777 ಚಾರ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಸಿದ್ದರಾಗುತ್ತಿದ್ದಾರೆ ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ

ಕೆಲವೇ ದಿನಗಳ ಹಿಂದೆ ನಟ ರಕ್ಷಿತ್‌ ಶೆಟ್ಟಿ '777 ಚಾರ್ಲಿ' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಝಿ ಆಗಿದ್ದರು. ಆ ಸಿನಿಮಾದ ಚಿತ್ರೀಕರಣವನ್ನು ದೇಶದ ವಿವಿಧ ಭಾಗಗಳಲ್ಲಿ ಮಾಡಲಾಗುತ್ತಿತ್ತು. ಇಡೀ ತಂಡವೇ ರಾಜಸ್ತಾನ, ಪಂಜಾಬ್‌ ಮುಂತಾದ ಸ್ಥಳಗಳಲ್ಲಿ ಬೀಡುಬಿಟ್ಟಿತ್ತು. 

ಈ ಚಿತ್ರದಲ್ಲಿ ನಾಯಿಗಳು ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಅವುಗಳನ್ನೂ ಹೊರ ರಾಜ್ಯಗಳಿಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಯಾವಾಗ ಕೊರೊನಾ ಹಾವಳಿ ಹೆಚ್ಚಾಯಿತೋ, ಆಗ ಇಡೀ ಚಿತ್ರತಂಡ ಬೆಂಗಳೂರಿಗೆ ವಾಪಸ್‌ ಬಂತು. ಅಷ್ಟು ದಿನಗಳ ಕಾಲ ಹೊರ ರಾಜ್ಯದಲ್ಲಿ ಇದ್ದಿದ್ದರಿಂದ ಈಗ ಸಂಪೂರ್ಣ ಕ್ವಾರಂಟೈನ್‌ ಆಗಿರಲು 'ಸಿಂಪಲ್‌ ಸ್ಟಾರ್‌' ರಕ್ಷಿತ್‌ ಶೆಟ್ಟಿ ನಿರ್ಧರಿಸಿದ್ದಾರೆ.

ಕನ್ನಡ ವರ್ಸನ್ ನ ಎಲ್ಲಾ ಕೆಲಸಗಳು ಹೆಚ್ಚು ಕಡಿಮೆ ಮುಗಿದಿದ್ದು, ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಗಳ ಡಬ್ಬಿಂಗ್ ಮಾಡಲು ಕೆಲಸ ಮಾಡುತ್ತಿದ್ದಾರೆ,  ಕನ್ನಡ ಚಾರ್ಲಿಯ ರಿ ರೆಕಾರ್ಡಿಂಗ್ ಕೆಲಸಗಳು ಪೂರ್ಣಗೊಂಡಿದ್ದು ಸದ್ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ  ಎಂದು ಹೇಳಿದ್ದಾರೆ.

ಸೆಲೆಬ್ರಿಟಿಗಳ ವಲಯದಲ್ಲೂ ಕೊರೊನಾ ವೈರಸ್‌ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರ. ಹಾಲಿವುಡ್‌ನ ಅನೇಕ ನಟ-ನಟಿಯರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಸಿನಿಮಾ ಮಂದಿ ಹೆಚ್ಚು ಎಚ್ಚರಿಕೆ ವಹಿಸಬೇಕಿದೆ.
ರಕ್ಷಿತ್ ಶೆಟ್ಟಿ ಕೂಡ ಸಾಕಷ್ಟು ಎಚ್ಚರಿಕೆಯಿಂದ ಇದ್ದಾರೆ.

'ಶೂಟಿಂಗ್‌ ಸಲುವಾಗಿ ನಾನು ಕೆಲವೇ ದಿನಗಳ ಹಿಂದೆ ಹೆಚ್ಚು ಟ್ರಾವೆಲ್‌ ಮಾಡಿರುವುದರಿಂದ ಈ ಸಂದರ್ಭದಲ್ಲಿ ಕ್ವಾರಂಟೈನ್‌ ಆಗಿ ಇರಬೇಕಾದ್ದು ನನ್ನ ಜವಾಬ್ದಾರಿ. ಹಾಗಾಗಿ ಯಾರನ್ನೂ ನಾನು ಭೇಟಿ ಮಾಡುತ್ತಿಲ್ಲ' ಎಂದು ರಕ್ಷಿತ್‌ ಹೇಳಿದ್ದಾರೆ. ಪ್ರಸ್ತುತ ಅವರು ಹೋಮ್‌ ಕ್ವಾರಂಟೈನ್‌ ಆಗಿದ್ದಾರೆ. ಅಲ್ಲದೆ, ಈ ಬಿಡುವಿನ ಸಮಯವನ್ನು ಸಿನಿಮಾ ಸ್ಕ್ರಿಪ್ಟ್‌ ತಯಾರಿಗಾಗಿ ಮೀಸಲಿಟ್ಟಿದ್ದಾರೆ ಎಂಬುದು ವಿಶೇಷ.

ನಟನೆ ಮಾತ್ರವಲ್ಲದೆ, ನಿರ್ದೇಶನದಲ್ಲೂ ರಕ್ಷಿತ್‌ ಫೇಮಸ್‌. ಆದರೆ ಇತ್ತೀಚಿನ ದಿನಗಳಲ್ಲಿ ನಟನೆಯಲ್ಲೇ ಅವರು ಹೆಚ್ಚು ತೊಡಗಿಕೊಂಡಿದ್ದರು. ಸದ್ಯ ಅವರು ಕೆಲವು ನಿರ್ದೇಶನದ ಪ್ರಾಜೆಕ್ಟ್‌ಗಳನ್ನೂ ಕೈಗೆತ್ತಿಕೊಂಡಿದ್ದಾರೆ. ಆ ಪೈಕಿ 'ಪುಣ್ಯಕೋಟಿ' ಹೆಚ್ಚು ನಿರೀಕ್ಷೆ ಮೂಡಿದೆ. ಅದರ ಸ್ಕ್ರಿಪ್ಟ್‌ ತಯಾರಿಯಲ್ಲಿ ರಕ್ಷಿತ್‌ ಮುಳುಗಿದ್ದಾರೆ.

ಚಾರ್ಲಿ ಚಿತ್ರೀಕರಣವನ್ನು ಸಧ್ಯಕ್ಕೆ ನಿಲ್ಲಿಸಿದ್ದೇವೆ. ಯಾವಾಗ ಪ್ರಾರಂಭವಾಗುತ್ತದೆ ತಿಳಿದಿಲ್ಲ. ವಾತಾವರಣ ಸರಿಯಾಗಿದೆ ಎಂದು ಸರ್ಕಾರ ಹೇಳುವವರೆಗೆ ಚಿತ್ರೀಕರಣ ಪ್ರಾರಂಭಿಸುವುದಿಲ್ಲ. ನಾವೂ ಬೆಂಗಳೂರಿಗೆ ಬಂದಾಗಿನಿಂದ ಚಿತ್ರೀಕರಣವನ್ನು ನಿಲ್ಲಿಸಿದ್ದೇವೆ. ನಮ್ಮ ಪಿನಾಕಾ, ಪರಂಭೋ ಸ್ಟುಡಿಯೋಗಳನ್ನು ಸಹ ಬಂದ್ ಮಾಡಿದ್ದೇವೆ. ಎಲ್ಲರೂ ಅವರ ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದೇವೆ. ಕಿರಣ್ ರಾಜ್ ಅವರು ಚಾರ್ಲಿ ಸಿನಿಮಾದ ಫಸ್ಟ್ ಹಾಫ್‍ನ್ನು ಎಡಿಟ್ ಮಾಡಿ, ಬ್ಯಾಗ್ರೌಂಡ್ ಸ್ಕೋರ್ ಮಾಡುತ್ತಿದ್ದಾರೆ. ಡಬ್ಬಿಂಗ್ ಸಹ ಅರ್ಧ ಆಗಿದ್ದು, ಇನ್ನೂ ಅರ್ಧ ಬಾಕಿ ಇದೆ. ಇದೀಗ ಡಬ್ಬಿಂಗ್ ಮಾಡುವ ಹಾಗಿಲ್ಲ ಹೀಗಾಗಿ ಚಾರ್ಲಿ ಸಿನಿಮಾದ ಬ್ಯಾಗ್ರೌಂಡ್ ಸ್ಕೋರ್ ಕೆಲಸವನ್ನು ಮುಂದುವರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ,


ಹೇಮಂತ್ ರಾವ್ ಅವರು ”ಸಪ್ತಸಾಗರದಾಚೆ ಎಲ್ಲೋ” ಸಿನಿಮಾಗೆ ಕಥೆ ಬರೆಯುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್ ಸಿನಿಮಾ ಆಗಿದ್ದು, ಒಳ್ಳೆಯ ಸಿನಿಮಾ ಆಗಲಿದೆ ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ ಕೊರೊನಾ ಬಗ್ಗೆ ಸಿನಿಮಾ ಮಾಡಲು ಅಭಿಮಾನಿಗಳು ಪ್ರಶ್ನೆ ಕೇಳಿದ್ದು, ನನ್ನ ಸ್ನೇಹಿತರು ಈ ಕುರಿತು ಕೆಲ ಐಡಿಯಾ ಹೇಳಿದರು ಆದರೆ ಈ ಬಗ್ಗೆ ನಾನು ಮಾಡುವುದಿಲ್ಲ. ಕೆಲವರು ಈಗಾಗಲೇ ಈ ಕುರಿತು ಸಿನಿಮಾ ಮಾಡಲು ಪ್ರಯತ್ನ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com