10ನೇ ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್: ಮೂರು ಪ್ರಶಸ್ತಿ ಬಾಚಿಕೊಂಡ 'ಮನರೂಪ'

ಕನ್ನಡದ ಹೊಸ ತಲೆಮಾರಿನ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ “ಮನರೂಪ” ಪ್ರತಿಷ್ಠಿತ ‘10ನೇ ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್’ನಲ್ಲಿ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. 
ಮನರೂಪ ಸ್ಚಿಲ್
ಮನರೂಪ ಸ್ಚಿಲ್

ಕನ್ನಡದ ಹೊಸ ತಲೆಮಾರಿನ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ “ಮನರೂಪ” ಪ್ರತಿಷ್ಠಿತ ‘10ನೇ ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್’ನಲ್ಲಿ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ನಿರ್ದೇಶಕ ಕಿರಣ್ ಹೆಗಡೆ ಅವರು ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಯನ್ನು, ಗೋವಿಂದರಾಜ್ ಅವರು ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನು ಹಾಗೂ ಅಮೋಘ್ ಸಿದ್ಧಾರ್ಥ್ ಅತ್ಯುತ್ತಮ ಸಹನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಹೆಸರು ಗಳಿಸಿ ಚಿತ್ರರಂಗಕ್ಕೆ ಕಾಲಿಟ್ಟ ಕಿರಣ್ ಹೆಗಡೆ ನಿರ್ದೇಶಿಸಿದ ಮೊದಲ ಚಿತ್ರ ಮನರೂಪ. ಹೊಸ ತಲೆಮಾರಿನವರ ಆತ್ಮರತಿ, ಪ್ರೀತಿಪಾತ್ರರ ನಿರ್ಲಕ್ಷ್ಯದ ಕಾರಣದಿಂದ ಅವರಲ್ಲಿ ಮೂಡಿದ ನಾರ್ಸಿಸಿಸಂ, ಒಂಟಿತನದ ಸಮಸ್ಯೆ, ಸ್ವಯಂ ಹಾನಿ, ವಿಚ್ಛೇದನ, ಮದುವೆಯಲ್ಲಿ ಪ್ರೀತಿಯ ವೈಫಲ್ಯ, ಮದುವೆಯಿಲ್ಲದ ಬದುಕು, ಲಿವಿಂಗ್ ಟುಗೆದರ್, ಎಲ್ಲದರಿಂದಲೂ ಓಡಿಹೋಗುವ ಬಯಕೆ ಮುಂತಾದ ಭಾವನೆಗಳನ್ನು ವಿಭಿನ್ನ ಶೈಲಿಯಲ್ಲಿ ಕಟ್ಟಿಕೊಟ್ಟ ಚಿತ್ರವಿದು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಶಿರಸಿ ಹಾಗೂ ಸಿದ್ದಾಪುರದ ದಟ್ಟ ಕಾಡಿನಲ್ಲಿ ಇಡೀ ಸಿನಮಾ ಚಿತ್ರೀಕರಣಗೊಂಡಿದೆ.

ಮನರೂಪ ಚಿತ್ರ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ವ್ಯಾಪಕ ಮನ್ನಣೆ ಗಳಿಸುತ್ತಿದ್ದು, ಚಿತ್ರ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಟರ್ಕಿಯ ಇಸ್ತಾಂಬುಲ್ ಫಿಲ್ಮ್ ಅವಾರ್ಡ್ಸ್ ಚಲನಚಿತ್ರೋತ್ಸವದಲ್ಲ್ಲಿ, ಅಮೆರಿಕದ ಮಯಾಮಿ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಹಾಗೂ ಮುಂಬೈನ ಕೆಫೆ ಇರಾನಿ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಶಸ್ತಿಗಳನ್ನು ಪಡೆದಿದೆ. ಈಗ ಅಮೆಜಾನ್ ಪ್ರೈಮ್‌ನಲ್ಲಿ ಮನರೂಪ ಪ್ರದರ್ಶನಗೊಳ್ಳುತ್ತಿದ್ದು, ಜಗತ್ತಿನಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.

ಯಾವುದೇ ಉದ್ದೇಶವಿಲ್ಲದೆ ಬದುಕುವ ಅವರ ಬದುಕಿನ ಉದ್ದೇಶವೇ ಸಿನಿಮಾಕ್ಕೆ ಥ್ರಿಲ್ ನೀಡುತ್ತದೆ. ಶರವಣ ಸಂಗೀತ ನೀಡಿದ್ದಾರೆ. ಪತ್ರಕರ್ತ ಮತ್ತು ಸಾಹಿತಿ ಮಹಾಬಲಸೀತಾಳಭಾವಿ ಸಂಭಾಷಣೆ ಬರೆದಿದ್ದಾರೆ. ಈ ಮನರೂಪ ಚಿತ್ರ ಉತ್ತಮ ಪ್ರಶಂಸೆ ಪಡೆದು ಎಲ್ಲರ ಮನಸ್ಸನ್ನು ಗೆದ್ದು ಪ್ರಶಸ್ತಿಗಳನ್ನು ತನ್ನತ್ತ ಬಾಚಿಕೊಳ್ಳುತ್ತಿವೆ. ಈ ಸಂತೋಷವು ಇಡೀ ಚಿತ್ರ ತಂಡದ ಹುಮ್ಮಸ್ಸನ್ನು ಹೆಚ್ಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com