ತಲೆದಂಡ ಚಿತ್ರದ ಪಾತ್ರಕ್ಕೂ ಸಂಚಾರಿ ವಿಜಯ್'ಗೆ ರಾಷ್ಟ್ರ ಪ್ರಶಸ್ತಿ ಸಿಗುತ್ತಿತ್ತು: ನಿರ್ದೇಶಕ

ತಲೆದಂಡ ಚಿತ್ರದ ಕುರಿತು ಮಾತನಾಡಿರುವ ನಿರ್ದೇಶಕ ಪ್ರವೀಣ್ ಕೃಪಾಕರ್ ಅವರು, ತಲೆದಂಡ ಚಿತ್ರದ ಪಾತ್ರಕ್ಕೂ ಸಂಚಾರಿ ವಿಜಯ್ ಅವರಿಗೆ ರಾಷ್ಟ್ರಪ್ರಶಸ್ತಿ ಲಭಿಸುತ್ತಿತ್ತು ಎಂದು ಹೇಳಿದ್ದಾರೆ.
ಸಂಚಾರಿ ವಿಜಯ್
ಸಂಚಾರಿ ವಿಜಯ್

ಬೆಂಗಳೂರು: ನಟ ಸಂಚಾರಿ ವಿಜಯ್​ ಅವರು ನಿಧನರಾಗಿರುವುದು ಸ್ಯಾಂಡಲ್​ವುಡ್​ ಪಾಲಿಗೆ ಬಹುದೊಡ್ಡ ನಷ್ಟ. ಅಭಿಮಾನಿಗಳು ಎಂದೂ ಮರೆಯಲಾಗದಂತಹ ಕೆಲವು ಪಾತ್ರಗಳಲ್ಲಿ ಅವರು ಅಭಿನಯಿಸಿದ್ದರು. ‘ನಾನು ಅವನಲ್ಲ ಅವಳು’ ಚಿತ್ರದಲ್ಲಿನ ವಿಭಿನ್ನ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿದ್ದವು, ಈ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಲಭಿಸಿತ್ತು. 

ಈ ಚಿತ್ರದ ಬಳಿಕ ಸಂಚಾರಿ ವಿಜಯ್ ಅವರು, ಸಾಕಷ್ಟು ಮಹತ್ವಾಕಾಂಕ್ಷಿ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದರು. ಆದರೆ, ಅಷ್ಟರಲ್ಲಾಗಲೇ ಅಪಘಾತ ಸಂಭವಿಸಿ ವಿಧಿವಶರಾಗಿದ್ದಾರೆ. ಇದೀಗ ವಿಜಯ್ ಅವರು ನಟಿಸಿರುವ ತಲೆದಂಡ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಈ ಟೀಸರ್ ನೋಡಿದರೆ ಅವರು ಎಂತಹ ಕಲಾವಿದ ಎಂಬುದು ಸಾಬೀತಾಗುತ್ತಿದೆ. ತಲೆದಂಡ ಚಿತ್ರದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಚಿತ್ರದಲ್ಲಿ ಅವರ ಅಭಿನಯ ಕಂಡವರಿಗೆ ಅಚ್ಚರಿಯಾಗುತ್ತಿದೆ. ಚಿತ್ರದಲ್ಲಿ ಈ ವರೆಗೂ ಮಾಡಿರದಂತಹ ವಿಭಿನ್ನ ಪಾತ್ರದಲ್ಲಿ ಸಂಚಾರಿ ವಿಜಯ್ ಕಾಣಿಸಿಕೊಂಡಿದ್ದಾರೆ. 

ಮರಗಳನ್ನು ರಕ್ಷಿಸಬೇಕು, ಪರಿಸರ ಉಳಿಸಬೇಕು ಎಂಬ ಕಾಳಜಿ ಇಟ್ಟುಕೊಂಡು ಹೋರಾಡುವ ಬುದ್ಧಿಮಾಂದ್ಯನ ಪಾತ್ರದಲ್ಲಿ ಸಂಚಾರಿ ವಿಜಯ್​ ನಟಿಸಿದ್ದರು. ಆದರೆ ಆ ಸಿನಿಮಾ ಬಿಡುಗಡೆ ಆಗುವ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದಾರೆ. ಇಡೀ ಸಿನಿಮಾದಲ್ಲಿ ಅವರು ಎಷ್ಟು ಅದ್ಭುತವಾಗಿ ನಟಿಸಿರಬಹುದು ಎಂಬುದಕ್ಕೆ ಈ ಒಂದು ಚಿಕ್ಕ ಟೀಸರ್​ನಲ್ಲಿ ಸಾಕ್ಷಿ ಸಿಕ್ಕಿದೆ. 

ಚಿತ್ರದ ಕುರಿತು ಮಾತನಾಡಿರುವ ನಿರ್ದೇಶಕ ಪ್ರವೀಣ್ ಕೃಪಾಕರ್ ಅವರು, ತಲೆದಂಡ ಚಿತ್ರದ ಪಾತ್ರಕ್ಕೂ ಸಂಚಾರಿ ವಿಜಯ್ ಅವರಿಗೆ ರಾಷ್ಟ್ರಪ್ರಶಸ್ತಿ ಲಭಿಸುತ್ತಿತ್ತು ಎಂದು ಹೇಳಿದ್ದಾರೆ. 

ಸಂಚಾರಿ ವಿಜಯ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿತ್ತು. ಇದರ ಹಿಂದೆ ಯಾವುದೇ ರೀತಿಯ ದುರುದ್ದೇಶಗಳೂ ಇರಲಿಲ್ಲ. ಅವರ ಸಾವಿನಿಂದ ಬಹಳ ಬೇಸರವಾಗಿತ್ತು. ಇದ್ದಕ್ಕಿದ್ದಂತೆ ತೆಗೆದುಕೊಂಡ ನಿರ್ಧಾರ ಅದಾಗಿತ್ತು. ಟೀಸರ್ ಕುರಿತು ನಾನು ಸ್ನೇಹಿತರೊಂದಿಗೆ ಮಾತುಕತೆ ನಡೆಸುತ್ತಿದ್ದೆ. ಆದರೆ ವಿಜಯ್ ಅವರ ನಿಧನ ಸುದ್ದಿ ಕೇಳಿ ಇದ್ದಕ್ಕಿದ್ದಂತೆ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿದ್ದೆ ಎಂದು ತಿಳಿಸಿದ್ದಾರೆ. 

ಚಿತ್ರದಲ್ಲಿ ಸಂಚಾರಿ ವಿಜಯ್ ಅವರು ಕುನ್ನೇ ಗೌಡ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಖಂಡಿತವಾಗಿಯೂ ವಿಜಯ್ ಅವರಿಗೆ ಈ ಪಾತ್ರ ಮತ್ತೊಂದು ರಾಷ್ಟ್ರ ಪ್ರಶಸ್ತಿ ತಂದುಕೊಡುತ್ತಿತ್ತು. ಅವರಿಗೂ ಆ ಬಗ್ಗೆ ವಿಶ್ವಾಸವಿತ್ತು ಎಂದಿದ್ದಾರೆ. 

ಇದೇ ವೇಳೆ ಕೊನೆಯದಾಗಿ ಸಂಚಾರಿ ವಿಜಯ್ ಅವರೊಂದಿಗೆ ಮಾತನಾಡಿದ್ದನ್ನು ಸ್ಮರಿಸಿದ ಪ್ರವೀಣ್ ಅವರು, ವಿಜಯ್ ಅವರು ಕೋವಿಡ್ ಪರಿಹಾರ ಕಾರ್ಯಗಳ ಕುರಿತಂತೆ ಮಾತನಾಡಿದ್ದರು, ಅಲ್ಲದೆ, ಚಿತ್ರರಂಗದ ಚಟುವಟಿಕೆಗಳು ಆರಂಭವಾಗುತ್ತಿದ್ದಂತೆಯೇ ಚಿತ್ರದ ಪ್ರಚಾರ ಕಾರ್ಯವನ್ನು ಯಾವ ರೀತಿ ನಡೆಸಬೇಕೆಂಬುದರ ಕುರಿತಂತೆಯೂ ಮಾತನಾಡಿದ್ದರು.ಚಿತ್ರ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಅಭಿಮಾನಿಗಳನ್ನು ತಲುಪಬೇಕು. ಅವರ ಚಿತ್ರದ ಕುರಿತು ಇತರೆ ರಾಷ್ಟ್ರ ಪ್ರಶಸ್ತಿ ವಿಜೇತರು ಮಾತನಾಡಬೇಕೆಂದು ಬಯಸಿದ್ದರು. ತಮ್ಮ ಚಿತ್ರದ ಬಗ್ಗೆ ರಾಷ್ಟ್ರಪ್ರಶಸ್ತಿ ವಿಜೇತ ಮಮ್ಮೂಟಿಯವರ ಪ್ರತಿಕ್ರಿಯೆ ಪಡೆಯಬೇಕೆಂದು ಹೇಳುತ್ತಿದ್ದರು. ಕಮಲ್ ಹಾಸನ್ ಅವರೂ ಕೂಡ ತಮ್ಮ ಚಿತ್ರದ ಬಗ್ಗೆ ಮಾತನಾಡಬೇಕೆಂದು ಹೇಳುತ್ತಿದ್ದರು. ಅಪಘಾತಕ್ಕೂ ಕೆಲ ಗಂಟೆಗಳ ಹಿಂದಷ್ಟೇ ಈ ಬಗ್ಗೆ ಮಾತನಾಡಿದ್ದರು. ಚಿತ್ರದ ಕುರಿತಾಗಿ ಕಾರ್ಯಕ್ರಮವೊಂದನ್ನು ಆಯೋಜಿಸಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನೂ ಆಹ್ವಾನಿಸಬೇಕೆಂದು ಹೇಳುತ್ತಿದ್ದರು. ಆ ಕಾರ್ಯಕ್ರಮದಲ್ಲಿ ಕುನ್ನೇ ಗೌಡನ ಗೆಟ್ ಅಪ್ ನಲ್ಲಿಯೇ ಬರಲು ಬಯಸಿದ್ದರು. ಆದರೆ, ಇದ್ದಕ್ಕಿದ್ದಂತೆಯ ನಮ್ಮೆಲ್ಲರನ್ನೂ ಬಿಟ್ಟು ಹೋದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

'ತಲೆದಂಡ' ಸಿನಿಮಾವು ಪರಿಸರ ಮತ್ತು ಮಾನವನ ನಡುವಿನ ಸಂಬಧ. ಪರಿಸರದ ಮೇಲೆ ಮಾನವನ ಅತಿಕ್ರಮಣ ಇತ್ಯಾದಿ ಸಾಮಾಜಿಕ ಕಳಕಳಿಯ ವಿಷಯಗಳನ್ನು ಇರಿಸಿಕೊಂಡು ನಿರ್ಮಿಸಲಾಗಿರುವ ಸಿನಿಮಾ ಆಗಿದೆ.

ಅವಕಾಶ ಸಿಕ್ಕ ಕೂಡಲೇ ಸಿನಿಮಾವನ್ನು 16 ಅಂತರಾಷ್ಟ್ರೀಯ ಚಲನಚಿತ್ರೋತ್ಸವ, ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಪಟ್ಟಿಗೆ ರವಾನಿಸಲಾಗುತ್ತದೆ. ಸಂಚಾರಿ ವಿಜಯ್'ಗೆಂದೇ ಕುನ್ನಾ ಪಾತ್ರವನ್ನು ಸಿದ್ಧಪಡಿಸಲಾಗಿತ್ತು. ನನ್ನ ಮನವಿಯಂತೆಯೇ ಅವರು ಸೋಲಿಗ ಬುಡಕಟ್ಟು ಜನಾಂಗದವರೊಂದಿಗೆ ಎರಡು ರಾತ್ರಿಗಳನ್ನು ಕಳೆದಿದ್ದರು. ಅವರ ಆಚಾರ, ವಿಚಾರ, ಆಹಾರ ಅಭ್ಯಾಸಗಳನ್ನು ಅರ್ಥ ಮಾಡಿಕೊಂಡಿದ್ದರು. ಮೊದಲಿಗೆ ಅಧಿಕಾರಿಗಳ ಅನುಮತಿ ಪಡೆದುಕೊಳ್ಳಲಾಗಿತ್ತು. ಬಳಿಕ ಸಂಚಾರಿ ವಿಜಯ್ ಅವರಿಗೆ ಅವರೊಂದಿಗೆ ಕಾಲ ಕಳೆಯುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಅವರೂ ಒಪ್ಪಿದ್ದರು. 

ಚಿತ್ರದಲ್ಲಿ ನಟಿ ಮಂಗಳಾ ಅವರು ವಿಜಯ್'ಗೆ ಜೋಡಿಯಾಗಿದ್ದಾರೆ. ಇಬ್ಬರ ನಡುವೆ ಆರೋಗ್ಯಕರವಾದ ಸ್ಪರ್ಧೆಯೂ ಇತ್ತು ಎಂದು ತಿಳಿಸಿದ್ದಾರೆ. 

ಇದೇ ವೇಳೆ ಚಿತ್ರ ಬಿಡುಗಡೆ ಕುರಿತು ಮಾತನಾಡಿರುವ ಅವರು ಸೆಪ್ಟೆಂಬರ್ ತಿಂಗಳಿನಲ್ಲಿ ಚಿತ್ರ ಬಿಡುಗಡೆಗೆ ಚಿಂತನೆ ನಡೆಸಿದ್ದೇವೆ. ಆ ಸಂದರ್ಭದಲ್ಲಿ ಸಾಕಷ್ಟು ಹಬ್ಬಗಳಿರಲಿವೆ. ಹೀಗಾಗಿ ಆ ತಿಂಗಳಿನಲ್ಲಿಯೇ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದೇನೆ. 

ತಲೆದಂಡ ಚಿತ್ರವನ್ನು ಹೇಮಾ ಮಾಲಿನಿ ಕೃಪಾಕರ್ ಅವರು ನಿರ್ಮಿಸಿದ್ದು, ಅರುಣ್ ಕುಮಾರ್ ಆರ್ ಅವರು ಸಹ ನಿರ್ಮಾಪಕರಾಗಿದ್ದಾರೆ, ಚಿತ್ರಕ್ಕೆ ಹರಿ-ಕಾವ್ಯ ಅವರು ಸಂಗೀತ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com