತಿಂಗಳು ಅಭ್ಯಾಸ ಮಾಡಬೇಕಾಯಿತು. ನಾನು ಇದುವರೆಗೆ ಮಾಡಿರುವ ಪಾತ್ರಕ್ಕಿಂತ ಇದು ಭಿನ್ನ. ಈ ಪಾತ್ರ ಮಾಡಲು ಸಾಧ್ಯವಿದೆಯೆಂದು ನನಗೆ ನಂಬಿಕೆ ಇರಲಿಲ್ಲ, ಆದರೆ ಚಿತ್ರತಂಡಕ್ಕಿತ್ತು. ಯುವ, ಆತ್ಮವಿಶ್ವಾಸ ಕ್ರಿಕೆಟರ್ ಹುಡುಗಿ ಪಾತ್ರವಿದು.
ತೆಲುಗು ಚಿತ್ರರಂಗದಲ್ಲಿ ಹೇಗೆ ಗುರುತಿಸಿಕೊಳ್ಳುತ್ತೀರಿ? ಭಾಷೆಗೆ ಅನುಗುಣವಾಗಿ ನಿನ್ನ ಮೇಲಿನ ನಿರೀಕ್ಷೆ ಬದಲಾಗುತ್ತದೆಯೇ?
-ಕನ್ನಡದಲ್ಲಿ ಪ್ರೇಕ್ಷಕರು ಏನು ಬಯಸುತ್ತಾರೆ ಅದನ್ನು ಮಾಡುತ್ತೇನೆ. ತೆಲುಗಿನಲ್ಲಿ ನನಗೆ ಇಷ್ಟವಿದ್ದದ್ದನ್ನು ಮಾಡುತ್ತೇನೆ. ಕನ್ನಡ ಪ್ರೇಕ್ಷಕರು ನನಗೆ ಹತ್ತಿರ, ಯಾಕೆಂದರೆ ಕನ್ನಡದಲ್ಲಿಯೇ ನಾನು ನಟನೆ ಆರಂಭಿಸಿದ್ದು. ಅವರು ನನ್ನನ್ನು ಸ್ವೀಕರಿಸಿದ್ದಾರೆ, ಅವರು ನನ್ನನ್ನು ದೂಷಿಸಿದರೂ ನಾನು ಅವರನ್ನು ಬಿಡುವುದಿಲ್ಲ, ಅಂತಾ ಹಠವಾದಿ ನಾನು.
ತೆಲುಗಿನಲ್ಲಿ ನನ್ನ ಮೊದಲ ಚಲೋ ಚಿತ್ರ ತೆಗೆದುಕೊಳ್ಳಿ, ಇಲ್ಲಿ ನಾನು ಬಂಡಾಯದ ಕಾಲೇಜು ಹುಡುಗಿ ಪಾತ್ರ ಮಾಡಿದೆ. ಅದು ಪ್ರೇಕ್ಷಕರಿಗೆ ಇಷ್ಟವಾಯಿತು. ಅದರಲ್ಲಿ ನಟನೆ ಮತ್ತು ನೋಟ ಎರಡಕ್ಕೂ ಅವಕಾಶವಿತ್ತು. ಇನ್ನು ಗೀತ ಗೋವಿಂದದಲ್ಲಿ ಸಂಪೂರ್ಣ ವಿಭಿನ್ನ ಪಾತ್ರ, ಅಂದರೆ ನಾನು ಭಾವನಾತ್ಮಕ ಮತ್ತು ಸಿಟ್ಟಿನ ಪಾತ್ರ ಮಾಡಬಹುದು ಎಂದು ಜನ ಅರ್ಥಮಾಡಿಕೊಂಡಿದ್ದಾರೆ. ತೆಲುಗಿನಲ್ಲಿ ನನ್ನ 3ನೇ ಚಿತ್ರ ದೇವದಾಸ್ ನ್ನು ನಾನೇ ಮೊದಲು ಆಯ್ಕೆಮಾಡಿಕೊಂಡದ್ದಲ್ಲ, ಚಿತ್ರತಂಡ. ಅದರಲ್ಲಿ ಆಕ್ಷನ್, ತಮಾಷೆಗೆ ಅವಕಾಶವಿತ್ತು.
ಇಂದು ಸಿನಿಮಾದಲ್ಲಿ ಹೆಣ್ಣನ್ನು ತೋರಿಸುವ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಏನು ಹೇಳುತ್ತೀರಿ?
-ಇದು ಪುರುಷ ಕೇಂದ್ರಿತ ಉದ್ಯಮ, ಅದು ನಿಯಮವಾಗಿಬಿಟ್ಟಿದೆ. ಆದರೂ ಮಹಿಳೆಯರು ಇಂದು ಗುರುತಿಸಿಕೊಳ್ಳುತ್ತಿರುವುದು ವಿಶೇಷ, ಕನ್ನಡ ಚಿತ್ರೋದ್ಯಮದಲ್ಲಿ ಮಹಿಳೆಯರು ಯಾರ ಮೇಲೆ ಕೂಡ ಅವಲಂಬಿತವಾಗಿಲ್ಲ, ನನ್ನ ವಿಷಯದಲ್ಲಿ ಜನರ ಮುಂದೆ ಎಲ್ಲ ಹೇಳಲು ಭಯಪಡುತ್ತೇನೆ. ಅವರು ಯಾವ ರೀತಿ ಹೇಳಿಕೆಯನ್ನು ತೆಗೆದುಕೊಳ್ಳುತ್ತಾರೆ, ಏನು ಮಾಡುತ್ತಾರೆ ಎಂದು ಗೊತ್ತಾಗುವುದಿಲ್ಲ, ನಾವು ಮನುಷ್ಯರು, ತಪ್ಪು ಮಾಡುತ್ತೇವೆ. ನಾವು ಸಾರ್ವಜನಿಕ ಸ್ವತ್ತು ಎಂಬ ರೀತಿಯಲ್ಲಿ ಜನರು ಮಾತನಾಡುತ್ತಾರೆ. ನಟರು ಹೊರಜಗತ್ತಿಗೆ ಭಯವಿಲ್ಲದಂತೆ ಕಾಣುತ್ತಾರೆ, ಆದರೆ ಇದು ಎಲ್ಲರಿಗೂ ಅನುಭವಕ್ಕೆ ಬರುತ್ತದೆ. 
ನನ್ನ ಎರಡನೇ ಕನ್ನಡ ಸಿನಿಮಾ ಅಂಜನಿ ಪುತ್ರದಲ್ಲಿ ಯಾರೋ ತಪ್ಪು ಹೇಳಿದರು ಎಂದು ತಡೆ ತಂದರು. ಅದು ನನ್ನ ಎರಡನೇ ಚಿತ್ರವಾಗಿದ್ದರಿಂದ ಹೆಚ್ಚು ಗೊತ್ತಿರಲಿಲ್ಲ. ಈಗ ನಾನು ಸ್ವಲ್ಪ ಹೆಚ್ಚು ತಿಳಿದುಕೊಂಡಿದ್ದೇನೆ, ಜಗತ್ತು ಎಷ್ಟು ನಿರ್ದಯವಾಗಿದೆ ಎಂದು ಅರ್ಥ ಮಾಡಿಕೊಂಡಿದ್ದೇನೆ.
ಇಂದು ಕನ್ನಡ ಭಾಷೆಯಲ್ಲಿ ಹಲವು ಉತ್ತಮ ಯೋಚನೆಗೆ ಒರೆಹಚ್ಚುವ ಚಿತ್ರಗಳು ಬರುತ್ತಿವೆ, ಯುವ ನಿರ್ದೇಶಕರು ಮತ್ತು ನಿರ್ಮಾಪಕರು ಚಿತ್ರದ ಬಜೆಟ್ ಅಥವಾ ಬಾಕ್ಸ್ ಆಫೀಸ್ ಸಕ್ಸಸ್ ನೋಡದೆ ಚಿತ್ರ ಮಾಡುತ್ತಾರೆ. 
ಕಿರಿಕ್ ಪಾರ್ಟಿಯಲ್ಲಿನ ಮುಗ್ಧ ಪಾತ್ರಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಯಿತು. ನಂತರ ಅಂತಹದ್ದೇ ಪಾತ್ರಗಳು ನನಗೆ ತುಂಬ ಬಂದವು, ಆದರೆ ನಾನು ಆ ಇಮೇಜ್ ನಿಂದ ಹೊರಬರಲು ಯತ್ನಿಸಿ ಬೇರೆ ರೀತಿಯ ಪಾತ್ರಗಳನ್ನು ಒಪ್ಪಿಕೊಳ್ಳಲು ಆರಂಭಿಸಿದೆ. 
ನಿಮ್ಮ ಪಾತ್ರ, ನಟನೆ ಬಗ್ಗೆ ಟೀಕೆ ವ್ಯಕ್ತವಾಗುವುದನ್ನು ಹೇಗೆ ತೆಗೆದುಕೊಳ್ಳುತ್ತೀರಿ?
-ನನ್ನನ್ನು ಇಷ್ಟಪಡದವರು ಒಬ್ಬರಾದರೂ ಇದ್ದಾರೆ. ದಿನಗಳೆದಂತೆ ಸಮಯ ಹೋದಂತೆ ಟೀಕೆಗಳನ್ನು ಎದುರಿಸುವುದು ಅಭ್ಯಾಸವಾಗಬಹುದು. ಸದ್ಯ ಟೀಕೆಗಳಿಂದ ಖಂಡಿತ ನೋವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com