ಜನವರಿ 14ಕ್ಕೆ ಶರಣ್ ಅಭಿನಯದ 'ಅವತಾರ ಪುರುಷ' ಬಿಡುಗಡೆ
ರಾಜ್ಯದಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ವ್ಯಾಪಕವಾಗಿದ್ದ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಿಕೆ ಮಾಡಿದ್ದ ಅವತಾರ ಪುರುಷ ಚಿತ್ರ ತಂಡ, ಇದೀಗ ಜನವರಿ 14ಕ್ಕೆ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದೆ.
Published: 25th December 2021 12:55 PM | Last Updated: 25th December 2021 01:10 PM | A+A A-

ಅವತಾರ ಪುರುಷ ಚಿತ್ರದಲ್ಲಿ ಆಶಿಕಾ ರಂಗನಾಥ್ ಹಾಗೂ ಶರಣ್.
ರಾಜ್ಯದಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ವ್ಯಾಪಕವಾಗಿದ್ದ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಿಕೆ ಮಾಡಿದ್ದ ಅವತಾರ ಪುರುಷ ಚಿತ್ರ ತಂಡ, ಇದೀಗ ಜನವರಿ 14ಕ್ಕೆ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದೆ.
ಡಿಸೆಂಬರ್ 10ರಂದು ಚಿತ್ರ ಬಿಡುಗಡೆ ಮಾಡಲು ಚಿತ್ರ ತಂಡ ಈ ಹಿಂದೆ ನಿರ್ಧರಿಸಿತ್ತು. ಆದರೆ, ಕೊರೋನಾ ಹಾಗೂ ಓಮಿಕ್ರಾನ್ ರೂಪಾಂತರಿ ವೈರಸ್ ಆತಂಕದಿಂದಾಗಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಿತ್ತು. ಇದೀಗ ಚಿತ್ರವನ್ನು ಸಂಕ್ರಾಂತಿ ಹಬ್ಬದ ದಿನದಂದು ಬಿಡುಗಡೆ ಮಾಡಲು ಚಿತ್ರ ತಂಡ ಮುಂದಾಗಿದೆ.
ಮುಂಬರುವ ಸಂಕ್ರಾಂತಿ ಹಬ್ಬಕ್ಕೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳು ಬಿಡುಗಡೆಯಾಗುತ್ತಿದ್ದು. ಕರ್ನಾಟಕದ ಜನರು ಕೂಡ ಚಿತ್ರವನ್ನು ನೋಡುವ ಮೂಲಕ ಹಬ್ಬವನ್ನು ಆಚರಿಸಬೇಕೆಂದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಯಸಿದ್ದಾರೆ.
ಇದರಂತೆ ಸಂಕ್ರಾಂತಿ ಹಬ್ಬಕ್ಕೆ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಈ ಕುರಿತು ಚಿತ್ರ ತಂಡ ಹಾಗೂ ವಿವಿಧ ಪ್ರದರ್ಶಕರೊಂದಿಗೆ ಚರ್ಚೆಗಳಲ್ಲಿ ತೊಡಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ, ಚಿತ್ರ ಬಿಡುಗಡೆ ದಿನಾಂಕವನ್ನು ಚಿತ್ರ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಲಿದೆ.
ಶರಣ್-ಸುನಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ 'ಅವತಾರ ಪುರುಷ' ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಪ್ರಮುಖ ಪಾತ್ರಗಳಲ್ಲಿ ಸಾಯಿ ಕುಮಾರ್, ಸುಧಾರಾಣಿ, ಶ್ರೀನಗರ ಕಿಟ್ಟಿ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೊರ್ ಅವರು ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಲಿಯಮ್ ಡೇವಿಡ್ ಛಾಯಾಗ್ರಹಣದಲ್ಲಿ ಚಿತ್ರ ಮೂಡಿ ಬಂದಿದೆ.
ಶರಣ್ ನಟನೆಯ ‘ಅವತಾರಪುರುಷ’ ಚಿತ್ರ ಎರಡು ಭಾಗಗಳಲ್ಲಿ ಬರಲಿದ್ದು ‘ಅವತಾರ ಪುರುಷ-1’ ಹಾಗೂ ‘ಅವತಾರ ಪುರುಷ-2’ ಹೆಸರಿನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಆದರೆ, ಸಬ್‌ಟೈಟಲ್ ಮಾತ್ರ ಬೇರೆ ಬೇರೆ ಇಡಲಾಗಿದ್ದು, ಮೊದಲ ಭಾಗಗಕ್ಕೆ ‘ಅಷ್ಟದಿಗ್ಬಂಧನ ಮಂಡಲಕ’ ಹಾಗೂ ಎರಡನೇ ಪಾರ್ಟ್‌ಗೆ ‘ತ್ರಿಶಂಕು’ ಎನ್ನುವ ಸಬ್ ಟೈಟಲ್ ಇಡಲಾಗಿದೆ.