ಗೃಹಿಣಿಯರಿಗೆ ಗುಡ್ ನ್ಯೂಸ್: ಧಾರಾವಾಹಿಗಳ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್, ಷರತ್ತು ಅನ್ವಯ!
ಬೆಂಗಳೂರು: ಅತ್ಯಲ್ಪ ಪ್ರಮಾಣದ ಕಲಾವಿದರನ್ನು ತಂತ್ರಜ್ಞರನ್ನು ಬಳಸಿಕೊಂಡು ಟಿವಿ ಸೀರಿಯಲ್ ಗಳನ್ನು ಮನೆಯ ಒಳಗೆ ಚಿತ್ರೀಕರಣ ನಡೆಸಲು ರಾಜ್ಯ ಸರ್ಕಾರ ಷರತ್ತುಬದ್ದ ಅನುಮತಿ ನೀಡಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಟೆಲೆವಿಜನ್ ಅಸೋಸಿಯೇಷನ್ ಜೊತೆ ಸಭೆ ನಡೆಸಲಾಯಿತು,ಸಭೆಯಲ್ಲಿ ಕಿರುತೆರೆ ಎದುರಿಸು ತ್ತಿರುವ ಸಂಕಷ್ಟ ಕುರಿತು ಚರ್ಚೆ ನಡೆಸಲಾಯಿತು,ಆರ್ಥಿಕ ಸಂಕಷ್ಟವನ್ನು ತಡೆಯಲು ಚಿತ್ರೀಕರಣ ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಲಾಯಿತು,ಮನವಿಗೆ ಸ್ಪಂಧಿಸಿದ ಸರ್ಕಾರ ಕೊರೊನಾ ಮಾರ್ಗಸೂಚಿ ಪಾಲನೆಯ ಷರತ್ತವಿಧಿಸಿ ಚಿತ್ರೀಕರಣಕ್ಕೆ ಅನುಮತಿ ನೀಡಿತು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಕಿರುತೆರೆ ಚಿತ್ರ ನಿರ್ಮಾಣ, ಟಿವಿ ಸೀರಿಯಲ್ ಕಲಾವಿದರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ನನ್ನನ್ನು ಭೇಟಿ ಮಾಡಿದ್ದರು ಅವರೊಂದಿಗೆ ಸಿಎಂ ಭೇಟಿ ಮಾಡಿ ಟಿವಿ ಸೀರಿಯಲ್ ಆರಂಭ ಕುರಿತು ಚರ್ಚೆ ನಡೆಸಲಾಗಿದೆ. ಮನೆಯೊಳಗೆ ಹತ್ತರಿಂದ ಹನ್ನೆರಡು ಜನ ಸೇರಿ ಚಿತ್ರೀಕರಣ ನಡೆಸಲು ಮಾತ್ರ ಅವಕಾಶ ನೀಡ ಬೇಕು ಎಂದು ತಿಳಿಸಿದರು.
ಕ್ಯಾಮರಾಮನ್, ಲೈಟ್ ಬಾಯ್ ಬಿಟ್ಟರೆ ಟ್ರಾಲಿ ಇತ್ಯಾದಿಗಳು ಇರುವಂತಿಲ್ಲ, ರಸ್ತೆಯಲ್ಲಿ ಸಾರ್ವಜನಿಕವಾಗಿ ಚಿತ್ರೀಕರಿಸಲು ಕೊರೊನಾ ಸಂದರ್ಭದಲ್ಲಿ ಅನುಮತಿ ಇಲ್ಲ ಆದರೆ ಇನ್ ಡೋರ್ ನಲ್ಲಿ ಕಿರುಚಿತ್ರಗಳನ್ನು ನಿರ್ಮಿಸಲು ಟಿವಿ ಸೀರಿಯಲ್ ಗಳನ್ನು ಕೊರೊನಾ ನಿಯಮಗಳನ್ನು ಪಾಲಿಸಿಕೊಂಡು ಚಿತ್ರೀಕರಣ ನಡೆಸಲು ಸಮ್ಮತಿಸಲಾಗಿದೆ ಎಂದರು.
ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜತೆ ಚರ್ಚೆ ನಡೆಸಲಾಗಿದೆ, ಮನೆಯೊಳಗಡೆ ಚಿತ್ರೀಕರಣಕ್ಕೆ ಸರ್ಕಾರದ ಅಭ್ಯಂತರವಿಲ್ಲ ಕೊರೊನಾ ಸಂದರ್ಭದಲ್ಲಿ ಏನೇನು ನಿಯಮಗಳನ್ನು ಪಾಲಿಸಬೇಕು ಅದನ್ನೆಲ್ಲ ಪಾಲಿಸಿಕೊಂಡು ಚಿತ್ರೀಕರಣ ಮಾಡ ಬಹುದಾಗಿದೆ ಯಾವುದೇ ರೀತಿಯಲ್ಲೂ ರಿಯಾಲಿಟಿ ಶೋಗಳ, ಸಿನಿಮಾ ಚಿತ್ರಗಳ ಚಿತ್ರೀಕರಣ ನಡೆಸುವಂತಿಲ್ಲ ಅದಕ್ಕೆಲ್ಲ ಜನ ಸೇರ ಲಿದ್ದಾರೆ ಕೇಂದ್ರ ಸರ್ಕಾರವೂ ಅದಕ್ಕೆ ಅನುಮತಿ ನೀಡುವುದಿಲ್ಲ ಕೇವಲ ಮನೆಯ ಒಳಗಡೆ ಚಿತ್ರೀಕರಣ ನಡೆಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ,ರಸ್ತೆಯಲ್ಲಿ ಟಿವಿ ಸೀರಿಯಲ್ ಗಳ ಚಿತ್ರೀಕರಣಕ್ಕೆ ಅನುಮತಿ ಇರುವುದಿಲ್ಲ ಎಂದರು.
ಕೋರೋನಾ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಲಾಕ್ ಡೌನ್ ನಿಂದಾಗಿ ಕಿರುತೆರೆಯ 6೦೦೦ ಕಾರ್ಮಿಕರ ಜೀವನ ದುಸ್ತರವಾಗಿದೆ.ಲಾಕ್ ಡೌನ್ ನಿಂದಾಗಿ 110 ಕ್ಕೂ ಹೆಚ್ಚು ಸೀರಿಯಲ್ ಗಳು ನಿರ್ಮಾಣ ಸ್ಥಗಿತವಾಗಿದೆ. ಟಿವಿ ಸೀರಿಯಲ್ ಗಳು ಸಿನಿಮಾ ಗಳಂತೆ ಸಾಕಷ್ಟು ಜನ ಸಂದಣಿಯಲ್ಲಿ ನಿರ್ಮಾಣ ಕೆಲಸ ನಿರ್ವಹಿಸುವುದಿಲ್ಲ. ಮನೆಗಳ ಒಳಗಡೆ ಹಾಗೂ ಸೆಟ್ ಗಳಲ್ಲಿ ನಿರ್ಮಾಣ ಮಾಡ ಲಾಗುವುದು. ಆ ಮೂಲಕ ಕೊರೋನಾ ನಿಯಂತ್ರಣಕ್ಕೆ ಬೇಕಾದ ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಹೀಗಾಗಿ ಕಿರು ತೆರೆ ಚಿತ್ರ ನಿರ್ಮಾಣಕ್ಕೆ ಲಾಕ್ ಡೌನ್ ನಿಯಮಾವಳಿಗಳಲ್ಲಿ ನಿರ್ಬಂಧ ಹೇರಿಲ್ಲ.
ಸರ್ಕಾರಕ್ಕೆ ಕಿರುತೆರೆ ಚಿತ್ರ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ಮುಖ್ಯಮಂತ್ರಿಗಳಲ್ಲು ಮನವಿ ಮಾಡಿದ್ದೇವೆ. ಕಿರುತೆರೆ ಚಿತ್ರ ನಿರ್ಮಾಣಕ್ಕೆ ಮುಖ್ಯಮಂತ್ರಿ ಅವರು ಅನುಮತಿ ನೀಡಿದ್ದಾರೆ. ಒಳಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದು, ಸೀರಿಯಲ್ ಗಳ ಸ್ಕ್ರಿಪ್ಟ್ ಗಳನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಡ ಮಾಡಿಕೊಳ್ಳಲಾಗುವುದು ಎಂದು ಕಿರುತೆರೆ ಚಿತ್ರ ನಿರ್ಮಾಣ ಸಂಘದ ಅಧ್ಯಕ್ಷ ಶಶಿಕುಮಾರ್ ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ