ವಿಷ್ಣುವರ್ಧನ್ ಸ್ಮಾರಕಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭೂಮಿಪೂಜೆ; ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ

ದಿ.ಡಾ. ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಆನ್ ಲೈನ್ ಮೂಲಕ ಭೂಮಿ ಪೂಜೆ ನೆರವೇರಿಸಿದರು.
ವಿಷ್ಣುವರ್ಧನ್ ಸ್ಮಾರಕಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭೂಮಿಪೂಜೆ; ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ

ಬೆಂಗಳೂರು: ದಿವಂಗತ ಡಾ. ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಆನ್ ಲೈನ್ ಮೂಲಕ ಭೂಮಿ ಪೂಜೆ ನೆರವೇರಿಸಿದರು

ಬಳಿಕ ಮಾತನಾಡಿದ ಅವರು, ಡಾ.ವಿಷ್ಣುವರ್ಧನ ಅವರ 70ನೇ ವರ್ಷದ ಹುಟ್ಟುಹಬ್ಬದ, ವಿಶೇಷ ಸಂದರ್ಭದಲ್ಲಿ ದಿವಂಗತ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದ್ದೇನೆ. ವಿಷ್ಣುವರ್ಧನ್ ಕನ್ನಡ ನಾಡು ಕಂಡ ಅಪ್ರತಿಮ ಕಲಾವಿದರಲ್ಲಿ ಪ್ರಮುಖರು. ಶ್ರೇಷ್ಠ ನಾಯಕ ನಟರು ಮಾತ್ರವಲ್ಲದೇ ತಮ್ಮ ವ್ಯಕ್ತಿತ್ವದಲ್ಲೂ ಬಹಳಷ್ಟು ಶ್ರೇಷ್ಠ ಗುಣಗಳನ್ನು ಹೊಂದಿದ್ದು ಯುವಜನರಿಗೆ ಸ್ಪೂರ್ತಿಯ ಸೆಲೆಯಾಗಿದ್ದರು ಎಂದು ಬಣ್ಣಿಸಿದರು.


ತಮ್ಮ ಅಭಿಮಾನಿಗಳ ಪಾಲಿಗೆ “ಸಾಹಸ ಸಿಂಹ” ಎಂದೇ ಪ್ರಖ್ಯಾತರಾದ ವಿಷ್ಣು ತಮ್ಮ ಶಿಸ್ತು, ಸಂಯಮಗಳಿಂದ ಎಲ್ಲರ ಪ್ರೀತಿಯನ್ನು ಗೆದ್ದಿದ್ದರು. ಕನ್ನಡ ಚಿತ್ರರಂಗಕ್ಕೆ ಡಾ. ರಾಜ್ಕುುಮಾರ್ ಅವರ ನಂತರದ ಪೀಳಿಗೆಯಲ್ಲಿ ಮಹತ್ವದ ಕೊಡುಗೆ ನೀಡಿರುವವರಲ್ಲಿ ಡಾ.ವಿಷ್ಣುವರ್ಧನ್ ಸಹ ಸೇರಿದ್ದಾರೆ. ಸತತವಾಗಿ 38 ವರ್ಷಗಳ ಕಾಲ, ನೂರಾರು ಸದಭಿರುಚಿಯ ಚಿತ್ರಗಳನ್ನು ಮಾಡುವ ಮೂಲಕ ಜನರ ಮನಸಿನಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ. 

“ನಾಗರಹಾವು” ಸಿನಿಮಾದಿಂದ “ಆಪ್ತರಕ್ಷಕ” ಸಿನಿಮಾವರೆಗಿನ, ಅವರ ಸಾಧನೆಯನ್ನು ನಾನು ಸಾಕಷ್ಟು ಗಮನಿಸಿದ್ದೇನೆ. ಅವರು ಸಿನಿಮಾ ರಂಗದ ಜೊತೆಗೆ ವಿಶೇಷವಾದ ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು. ಸಮಾಜದ ಆಗು-ಹೋಗುಗಳ ಬಗ್ಗೆ ಸ್ಪಂದಿಸುವ ಮತ್ತು ಮಾನವೀಯತೆಯನ್ನು ತೋರುವ ವಿಶೇಷ ಗುಣ ಅವರಲ್ಲಿತ್ತು ಎಂದು ಯಡಿಯೂರಪ್ಪ ಹೇಳಿದರು

ಈ ವೇಳೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್ "ಮೈಸೂರಿನ ಹೊರ ವಲಯದ ಎಚ್.ಡಿ.ಕೋಟೆ ರಸ್ತೆಯ ಉದ್ಭೂರು ಗೇಟ್ ಬಳಿಯ ಹಾಲಾಳುವಿನಲ್ಲಿ 5.5 ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣವಾಗಲಿದ್ದು, ಚಿತ್ರ ಕಲಾವಿದರೊಬ್ಬರಿಗೆ ಈ ಮೂಲಕ ಸರ್ಕಾರ ಗೌರವ ಸಮರ್ಪಣೆ ಮಾಡಿದಂತಾಗಿದೆ. ವಿಷ್ಣವರ್ಧನ್ ಅವರ ಹುಟ್ಟೂರಿನಲ್ಲಿಯೇ ಸ್ಮಾರಕ ನಿರ್ಮಾಣವಾಗಬೇಕೆಂಬ ಅಭಿಮಾನಗಳ ಕೂಗಿಗೆ ಪ್ರತಿಫಲ ಸಿಕ್ಕಂತಾಗಿದೆ. ವಿಷ್ಣು ಅವರ ವಿದ್ಯಾಭ್ಯಾಸ ಸಹ ಮೈಸೂರಿನಲ್ಲಿಯೇ ಆಗಿದ್ದು, ಅವರಿಗೂ ಹಾಗೂ ಮೈಸೂರಿಗೂ ಅವಿನಾಭಾವ ನಂಟಿದೆ.

"ಒಟ್ಟು 11 ಕೋಟಿ ರೂಪಾಯಿ ಯೋಜನೆ ಇದಾಗಿದ್ದು, 5.5 ಎಕರೆ ಜಾಗದಲ್ಲಿ 2 ಎಕರೆಯಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ತಲೆ ಎತ್ತಲಿದೆ. ಜೊತೆಗೆ 6 ಅಡಿ ಎತ್ತರದ ವಿಷ್ಣುವರ್ಧನ್ ಅವರ ಪುತ್ಥಳಿಯೂ ತಲೆ ಎತ್ತುತ್ತಿರುವುದು ಸಂತಸದ ವಿಚಾರವಾಗಿದೆ. ಪುಣೆಯ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾದ ಶಾಖೆ ಸಹ ಇಲ್ಲಿ ಆರಂಭವಾಗಲಿದ್ದು, ಇದರ ಮೂಲಕ ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ಸಿಕ್ಕಂತಾಗುತ್ತದೆ. ಅಲ್ಲದೆ, ಇಲ್ಲಿ ಮ್ಯೂಸಿಯಂ ಸಹ ನಿರ್ಮಾಣಗೊಳ್ಳುವುದರಿಂದ ವಿಷ್ಣು ಅವರ ನೆನಪುಗಳು ಚಿತ್ರರಸಿಕರ ಕಣ್ಮನ ಸೆಳೆಯಲಿದೆ ಎಂದು ಹೇಳಲು ಸಂತಸವಾಗುತ್ತದೆ" ಎಂದು ಸೋಮಶೇಖರ್ ಹೇಳಿದ್ದಾರೆ.ರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com