'ಏಕ್ ಲವ್ ಯಾ' ಚಿತ್ರದ ಹಾಡಿನ ಬಿಡುಗಡೆ ವೇಳೆ ಶಾಂಪೇನ್ ಸಂಭ್ರಮ: ಕ್ಷಮೆ ಕೇಳಿದ ನಿರ್ದೇಶಕ ಪ್ರೇಮ್ ಹಾಗೂ ಚಿತ್ರತಂಡ
ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ(Ek Love Ya) ಚಿತ್ರದ 'ಎಣ್ಣೆಗೂ ಹೆಣ್ಣಿಗೂ ಏನು ಸಂಬಂಧ'? ಹಾಡಿನ ಬಿಡುಗಡೆ ಸಂಬಂಧ ಚಿತ್ರತಂಡ ಖಾಸಗಿ ಹೊಟೇಲ್ ನಲ್ಲಿ ಕಾರ್ಯಕ್ರಮ ಏರ್ಪಡಿಸಿತ್ತು.
Published: 13th November 2021 01:11 PM | Last Updated: 13th November 2021 01:11 PM | A+A A-

ನಿರ್ದೇಶಕ ಪ್ರೇಮ್, ಬಲಚಿತ್ರದಲ್ಲಿ ಹಾಡಿನ ಒಂದು ದೃಶ್ಯ
ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ(Ek Love Ya) ಚಿತ್ರದ 'ಎಣ್ಣೆಗೂ ಹೆಣ್ಣಿಗೂ ಏನು ಸಂಬಂಧ'? ಹಾಡಿನ ಬಿಡುಗಡೆ ಸಂಬಂಧ ಚಿತ್ರತಂಡ ಖಾಸಗಿ ಹೊಟೇಲ್ ನಲ್ಲಿ ಕಾರ್ಯಕ್ರಮ ಏರ್ಪಡಿಸಿತ್ತು.
ಕಾರ್ಯಕ್ರಮದ ಆರಂಭಕ್ಕೆ ಇತ್ತೀಚೆಗೆ ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ನಮಿಸಿ, ಶ್ರದ್ದಾಂಜಲಿ ಸಲ್ಲಿಸಲಾಗಿತ್ತು. ನಂತರ ಅದೇ ವೇದಿಕೆಯಲ್ಲಿ ಪುನೀತ್ ಭಾವಚಿತ್ರದ ಎದುರು ಚಿತ್ರತಂಡದವರು ಶಾಂಪೇನ್ ಬಾಟಲ್ ತೆರೆದು ಸಂಭ್ರಮಾಚರಣೆ ಮಾಡಿ ಹಾಡು ಬಿಡುಗಡೆ ಮಾಡಿತ್ತು. ಇದು ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಪುನೀತ್ ಅವರು ನಿಧನರಾಗಿ ಇನ್ನೂ 15 ದಿನಗಳಾಗಿಲ್ಲ, ಎಲ್ಲರೂ ಶೋಕದಲ್ಲಿರುವಾಗ ಅವರ ಫೋಟೋ ಮುಂದೆ ಶಾಂಪೇನ್ ಸಂಭ್ರಮವೇಕೆ ಎಂದು ಹಲವರು ಪ್ರಶ್ನಿಸಿದ್ದರು. ಸಾರಾ ಗೋವಿಂದ್ ಅವರು ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಚಿತ್ರದ ನಿರ್ದೇಶಕ ಜೋಗಿ ಪ್ರೇಮ್, ಆ ಸಂದರ್ಭದಲ್ಲಿ ಶಾಂಪೇನ್ ಬಾಟಲ್ ಹಾರಿಸಿ ಸಂಭ್ರಮಾಚರಣೆ ಮಾಡಿದರೆ ಜನರಿಗೆ, ಅಪ್ಪು ಅಭಿಮಾನಿಗಳಿಗೆ ನೋವುಂಟಾಗಬಹುದು ಎಂಬ ಅರಿವು ಬರಲಿಲ್ಲ. ಪುನೀತ್ ಅವರು ಯಾವಾಗಲೂ ಕೆಲಸವನ್ನು ಇಷ್ಟಪಡುತ್ತಿದ್ದರು. ಚಿತ್ರರಂಗದಲ್ಲಿ ಕೆಲಸ ಮಾಡಲು ನನಗೆ ಅವರೇ ಸ್ಪೂರ್ತಿ. ಏನೇ ಸಮಸ್ಯೆಯಾದರೂ ಶೋ ಮಸ್ಟ್ ಗೋ ಆನ್ ಎಂದು ಅಪ್ಪು ಹೇಳುತ್ತಿದ್ದರು. ಎಷ್ಟೇ ಕಷ್ಟವಾದರೂ, ಏನೇ ಅಡೆತಡೆಗಳು ಬಂದರೂ ನಮ್ಮ ಕೆಲಸ ಮುಂದುವರಿಸಬೇಕೆಂದು ಹೇಳುತ್ತಿದ್ದ ಅಪ್ಪು ಅವರನ್ನು ಕಾರ್ಯಕ್ರಮದ ಆರಂಭದಲ್ಲಿ ನೆನೆದು ನಂತರ ಕೊನೆಗೆ ಶಾಂಪೇನ್ ಸಂಭ್ರಮ ಮಾಡಿದವು.
ಇದು ಉದ್ದೇಶಪೂರ್ವಕವಾಗಿ ಮಾಡಿರುವ ಪ್ರಮಾದವಲ್ಲ, ಯಾರ ಮನಸ್ಸಿಗೂ ನೋವುಂಟುಮಾಡುವ ಉದ್ದೇಶ ನಮಗಿರಲಿಲ್ಲ, ನಮ್ಮ ನಡವಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ, ಯಾರಿಗಾದರೂ ತೊಂದರೆಯಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ನಿರ್ದೇಶಕ ಪ್ರೇಮ್ ಕೋರಿಕೊಂಡಿದ್ದಾರೆ.
ಇನ್ನು ಚಿತ್ರದ ನಾಯಕಿ ರಚಿತಾ ರಾಮ್ ಕೂಡ ಜನರಲ್ಲಿ ಕ್ಷಮೆ ಕೇಳಿದ್ದಾರೆ. ನಿನ್ನೆ ಅಪ್ಪು ಭಾವಚಿತ್ರದ ಮುಂದೆ ಶಾಂಪೇನ್ ಬಾಟಲ್ ಓಪನ್ ಮಾಡಿ ಹಾಡನ್ನು ಬಿಡುಗಡೆಗೊಳಿಸಿರುವ ಬಗ್ಗೆ ಜನರಿಗೆ ನೋವಾಗಿದ್ದರೆ ಕ್ಷಮೆಯಿರಲಿ, ನಾನು ಕೂಡ ಚಿತ್ರದ ಭಾಗವಾಗಿರುವುದರಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಕ್ಷಮೆ ಕೇಳುತ್ತೇನೆ. ಅಪ್ಪು ಅವರಿಗೆ ಅವಮಾನ ಮಾಡುವ ಉದ್ದೇಶ, ಯೋಚನೆ ಇರಲಿಲ್ಲ, ಉದ್ದೇಶಪೂರ್ವಕವಲ್ಲದ ತಪ್ಪನ್ನು ಕ್ಷಮಿಸುತ್ತಾರೆಂದು ನಂಬಿದ್ದೇನೆ ಎಂದಿದ್ದಾರೆ.
— Rachita Ram (@RachitaRamDQ) November 13, 2021
ಇನ್ನು ಚಿತ್ರದ ನಿರ್ಮಾಪಕಿ, ನಟಿ ರಕ್ಷಿತಾ ಪ್ರೇಮ್ ಮತ್ತು ಕಾರ್ಯಕ್ರಮದ ನಿರೂಪಕ ಅಕುಲ್ ಬಾಲಾಜಿ ಕೂಡ ಜನರಲ್ಲಿ ಕ್ಷಮೆ ಕೇಳಿದ್ದಾರೆ.