ಪುನೀತ ನಮನ ಕಾರ್ಯಕ್ರಮ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ಮರಣೋತ್ತರ 'ಕರ್ನಾಟಕ ರತ್ನ' ಘೋಷಣೆ

ಅಕಾಲಿಕವಾಗಿ ವಿಧಿವಶರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ರಾಜ್ಯ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ.
ಪುನೀತ್ ನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಸಿಎಂ ಬೊಮ್ಮಾಯಿ
ಪುನೀತ್ ನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಸಿಎಂ ಬೊಮ್ಮಾಯಿ

ಬೆಂಗಳೂರು: ಅಕಾಲಿಕವಾಗಿ ವಿಧಿವಶರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ರಾಜ್ಯ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ.

ಪುನೀತ ನಮನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಪುನೀತ್ ಗೆ ಮರಣೋತ್ತರ ಕರ್ನಾಟಕ ರತ್ನ ಘೋಷಿಸಿ, ರಾಜಕುಮಾರ್ ರಂತೆ ಪುನೀತ್ ಗೂ ಸ್ಮಾರಕ ನಿರ್ಮಿಸುವುದಾಗಿ ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಪುನೀತ ನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಘೋಷಿಸಿದರು.

ಪುನೀತ್ ಅತ್ಯುತ್ತಮ ಚಾರಿತ್ರ್ಯದ ಕಾರಣ ಇತಿಹಾಸದ ಪುಟಗಳಲ್ಲಿ ಸೇರಿದ್ದಾರೆ. ಅವರಂತೆ ವಿನಯ, ವಿಧೇಯತೆಯನ್ನು ರೂಢಿಸಿಕೊಂಡವರು ಕಡಿಮೆ ಎಂದರು.

ಕೇವಲ ಕರ್ನಾಟಕ ರತ್ನ ಮಾತ್ರವಲ್ಲದೆ ರಾಷ್ಟ್ರಮಟ್ಟದ ಪ್ರಶಸ್ತಿಗಳಿಗೂ ಅಪ್ಪು ಭಾಜನರಾಗುವ ಬಗ್ಗೆ ಚಿಂತನೆ ನಡೆಸಲಾಗುವುದು. ಡಾ ರಾಜ್ ಕುಮಾರ್ ಸ್ಮಾರಕದಂತೆ ಪುನೀತ್ ಸ್ಮಾರಕವನ್ನೂ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಮುತ್ತುರಾಜ ಹೆತ್ತ ಮುತ್ತೇ ಎತ್ತ ಹೋದೆಯೋ...
ನಗರದ ಅರಮನೆ ಮೈದಾನದಲ್ಲಿ ನಡೆದ ಪುನೀತ ನಮನ ಕಾರ್ಯಕ್ರಮದಲ್ಲಿ ‘ದೀಪ ನಮನ’ ಹಾಗೂ ಪುಷ್ಪಾರ್ಚನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಸಚಿವರು, ಶಾಸಕರು ಸೇರಿದಂತೆ ಗಣ್ಯಾತಿಗಣ್ಯರು ಮೇಣದ ಬತ್ತಿ ಬೆಳಗಿ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಚಿತ್ರ ಸಾಹಿತಿ ಡಾ.ನಾಗೇಂದ್ರ ಪ್ರಸಾದ್ ರಚನೆಯ ‘ಮುತ್ತುರಾಜ ಹೆತ್ತ ಮುತ್ತೇ ಎತ್ತ ಹೋದೆಯೋ’ ಎಂಬ ಹೃದಯ ತಟ್ಟುವ ಗೀತೆ ಹಿನ್ನೆಲೆಯಲ್ಲಿ ಮೂಡಿಬಂದಾಗ ನಟ ಶಿವರಾಜ್ ಕುಮಾರ್ ಅಗಲಿದ ಸೋದರನನ್ನು ನೆನೆದು ಕಣ್ಣೀರಾದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಡಳಿತ ಪಕ್ಷದ ಸಚಿವರುಗಳು ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಿದರು.

ನಟ ವಿಶಾಲ್ ಸೇರಿದಂತೆ ದಕ್ಷಿಣ ಚಿತ್ರರಂಗದ ಕಲಾವಿದರು ಪುನೀತ ನಮನದಲ್ಲಿ ಪಾಲ್ಗೊಂಡರು.

ಕಿರುಚಿತ್ರ ಪ್ರದರ್ಶನ: ಕಿಚ್ಚನ ಹಿನ್ನೆಲೆ ದನಿದಾನ
ದಿಢೀರನೆ ಕಣ್ಮರೆಯಾದ ಚಂದನವನದ ನಕ್ಷತ್ರ ಅಪ್ಪು ಸ್ಮರಣೆಗಾಗಿ ಹಮ್ಮಿಕೊಂಡಿದ್ದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ, ಅವರ ಅಭಿನಯದ ಚಿತ್ರಗಳ ಮಾಹಿತಿ, ಸಮಾಜ ಮುಖಿ ಚಟುವಟಿಕೆ, ಸಹಾಯದ ಬಗ್ಗೆ ಕಿರುಚಿತ್ರವೊಂದನ್ನು ಪ್ರದರ್ಶಿಸಲಾಗಿದ್ದು, ಕಿಚ್ಚ ಸುದೀಪ್ ಹಿನ್ನೆಲೆ ದನಿದಾನದ ಮೂಲಕ ಗೆಳೆಯನಿಗೆ ನಮನ ಸಲ್ಲಿಸಿದ್ದಾರೆ.

ಪುನೀತ್ ಸೇವಾಕಾರ್ಯಗಳು, ಸಂಕಷ್ಟದಲ್ಲಿದ್ದವರಿಗೆ ನೆರವು, ಎಲ್ಲರೊಡನೆ ಗೌರವದಿಂದ ವರ್ತಿಸುತ್ತಿದ್ದ ರೀತಿಯನ್ನು ಕಿರುಚಿತ್ರದಲ್ಲಿ ಹೇಳಲಾಗಿದೆ.

ಪ್ರೇಮದ ಕಾಣಿಕೆ ಚಿತ್ರದಲ್ಲಿ ಬಾಲನಟನಿಂದ ಆರಂಭವಾಗಿ ನಾಯಕ ನಟನಾಗಿ, ನಿರ್ಮಾಪಕನಾಗಿ ಸ್ಯಾಂಡಲ್ ವುಡ್ ಗೆ ನೀಡಿದ ಕೊಡುಗೆ, ಅನಾಥಾಶ್ರಮ, ಶಕ್ತಿಧಾಮ, ಗೋಶಾಲೆಗಳ ನಿರ್ವಹಣೆ ಸೇರಿದಂತೆ ಪುನೀತ್ ಜೀವನ ಚಿತ್ರಣವನ್ನು ಕಿರುಚಿತ್ರದಲ್ಲಿ ನೀಡಲಾಗಿದೆ.

ಪುನೀತ್ ಅಗಲಿಕೆ ಸುದ್ದಿ ಅರಮನೆಗೆ ದುಃಖ ತಂದಿತ್ತು: ಯದುವೀರ ಒಡೆಯರ್
ಮೈಸೂರು ಅರಮನೆಗೂ ಡಾ. ರಾಜ್ ಕುಮಾರ್ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. ಪುನೀತ ನಮನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿ, ಡಾ. ರಾಜ್ ಅವರ ಐತಿಹಾಸಿಕ ಚಿತ್ರಗಳು ನಮ್ಮ ರಾಜವಂಶದ ಬಗೆಗಿನ ಕುತೂಹಲವನ್ನು ಹೆಚ್ಚಿಸಿತು ಎಂದರು. ಪುನೀತ್ ಅಗಲಿಕೆಯ ಸುದ್ದಿ ಅರಮನೆಗೆ ದುಃಖ ತಂದಿತ್ತು. ಇಂತಹ ನೋವನ್ನು ಭರಿಸುವ ಶಕ್ತಿಯನ್ನು ಡಾ. ರಾಜ್ ಕುಟುಂಬಕ್ಕೆ ತಾಯಿ ಚಾಮುಂಡೇಶ್ವರಿ ನೀಡಲಿ ಎಂದು ಆಶಿಸಿದರು.

ಪುನೀತ ನಮನ: ಮರಣೋತ್ತರ ಪದ್ಮಶ್ರೀಗೆ ಸಿದ್ದರಾಮಯ್ಯ ಆಗ್ರಹ
ಇತ್ತೀಚೆಗೆ ವಿಧಿವಶರಾದ ನಟ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸುವ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ನಟ, ನಟಿಯರು, ರಾಜಕಾರಣಿಗಳು ಸೇರಿದಂತೆ ಗಣ್ಯರು ನುಡಿನಮನ ಸಲ್ಲಿಸಿದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಪುನೀತ್ ಅವರ ವಿನಯ, ವಿಧೇಯತೆಯನ್ನು ಸ್ಮರಿಸಿದರೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ‘ರಾಜಕುಮಾರ’ ಚಿತ್ರ ವೀಕ್ಷಿಸಿದ್ದನ್ನು ನೆನಪಿಸಿಕೊಂಡರು.

ನಯ, ವಿನಯ, ಸರಳತೆ, ಸಹಕಾರ ನೀಡುವ ಗುಣದಿಂದ ಅವರು ಜನಪ್ರಿಯರಾದರು. ‘ರಾಜಕುಮಾರ’ ಚಿತ್ರ ವೀಕ್ಷಿಸುವಂತೆ ಕೇಳಿಕೊಂಡಿದ್ದರು. ಬಹುದಿನಗಳಿಂದ ಸಿನಿಮಾ ನೋಡದಿದ್ದ ತಾವು ಪುನೀತ ಮಾತಿಗೆ ಮನ್ನಣೆಯಿತ್ತು ಮೈಸೂರಿನ ಸರಸ್ವತಿ ಚಿತ್ರಮಂದಿರದಲ್ಲಿ ‘ರಾಜಕುಮಾರ’ ವೀಕ್ಷಿಸಿದೆ ಎಂದರು.

ಪುನೀತ್ ಗೆ ಮರಣೋತ್ತರ ‘ಕರ್ನಾಟಕ ರತ್ನ’ ಘೋಷಿಸಿದ್ದರು ಸ್ವಾಗತಾರ್ಹ. ಅಂತೆಯೇ, ಸಂಪುಟದಲ್ಲಿ ಚರ್ಚಿಸಿ ಮರಣೋತ್ತರ ಪದ್ಮಶ್ರೀ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

ಶಕ್ತಿಧಾಮದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಅವಕಾಶ ಕೊಡಿ: ವಿಶಾಲ್
ಅಪ್ಪು ಹೃದಯಾಘಾತದಿಂದ ಅಗಲಿದ್ದಾರೆ ಎಂಬ ಸುದ್ದಿಯನ್ನು ಅಂದು ನಂಬಲು ಸಾಧ್ಯವಾಗಲೇ ಇಲ್ಲ. ಅವರ ನಗೆಮೊಗ ಈಗಲೂ ಕಣ್ಣೆದುರೇ ಇದೆ ಎಂದು ತೆಲುಗು ನಟ ವಿಶಾಲ್ ಹೇಳಿದ್ದಾರೆ.

ಪುನೀತ ನಮನ ಕಾರ್ಯಕ್ರಮದಲ್ಲಿ ಕನ್ನಡದಲ್ಲಿಯೇ ಮಾತು ಆರಂಭಿಸಿ, ನಮ್ಮಪ್ಪ ಕನ್ನಡಿಗ. ಸ್ವಲ್ಪ ಸ್ವಲ್ಪ ಕನ್ನಡ ಬರುತ್ತೆ ಎಂದ ವಿಶಾಲ್, ಅಪ್ಪು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಅವರು ಮಾಡಿದ ಕಾರ್ಯಗಳಲ್ಲಿ ಒಂದಿಷ್ಟು ಭಾಗಿಯಾಗಲು ಶಕ್ತಿಧಾಮದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಸಲುವಾಗಿ ತಮಗೆ ಅವಕಾಶ ನೀಡುವಂತೆ ದೊಡ್ಮನೆ ಕುಟುಂಬಸ್ಥರಲ್ಲಿ ಮನವಿ ಮಾಡಿದರು.

ಸ್ವಂತ ಮನೆಗಾಗಿ ಇಟ್ಟಿರುವ ಹಣವನ್ನು ಶಕ್ತಿಧಾಮದ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಲು ಮುಂದಾಗಿರುವೆ. ಹಾಗೂ ಎಲ್ಲಾ ಸೇವಾ ಕೈಂಕರ್ಯ ಮುಂದುವರಿಸಲು ಸಿದ್ಧನಾಗಿರುವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com