ಬೆಂಗಳೂರು: ಮಾದಕ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಡ್ರಗ್ಸ್ ಸೇವನೆ ಮಾಡಿರುವುದು ಎಫ್‌ಎಸ್‌ಎಲ್ ವರದಿಯಲ್ಲಿ ಖಚಿತವಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, ಸಾಮಾನ್ಯವಾಗಿ ನಾವು ಯಾವುದೇ ಡ್ರಗ್ಸ್ ಪ್ರಕರಣವನ್ನು ದಾಖಲಿಸಿಕೊಂಡಾಗ, ಅದರಲ್ಲಿ ಆರೋಪಿಗಳು ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಖಚಿತ ಪಡಿಸಲು ಮೊದಲಿಗೆ ರಕ್ತ ಹಾಗೂ ಮೂತ್ರದ ಸ್ಯಾಂಪಲ್‌ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಡುತ್ತಿದ್ದೇವು. ಆದರೆ, ರಕ್ತ ಮತ್ತು ಮೂತ್ರದ ಸ್ಯಾಂಪಲ್‌ಗಳಲ್ಲಿ ಒಂದೆರಡು ದಿನಗಳ ಹಿಂದೆ ಡ್ರಗ್ಸ್ ಸೇವಿಸಿದ್ದರೆ ಮಾತ್ರ ವರದಿಯಲ್ಲಿ ಪಾಸಿಟಿವ್ ಬರುತ್ತಿತ್ತು ಎಂದರು.
ಅನೇಕ ಪ್ರಕರಣಗಳಲ್ಲಿ ಸುಮಾರು ದಿನಗಳ ಬಳಿಕ ನಾವು ಬಂಧಿಸಿದ್ದರೆ, ಅಂತಹ ಸಂದರ್ಭಗಳಲ್ಲಿ ರಕ್ತ ಮತ್ತು ಮೂತ್ರದ ಸ್ಯಾಂಪಲ್‌ಗಳಲ್ಲಿ ಡ್ರಗ್ಸ್ ಸೇವನೆ ಪತ್ತೆ ಮಾಡಲು ಕಷ್ಟವಾಗುತ್ತಿತ್ತು. ಈ ಕಾರಣದಿಂದ ನಾವು ನಮ್ಮ ಸಾಕ್ಷ್ಯಾಧಾರಗಳಿಗಾಗಿ ಕೂದಲು ಸ್ಯಾಂಪಲ್‌ಗಳನ್ನು ಕಳುಹಿಸುತ್ತಿದ್ದೇವು ಎಂದರು.
ಅಧ್ಯಯನದ ಪ್ರಕಾರ ಕೂದಲಿನಲ್ಲಿ ಒಂದು ವರ್ಷದವರೆಗೂ ಡ್ರಗ್ಸ್ ಇರುತ್ತದೆ. ಆ ಕಾರಣದಿಂದ ಈ ಪ್ರಕರಣದಲ್ಲಿ ಕಳೆದ ವರ್ಷ ನಾವು ಆರೋಪಿಗಳ ಕೂದಲು ಸ್ಯಾಂಪಲ್ ಸಂಗ್ರಹಿಸಿ ಹೈದರಾಬಾದ್‌ನ ಸಿಎಫ್‌ಎಸ್ಎಲ್ ಲ್ಯಾಬ್‌ಗೆ ಕಳುಹಿಸಿದ್ದೇವು. ಕರ್ನಾಟಕದಲ್ಲಿ ಕೂದಲು ಸ್ಯಾಂಪಲ್ ತೆಗೆದುಕೊಂಡು ಲ್ಯಾಬ್‌ಗೆ ಕಳುಹಿಸಿರುವುದು ಇದೇ ಪ್ರಥಮ ಬಾರಿಗೆ. ಈಗ ವರದಿ ಕೈಸೇರಿದ್ದು, ಅದರಲ್ಲಿ ಆರೋಪಿಗಳು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ ಎಂದರು.
ಎಫ್‌ಎಸ್‌ಎಲ್ ವರದಿ ಸಮಾಧಾನ ತಂದಿದೆ: ಇಂದ್ರಜಿತ್ ಲಂಕೇಶ್
ಇದೇ ವೇಳೆ ಸ್ಯಾಂಡಲ್ ವುಡ್ ಬನಟಿ ಮಣಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಎಫ್‌ಎಸ್‌ಎಲ್ ಪರೀಕ್ಷೆಯಲ್ಲಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದ್ದು, ಇಂದಿನ ವರದಿ ನೋಡಿ ಸಮಾಧಾನವಾಗಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಯಾರ ಮೇಲೂ ವೈಯಕ್ತಿಕವಾಗಿ ದ್ವೇಷವಿಲ್ಲ. ಅವರ ಮೇಲೆ ಅನುಕಂಪವಿದೆ. ಡ್ರಗ್ಸ್ ದಂಧೆಯಲ್ಲಿ ದೊಡ್ಡದೊಡ್ಡವರು ಶಾಮೀಲಾಗಿದ್ದಾರೆ. ಇನ್ನು, ಅವರನ್ನು ಬಂಧಿಸುವುದು ಬಾಕಿ ಇದೆ ಎಂದರು.
ಮಾದಕ ಜಾಲ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವರಿಗೆ ದೂರು ನೀಡಿದ್ದನ್ನು ಪ್ರಸ್ತಾಪಿಸಿದ ಅವರು, ನನಗಿದ್ದ ಮಾಹಿತಿ ಆಧರಿಸಿ ಗೃಹ ಸಚಿವರಿಗೆ ದೂರು ನೀಡಿದ್ದೆ. ಆಗ ಸ್ಯಾಂಡಲ್‌ವುಡ್‌ನ ಕೆಲವರು ನನ್ನನ್ನು ಟೀಕಿಸಿದ್ದರು. ಇಂದ್ರಜಿತ್‌ಗೆ ಕೆಲಸ ಇಲ್ಲ ಎಂದು ಹೇಳಿದ್ದರು. ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ಬೆಂಗಳೂರಿಗೆ ಬರುತ್ತಿದ್ದು, ಇದರಿಂದ ಬೆಂಗಳೂರಿನಲ್ಲಿ ಡ್ರಗ್ಸ್‌ಗಿರುವ ಬೇಡಿಕೆ ತಿಳಿಯುತ್ತದೆ. ಹೀಗಾಗಿ ಡ್ರಗ್ಸ್ ಬಗ್ಗೆಇನ್ನೂ ಹೆಚ್ಚಿನ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
Advertisement