ಸಂಚಾರಿ ವಿಜಯ್ ಅವರ ಮೆದುಳು ನಿಷ್ಕ್ರಿಯವಾಗಿದೆ, ಪೂರ್ತಿ ಲೈಫ್ ಸಪೋರ್ಟ್ ನಲ್ಲಿದ್ದಾರೆ: ಆಸ್ಪತ್ರೆ ವೈದ್ಯರ ಮಾಹಿತಿ

ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡು ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಬಗ್ಗೆ ಆಸ್ಪತ್ರೆ ವೈದ್ಯ ಡಾ ಅರುಣ್ ನಾಯ್ಕ್ ಮಾಧ್ಯಮಗಳ ಮುಂದೆ ಮಾಹಿತಿ ನೀಡಿದ್ದಾರೆ.
ಸಂಚಾರಿ ವಿಜಯ್
ಸಂಚಾರಿ ವಿಜಯ್
Updated on

ಬೆಂಗಳೂರು: ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡು ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ನಟ ಸಂಚಾರಿ ವಿಜಯ್ ಅವರ ದೇಹಸ್ಥಿತಿ ಬಗ್ಗೆ  ಆಸ್ಪತ್ರೆ ವೈದ್ಯ ಡಾ ಅರುಣ್ ನಾಯ್ಕ್ ಮಾಧ್ಯಮಗಳ ಮುಂದೆ ಮಾಹಿತಿ ನೀಡಿದ್ದಾರೆ.

ಸಂಚಾರಿ ವಿಜಯ್ ಅವರಿಗೆ ಅಪಘಾತವಾಗಿ 36 ಗಂಟೆಯಾಗಿದೆ. ಮೊನ್ನೆ ಮಧ್ಯರಾತ್ರಿ ಸುಮಾರಿಗೆ ಆಸ್ಪತ್ರೆಗೆ ಅವರನ್ನು ಕರೆತಂದಾಗ ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದರು. ಉಸಿರಾಡುತ್ತಿದ್ದ ಕಾರಣ ಸಿಟಿ ಸ್ಕ್ಯಾನ್ ಮಾಡಿ ನೋಡಿದಾಗ ಮೆದುಳಿನ ಬಲಭಾಗಕ್ಕೆ ತೀವ್ರ ಏಟಾಗಿತ್ತು. ಮೆದುಳಿನ ಒಳಗೆ ರಕ್ತಸ್ರಾವವಾಗುತ್ತಿತ್ತು. ಹೀಗಾಗಿ ಅವರ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿ ಸರ್ಜರಿ ಮಾಡಲು ನಿರ್ಧರಿಸಿದೆವು.

ತಕ್ಷಣವೇ ಸರ್ಜರಿಗೆ ಏರ್ಪಾಡು ಮಾಡಿ ನಸುಕಿನ ಜಾವ 4-4.30ರ ಹೊತ್ತಿಗೆ ಮೆದುಳಿನ ಸರ್ಜರಿ ಮಾಡಿ ಮುಗಿಸಿದೆವು, ನಂತರ ನ್ಯೂರೋ ಐಸಿಯು ವಿಭಾಗಕ್ಕೆ ವರ್ಗಾಯಿಸಿದೆವು. ರಕ್ತಸ್ರಾವವಾಗುತ್ತಿದ್ದುದನ್ನು ಸರ್ಜರಿ ಮಾಡಿ ನಿಲ್ಲಿಸಿದ್ದೇವೆ, ಆದರೆ ಮೆದುಳಿನ ಊತ ಕಡಿಮೆಯಾಗಿಲ್ಲ, ಕ್ಷಣಕ್ಷಣಕ್ಕೆ ಮೆದುಳು ನಿಷ್ಕ್ರಿಯವಾಗುತ್ತಿದೆ. ಈ ಹಂತದಲ್ಲಿ ನಾವು ಮೆದುಳು ನಿಷ್ಕ್ರಿಯತೆ ಎನ್ನುತ್ತೇವೆ, ಸದ್ಯ ಅವರು ವೆಂಟಿಲೇಟರ್ ನಲ್ಲಿದ್ದು ಸಂಪೂರ್ಣವಾಗಿ ಜೀವರಕ್ಷಕದಲ್ಲಿದ್ದಾರೆ, ಉಸಿರಾಟವನ್ನು ಕೂಡ ನಿಲ್ಲಿಸಿದ್ದಾರೆ. ವೆಂಟಿಲೇಟರ್ ತೆಗೆದರೆ ಮೆದುಳು ಸಂಪೂರ್ಣ ಸ್ತಬ್ಧವಾಗುತ್ತದೆ ಎಂದರು.

ಪ್ರಾಥಮಿಕವಾಗಿ ಬಿದ್ದ ಹೊಡೆತಕ್ಕೆ ಮೆದುಳು ಒಡೆದುಹೋಗಿದೆ, ಅದರಿಂದ ಚೇತರಿಕೆ ಕಂಡುಬರುತ್ತಿಲ್ಲ, ಏನೇ ಚಿಕಿತ್ಸೆ ಕೊಟ್ಟರೂ ಸ್ಪಂದಿಸುತ್ತಿಲ್ಲ, ನಿನ್ನೆ ರಾತ್ರಿಯಿಂದ ಉಸಿರಾಟ ಕೂಡ ನಿಲ್ಲಿಸಿದ್ದಾರೆ, ಅದರರ್ಥ ಅವರು ಸಂಪೂರ್ಣವಾಗಿ ವೆಂಟಿಲೇಟರ್ ಸಪೋರ್ಟಿನಿಂದ ಮಾತ್ರ ಇದ್ದಾರೆ ಎಂದು ವೈದ್ಯರು ಹೇಳಿದರು.

ಬ್ರೈನ್ ಡೆಡ್ ಆದ ನಂತರ ಕುಟುಂಬಸ್ಥರು ಏನು ಮಾಡಬಹುದು ಎಂದು ತೀರ್ಮಾನ ಮಾಡುತ್ತಾರೆ, ಅವರ ಕುಟುಂಬಸ್ಥರು ಅಂಗಾಂಗ ದಾನ ಮಾಡುವ ಬಗ್ಗೆ ತಿಳಿಸಿದ್ದಾರೆ, ಅಂಗಾಂಗ ದಾನ ಮಹಾದಾನ ಎಂದರು.

ಅವರ ತೊಡೆಯ ಮೂಳೆ ಮುರಿದಿರುವುದು ಈಗ ಮುಖ್ಯವಾಗುವುದಿಲ್ಲ. ಮೆದುಳು ಕೆಲಸ ಮಾಡದಿರುವುದೇ ಮುಖ್ಯವಾಗುತ್ತದೆ. 
ಸಂಚಾರಿ ವಿಜಯ್ ಅವರ ವ್ಯಕ್ತಿತ್ವ, ಕೆಲಸ, ಪ್ರತಿಭೆಯನ್ನು ನೋಡಿರುವ ನಾವೆಲ್ಲಾ ಅವರ ಅಂಗಾಂಗಳನ್ನು ದಾನ ಮಾಡಿದರೆ ಅವರ ನಂತರವೂ ವ್ಯಕ್ತಿತ್ವ ಉಳಿದುಕೊಳ್ಳುತ್ತದೆ, ಅದು ಕುಟುಂಬಸ್ಥರ ಮಹಾಶ್ರೇಷ್ಠ ನಿರ್ಧಾರ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com