ಅಪ್ಪು ಕಳೆದುಕೊಂಡು ಸಾಕಷ್ಟು ನೊಂದಿದ್ದೇವೆ: ನಿಮ್ಮ ಕುಟುಂಬವನ್ನು ಒಂಟಿಯಾಗಿಸಬೇಡಿ: ಅಭಿಮಾನಿಗಳಿಗೆ ಅಶ್ವಿನಿ ಮನವಿ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ ಚಿತ್ರರಂಗವನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ. ಹೃದಯ ಸ್ತಂಬನದಿಂದ ಕಿರು ವಯಸ್ಸಿನಲ್ಲಿಯೇ ಪುನೀತ್ ಅವರ ಹಠಾತ್ ಸಾವನ್ನು ಅರಗಿಸಿಕೊಳ್ಳಲು ಅಭಿಮಾನಿಗಳಿಗೆ ಇನ್ನೂ ಸಾಧ್ಯವಾಗುತ್ತಿಲ್ಲ.
Published: 09th November 2021 06:25 PM | Last Updated: 09th November 2021 07:35 PM | A+A A-

ಅಶ್ವಿನಿ ಪುನೀತ್
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ ಚಿತ್ರರಂಗವನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ. ಹೃದಯ ಸ್ತಂಬನದಿಂದ ಕಿರು ವಯಸ್ಸಿನಲ್ಲಿಯೇ ಪುನೀತ್ ಅವರ ಹಠಾತ್ ಸಾವನ್ನು ಅರಗಿಸಿಕೊಳ್ಳಲು ಅಭಿಮಾನಿಗಳಿಗೆ ಇನ್ನೂ ಸಾಧ್ಯವಾಗುತ್ತಿಲ್ಲ. ಪುನೀತ್ ಇನ್ನಿಲ್ಲ ಎಂದು ತಿಳಿದು ಈಗಾಗಲೇ ಸುಮಾರು 12 ಮಂದಿ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಲು ಸಾಲಾಗಿ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಪುನೀತ್ ಪತ್ನಿ ಅಶ್ವಿನಿ ಪ್ರತಿಕ್ರಿಯಿಸಿದ್ದಾರೆ. 'ಪುನೀತ್ ಸಾವು ನಮ್ಮ ಕುಟುಂಬಕ್ಕೆ ತುಂಬಲಾರದ ನಷ್ಟ. ಇಂತಹ ಪರಿಸ್ಥಿತಿ ನಿಮ್ಮ ಕುಟುಂಬಕ್ಕೆ ಬರಬಾರದು.
ಅಪ್ಪು ಇನ್ನಿಲ್ಲ ಎಂಬ ವಿಷಯವನ್ನು ನಮ್ಮಿಂದಲೂ ಅರಗಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಇಂತಹ ಸಮಯದಲ್ಲಿ ನೀವು ತೋರುತ್ತಿರುವ ನಿಷ್ಕಲ್ಮಶ ಪ್ರೀತಿಗೆ ನಾವು ಸದಾ ಋಣಿಯಾಗಿರುತ್ತೇವೆ. ಅವರು ನಮ್ಮ ನಡುವೆ ಇಲ್ಲದಿದ್ದರೂ ನಮ್ಮ ಬಗ್ಗೆಯೇ ಆಲೋಚಿಸುತ್ತಲೇ ಇರುತ್ತಾರೆ.
ದಯಮಾಡಿ ಯಾವುದೇ ಅಭಿಮಾನಿಗಳು ಆತ್ಮಹತ್ಯೆಗೆ ಮುಂದಾಗಿ ನಿಮ್ಮ ಕುಟುಂಬವನ್ನು ಒಂಟಿಯಾಗಲು ಬಿಡಬೇಡಿ ಎಂದು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
ಮತ್ತೊಂದೆಡೆ ಅಪ್ಪು ಸಹೋದರರಾದ ಶಿವರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಕೂಡ ಅಭಿಮಾನಿಗಳಿಗೆ ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವಿ ಮಾಡಿದ್ದಾರೆ. ಅಂತ್ಯಕ್ರಿಯೆ ದೃಶ್ಯಗಳನ್ನು ಪದೇ ಪದೇ ಪ್ರಸಾರ ಮಾಡದಂತೆ ಅವರು ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿದ್ದಾರೆ.