ಯಾವುದದು ಪ್ಯಾನ್ ಇಂಡಿಯಾ? ನಮ್ಮ ಹೊಟ್ಟೆ ತುಂಬಿಸಲ್ಲ: ನವರಸ ನಾಯಕ ಜಗ್ಗೇಶ್ ಕಿಡಿ

'ಯಾವುದು ಅದು ಪ್ಯಾನ್‌ ಇಂಡಿಯಾ...? ಪ್ಯಾನ್ ಇಂಡಿಯಾ ಸಿನಿಮಾ ಬಂದು ನಮ್ಮನ್ನ ಉದ್ದಾರ ಮಾಡಲ್ಲ. ಪ್ಯಾನ್ ಇಂಡಿಯಾದಿಂದ ನಮ್ಮ‌ ಕನ್ನಡಿರಿಗೆ ಕೆಲಸ ಇಲ್ಲ. ಯಾರನ್ನೋ‌ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಹಾಗಿದೆ. ಇದರಿಂದ ನಮ್ಮ‌ ನೆಲದ ಜನರಿಗೆ ಕೆಲಸ ಇಲ್ಲದಂತಾಗಿದೆ' ಎಂದು ನಟ ಜಗ್ಗೇಶ್ ಕಿಡಿ ಕಾರಿದ್ದಾರೆ.
ಪರಿಮಳ-ಜಗ್ಗೇಶ್
ಪರಿಮಳ-ಜಗ್ಗೇಶ್
Updated on

ಬೆಂಗಳೂರು: 'ಯಾವುದು ಅದು ಪ್ಯಾನ್‌ ಇಂಡಿಯಾ...? ಪ್ಯಾನ್ ಇಂಡಿಯಾ ಸಿನಿಮಾ ಬಂದು ನಮ್ಮನ್ನ ಉದ್ದಾರ ಮಾಡಲ್ಲ. ಪ್ಯಾನ್ ಇಂಡಿಯಾದಿಂದ ನಮ್ಮ‌ ಕನ್ನಡಿರಿಗೆ ಕೆಲಸ ಇಲ್ಲ. ಯಾರನ್ನೋ‌ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಹಾಗಿದೆ. ಇದರಿಂದ ನಮ್ಮ‌ ನೆಲದ ಜನರಿಗೆ ಕೆಲಸ ಇಲ್ಲದಂತಾಗಿದೆ' ಎಂದು ನಟ ಜಗ್ಗೇಶ್ ಕಿಡಿ ಕಾರಿದ್ದಾರೆ. 

ಚಿತ್ರರಂಗ ಪ್ರವೇಶಿಸಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು. ಈ ವೇಳೆ ಪ್ಯಾನ್ ಇಂಡಿಯಾ ಕುರಿತ ಅಸಮಾಧಾನ ವ್ಯಕ್ತಪಡಿಸಿದರು. ಕನ್ನಡ ಸಿನಿಮಾರಂಗ ಹಾಗೂ ಕನ್ನಡ ಕಲಾವಿದರನ್ನು ಉಳಿಸುವಂತಹ ಕೆಲಸ ಆಗಬೇಕಿದೆ 'ಪ್ಯಾನ್ ಇಂಡಿಯಾ ನಮ್ಮನ್ನ ಉದ್ದಾರ ಮಾಡಲ್ಲ' ಎಂದು ಖಂಡಿಸಿದರು.

ಕನ್ನಡ ಚಿತ್ರೋದ್ಯಮ ಹಾಗೂ ಕನ್ನಡ ಮಾಧ್ಯಮಗಳು ನಮ್ಮತನವನ್ನು ಉಳಿಸಿಕೊಳ್ಳಬೇಕಿದೆ. ನಮ್ಮವರ ಬೆಂಬಲಕ್ಕೆ ನಿಲ್ಲಬೇಕಿದೆ. ಮುಂದಿನ ಪೀಳಿಗೆ ಬೆಳೆಯಬೇಕಿದೆ. ಈ ಬಗ್ಗೆ ಗಮನ ಕೊಡಿ ಎಂದು ಮನವಿ ಮಾಡಿಕೊಂಡರು.

ಇತ್ತೀಚಿನ ವರ್ಷಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಪರಿಕಲ್ಪನೆ ಟ್ರೆಂಡ್ ಆಗಿದೆ. ಒಂದು ಭಾಷೆಯಲ್ಲಿ ಸಿನಿಮಾ ತಯಾರಿಸಿದರೂ ಅದನ್ನು ನಾಲ್ಕೈದು ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡುವುದು ಸಂಪ್ರದಾಯವಾಗಿದೆ. ಕಥೆ, ಕಲಾವಿದರು ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಮಂದಿ ಪ್ಯಾನ್ ಇಂಡಿಯಾ ಎಂಬ ಟ್ರೆಂಡ್ ಹಿಂದೆ ಹೋಗ್ತಿದ್ದಾರೆ. ಸ್ಟಾರ್ ನಟರ ಚಿತ್ರಗಳು ಸೆಟ್ಟೇರುತ್ತಲೇ ಇದು ಪ್ಯಾನ್ ಇಂಡಿಯಾ ಸಿನಿಮಾ ಎಂದು ಪ್ರಚಾರ ಶುರುವಾಗುತ್ತದೆ. ಕೆಜಿಎಫ್, ಕುರುಕ್ಷೇತ್ರ, ಪೈಲ್ವಾನ್ ಚಿತ್ರಗಳು ಬಹುಭಾಷೆಯಲ್ಲಿ ಯಶಸ್ಸು ಕಂಡ ಬಳಿಕ ಗಾಂಧಿನಗರದಲ್ಲಿ ಇಂತಹದೊಂದು ಟ್ರೆಂಡ್ ಹೆಚ್ಚಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಪ್ಯಾನ್ ಇಂಡಿಯಾ ಚಿತ್ರಗಳ ಕುರಿತು ಜಗ್ಗೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಜಗ್ಗೇಶ್ ಜತೆ ಡಾ. ರಾಜ್ ಚರ್ಚಿಸುತ್ತಿದ್ದ ವಿಷಯ ಯಾವುದು?      
ಬೆಂಗಳೂರು: ಮಧ್ಯಮ ವರ್ಗದ ಕುಟುಂಬದಿಂದ ಬಂದಂತಹ ಜಗ್ಗೇಶ್‍, ಚಿತ್ರರಂಗ ಪ್ರವೇಶಿಸಿ ತಮ್ಮೆಲ್ಲ ಕನಸುಗಳನ್ನು ನನಸಾಗಿಸಿಕೊಂಡವರು. ಈ ನಾಲ್ಕು ದಶಕಗಳ ಜರ್ನಿಯನ್ನು ಅವಲೋಕಿಸುವಾಗ, ಒಂದು ಕ್ಷಣ ಜಗ್ಗೇಶ್ ಭಾವುಕರಾದರು. ಕುಟುಂಬದ ಹಿನ್ನೆಲೆ ನೋಡಿದಾಗ ಇದೆಲ್ಲ ನಿಜಕ್ಕೂ ಸಾಧ್ಯವಾಯಿತಾ? ಎನಿಸುತ್ತಿದೆ ಎಂದಾಗ ಅವರ ಕಣ್ಣು ತೇವವಾಗಿತ್ತು. ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಗ್ಗೇಶ್,  “ಡಾ. ರಾಜ್ ಕುಮಾರ್ ನಟ ಮಾತ್ರವಲ್ಲ. ಅವರೊಳಗೊಬ್ಬ ಸಂತ ಇದ್ದರು.  ಅನೇಕ ಸಲ ಇಬ್ಬರೂ ಚರ್ಚಿಸುತ್ತಾ ಕುಳಿತುಬಿಡುತ್ತಿದ್ದೆವು. ಸಮಯದ ಪರಿವೆಯೇ ಇರುತ್ತಿರಲಿಲ್ಲ. ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಮಾತುಕತೆ ನಡೆಯುತ್ತಿತ್ತು” ಎಂದರು.      

ಸಂಧ್ಯಾವಂದನೆ ಮಾಡುತ್ತಿದ್ದ ರಾಜ್!      
ರಾಜ್ ಕುಮಾರ್ ಅವರು ಆಧ್ಯಾತ್ಮಿಕವಾಗಿ ಅಂತರಂಗ ಸಾಧಕರಾಗಿದ್ದರು. ಸಂಧ್ಯಾವಂದನೆ ಕಲಿತು ಅದನ್ನು ಅನುಷ್ಠಾನವನ್ನಾಗಿಸಿಕೊಂಡಿದ್ದರು. ಆದರೆ ಸಾಕಷ್ಟು ಜನರಿಗೆ ಈ ವಿಷಯ ತಿಳಿದಿಲ್ಲ ಎಂದು  ಜಗ್ಗೇಶ್ ಹೇಳಿದರು. ಆಧ್ಯಾತ್ಮಿಕ ಅಥವಾ ಅದರ ಅನುಭವಗಳನ್ನು ಚರ್ಚೆಗೆ  ತರುವುದು ಸರಿಯಲ್ಲ. ಏಕೆಂದರೆ ಎಷ್ಟೋ ಜನರಿಗೆ ಅದು ಇಷ್ಟವಾಗುವುದಿಲ್ಲ. ಹೀಗಾಗಿ ಅದರ ಸವಿಯನ್ನು ನಮ್ಮೊಳಗೇ ಸವಿಯಬೇಕು ಎಂದರು.

ಅತಿಥಿ ಪಾತ್ರಕ್ಕೆ ಅಂಬಿ ಒಪ್ಪಿಕೊಂಡ ಕ್ಷಣ.... 
ಬೆಂಗಳೂರು: ತಮ್ಮ ಚಿತ್ರದಲ್ಲಿ ಅತಿಥಿ ಪಾತ್ರವೊಂದಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಕರೆಯಲು ಹೋದಾಗಿನ ಘಟನೆಯನ್ನು ಜಗ್ಗೇಶ್ ಹಂಚಿಕೊಂಡಿದ್ದಾರೆ. ಒಂದೆರಡು ಹಿಟ್ ಚಿತ್ರಗಳನ್ನು ಕೊಟ್ಟವರನ್ನು ಅತಿಥಿ ಪಾತ್ರಕ್ಕೆ ಕರೆದರೆ, ಕಣ್ಣಿನಲ್ಲೇ ಕೆರ ತೆಗೆದುಕೊಂಡು ಹೊಡೆಯುವ ಹಾಗೆ ಅನೇಕರು ನೋಡುತ್ತಾರೆ. ಆದರೆ ಮಗುವಿನಂತಹ ಮನಸ್ಸಿನ ಅಂಬರೀಶ್ ಒಪ್ಪಿ, ಅಭಿನಯಿಸಿದ್ದರು. “ಅಂದು ಈ ವಿಚಾರವಾಗಿ ಮಾತನಾಡಲು ಅವರ ಬಳಿಗೆ ಹೋದಾಗ ‘ತೀರ್ಥ’ ಸೇವನೆ ಜೋರಾಗಿಯೇ ಆಯಿತು. ಕಥೆ ಹೇಳ್ತಾ ಹೇಳ್ತಾ ಇಬ್ಬರ ನಾಲಿಗೆಯೂ ತೊದಲುತ್ತಿತ್ತು. ಕೊನೆಗೆ ಇಬ್ಬರೂ ಕುರ್ಚಿಯಲ್ಲೇ ವಾಲಿಕೊಂಡಿದ್ದೆವು.  ಕಣ್ಣು ಬಿಟ್ಟಾಗ ಬೆಳಗಾಗಿತ್ತು. “ಏಯ್, ಏನೋ ನೀನಿನ್ನೂ ಮನೆಗೆ ಹೋಗಿಲ್ವಾ? ಅಂತ ಅಂಬಿ ಪ್ರಶ್ನಿಸಿದರು. “ನೀವು ಈತರಹ ಹುಯ್ದು ಕೊಟ್ಟರೆ ಹೋಗೋದು ಹೇಗೆ? ಎಂದೆ” ಕೊನೆಗೆ ಆಯ್ತು ಹೋಗು, ಹಲ್ಲುಜ್ಜಿ, ಮುಖ ತೊಳ್ಕೋ ಹೋಗು.. ಗೆಸ್ಟ್ ರೋಲ್ ಮಾಡ್ತೀನಿ” ಅಂತ ಒಪ್ಪಿಗೆ ಕೊಟ್ಟರು ಎಂದು ನೆನಪಿಸಿಕೊಂಡರು. “ಸೂಪರ್ ನನ್ನ ಮಗ ಚಿತ್ರಕ್ಕೆ ದುಡ್ಡು ಸುರಿದು, ಅದನ್ನು ಕೊಳ್ಳುವವರೇ ಮುಂದೆ ಬಾರದಿದ್ದಾಗ ಮಾಣಿಕ್ ಚಂದ್ ಅವರೊಡನೆ ಮಾತನಾಡಿ ಚಿತ್ರ ಮಾರಾಟವಾಗುವಂತೆ ಮಾಡಿದ್ದು ಅಂಬರೀಶ್. ಅವರ ಆ ಸಹಕಾರದಿಂದ ಚಿತ್ರ ಇತಿಹಾಸ ನಿರ್ಮಿಸಿತು. ನಾನು ಹಣವನ್ನು ಜೋಡಿಸಿಟ್ಟು ನೋಡಿ ಆನಂದಿಸುವಂತಾಯಿತು ಎಂದು ಹೇಳಿದ್ದಾರೆ.

ಜಗ್ಗೇಶ್ ಮೊದಲ ಆದ್ಯತೆ ಸಿನಿಮಾ, ನಂತರದ ಸ್ಥಾನ ನನ್ನದು: ಪರಿಮಳ 
ಕನ್ನಡ ಚಿತ್ರರಂಗದಲ್ಲಿ ನಾಲ್ಕು ದಶಕ ಪೂರೈಸಿರುವ ನಟ ಜಗ್ಗೇಶ್ ಅವರಿಗೆ ಪತ್ನಿ ಪರಿಮಳ ಸಹಕಾರ ಹೆಜ್ಜೆ ಹೆಜ್ಜೆಗೂ ದೊರಕಿದೆ.  
ಆರಂಭದ ದಿನಗಳಲ್ಲಿ, ಮದುವೆಗೂ ಮುನ್ನ ಚಿತ್ರರಂಗದಲ್ಲಿ ಯಶಸ್ಸು ಕಾಣುವ ಕುರಿತು ಪರಿಮಳ ಅವರೊಡನೆ ಚರ್ಚಿಸಿದ್ದ ಜಗ್ಗೇಶ್‍, “ನನಗೆ ಎರಡು ಕನಸುಗಳಿವೆ. ಮೊದಲನೆಯದು ಸಿನಿಮಾದಲ್ಲಿ ಬಣ್ಣ ಹಚ್ಚಬೇಕು, ಎರಡನೆಯದು ನಿನ್ನನ್ನು ಮದುವೆಯಾಗೋದು” ಎಂದಿದ್ದರಂತೆ. ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಹಂಚಿಕೊಂಡ ಪರಿಮಳ, “ಜಗ್ಗೇಶ್ ತಮ್ಮ ಕನಸಿನ ಬಗ್ಗೆ ತಿಳಿಸಿದಾಗಲೇ ಅವರ ಮೊದಲ ಆದ್ಯತೆ ಏನಿದ್ದರೂ ಸಿನಿಮಾ.  ನಂತರದ ಸ್ಥಾನ ನನ್ನದು ಎಂಬುದು ತಿಳಿಯಿತು. ಆದರೆ ಈ ಯಶಸ್ಸು ಸುಮ್ಮನೆ ಸಿಕ್ಕಿಲ್ಲ.  ಅವರ ಪ್ರಯತ್ನ, ಪರಿಶ್ರಮ, ಆತ್ಮವಿಶ್ವಾಸ, ದೈವಭಕ್ತಿ, ಗುರುಭಕ್ತಿ ಎಲ್ಲವೂ ಸೇರಿದೆ” ಎಂದು ಹೇಳಿದರು. “ಜಗ್ಗೇಶ್ ಅವರದು ವಿಭಿನ್ನ ವ್ಯಕ್ತಿತ್ವ.  ನನ್ನ ಅಪ್ಪ, ಅಮ್ಮ ದೇವರನ್ನು ನಂಬುತ್ತಿರಲಿಲ್ಲ.  ಆದರೆ ಜಗ್ಗೇಶ್ ರಾಘವೇಂದ್ರ ಸ್ವಾಮಿಗಳ ಮೇಲೆ ಅಗಾಧ ಭಕ್ತಿಯಿಟ್ಟಿದ್ದರು.  ಅಂತೆಯೇ ಮಂತ್ರಾಲಯಕ್ಕೆ ಹೋಗಿ ಬಂದ ಮೇಲೆ ಸಾಕಷ್ಟು ಪವಾಡಗಳಾದವು.  ದ್ವಾರಕೀಶ್ ಅವರ ‘ಕೃಷ್ಣ ನೀ ಕುಣಿದಾಗ’ ಚಿತ್ರದಲ್ಲಿ ಅವರ ಎಂಟ್ರಿಗೆ ಜನ ಚಪ್ಪಾಳೆ ತಟ್ಟಿದರು. ಅವರು ಬಯಸಿದ್ದೆಲ್ಲ ನೆರವೇರುವಂತಾಯಿತು” ಎಂದರು.

ಶಿವಣ್ಣನಿಂದಾಗಿ ‘ರಣರಂಗ’ದಲ್ಲಿ ಅವಕಾಶ ದೊರಕಿತು: ಜಗ್ಗೇಶ್ 
“ಚೂಪು ಕಣ್ಣು, ಕೆದರಿದ ತಲೆ... ಆಶಾದಾಯಕವಾಗಿದ್ದಾನೆ” ಎಂಬ ಮಾತುಗಳು ಸಿನಿ ಪ್ರಪಂಚದಲ್ಲಿ ಒಂದಷ್ಟು ಮಂದಿ ಗುರುತಿಸಲು ಸಾಧ್ಯವಾಯಿತು ಎಂದು ಜಗ್ಗೇಶ್ ಹೇಳಿದ್ದಾರೆ. ನಾಲ್ಕು ದಶಕಗಳ ಸಿನಿ ಪಯಣದಲ್ಲಿ ಮಾಧ್ಯಮ ಮಿತ್ರರ ಸಹಕಾರವೂ ಇತ್ತು ಎಂದ ಜಗ್ಗೇಶ್‍, ನನ್ನ ಬಗ್ಗೆ ಬರೆದ ಒಂದಷ್ಟು ಮಾತುಗಳು ಆರಂಭದ ದಿನಗಳಲ್ಲಿ ಸಣ್ಣ ಪುಟ್ಟ ಅವಕಾಶಗಳಿಗೆ ಕಾರಣವಾಯಿತು ಎಂದರು. ಶಿವರಾಜ್ ಕುಮಾರ್ ಅಭಿನಯದ ‘ರಣರಂಗ’ ಚಿತ್ರದಲ್ಲಿ ದೊರೆತ ಅವಕಾಶದ ಬಗ್ಗೆ ವಿವರಿಸುತ್ತಾ, “ರಣರಂಗ ಚಿತ್ರದಲ್ಲಿ ಸಾಕಷ್ಟು ಜನರಿಗೆ ಚಾನ್ಸ್ ಸಿಕ್ತಿದೆ, ನನಗೆ ಸಿಗುತ್ತಿಲ್ಲ ಎಂದು ಶಿವಣ್ಣನ ಬಳಿ ಅಲವತ್ತುಕೊಂಡಾಗ, ಅವರು ತಮ್ಮ ಮಾವ ಗೋವಿಂದರಾಜು ಅವರಿಗೆ ಫೋನ್ ಮಾಡಿ ಪಾತ್ರವೊಂದನ್ನು ನನಗೆ ನೀಡುವಂತೆ ಹೇಳಿದರು. ಆದರೆ ಆ ಪಾತ್ರ ಈಶ್ವರಿ ಸಂಸ್ಥೆಯ ಮಾಲೀಕರೊಬ್ಬರಿಗೆ ಬೇಕಾದವರಿಗೆ ಹೋಗಬೇಕಿತ್ತು.  ಇದು ಕೈತಪ್ಪಿದ್ದರಿಂದ ಶೂಟಿಂಗ್ ಗೆ ಹೋದಾಗ ನಿರ್ದೇಶಕ ಸೋಮಶೇಖರ್ ಆದಿಯಾಗಿ ಅನೇಕರು ಮುಖ ದಪ್ಪ ಮಾಡಿಕೊಂಡಿದ್ದರು.  ಮಧ್ಯಾಹ್ನವಾದರೂ ಮಾತನಾಡಿಸುವವರು ಇರಲಿಲ್ಲ.  ಅವರು ಹೇಳಿದ ಜಾಗದಲ್ಲಿ ನಿಂತಿದ್ದೆ.  ಕೊನೆಗೆ ಡೈಲಾಗ್ ಹೇಳುವ ಸರದಿ ಬಂದಾಗ, “ಏನ್ ಮೇಡಂ, ಈ ಓಪನ್ ಏರು, ಗಿಡ ಮರ ಬಹಳ ಮಜವಾಗಿದೆ” ಎಂಬ ನನ್ನ ಸಂಭಾಷಣಾ ವೈಖರಿ ನೋಡಿ ನಿರ್ದೇಶಕರು ದಂಗಾದರು. ಡೈಲಾಗ್ ಸಂಖ್ಯೆಯನ್ನು ಹೆಚ್ಚಿಸಿದರು” ಎಂದು ನೆನಪಿಸಿಕೊಂಡರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com