
ದುನಿಯಾ ವಿಜಯ್
ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದ ಸಲಗ ಸಿನಿಮಾ ರಿಲೀಸ್ ಆಗಿ ಒಂದು ವಾರ ಕಳೆದಿದ್ದು, ಬರುತ್ತಿರುವ ಉತ್ತಮ ಪ್ರತಿಕ್ರಿಯೆಗೆ ನಟ ವಿಜಯ್ ಗೆ ಹೃದಯ ತುಂಬಿ ಬಂದಿದೆ.
ಪ್ರೇಕ್ಷಕರು ಮತ್ತು ಚಿತ್ರತಂಡದ ಸಹಾಯವಿಲ್ಲದೇ ಯಶಸ್ಸು ಸಾಧ್ಯವಿಲ್ಲ ಎಂದು ವಿಜಯ್ ತಿಳಿಸಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ಹಿಟ್ ಸಿಕ್ಕು ಬಹಳ ಸಮಯವಾಗಿದೆ. ಪ್ರತಿ ಬಾರಿಯೂ ಒಂದು ಚಲನಚಿತ್ರವು ಫ್ಲಾಪ್ ಆದಾಗ ಬ್ಲೇಮ್ ಗೇಮ್ ಆಗುತ್ತಿತ್ತು. ಆ ಪಟ್ಟಿಯಲ್ಲಿ ನಾಯಕ ಮೊದಲಿಗನಾಗಿದ್ದನು. ಅದರಿಂದ ನಾನು ಈ ನಿರ್ದೇಶಕರ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮುಂದಾದೆ. ನಿರ್ಮಾಪಕ ಕೆ ಪಿ ಶ್ರೀಕಾಂತ್ ಅವರ ಬೆಂಬಲವು ಕೂಡ ಒಂದು ಪ್ರಮುಖ ಅಂಶವಾಗಿದೆ.
ಮಾಸ್ ಪ್ರೇಕ್ಷಕರ ಮನಸೂರೆಗೊಂಡಿರುವ ಈ ಚಿತ್ರವು ಕೌಟುಂಬಿಕ ಪ್ರೇಕ್ಷಕರಿಗೂ ಇಷ್ಟವಾಗಿದೆ. ಇದರಿಂದ ವಿಜಯ್ ಖುಷಿಯಾಗಿದ್ದಾರೆ. "ಸಾಮಾನ್ಯವಾಗಿ ರೌಡಿಸಂ ಕುರಿತ ಸಿನಿಮಾವನ್ನು ಕೇವಲ ಮಚ್ಚು ಮತ್ತು ಬಂದೂಕು ಹಿಡಿದಿರುವ ಚಿತ್ರ ಎಂದು ನಿರ್ಧರಿಸಲಾಗುತ್ತದೆ. ಹೀಗಿದ್ದರೂ, ಸಲಗ ತಯಾರಿಕೆಯು ವಿಭಿನ್ನವಾಗಿದ್ದು ಹಲವು ಪ್ರಮುಖ ಅಂಶಗಳನ್ನು ಹೊಂದಿದೆ ಎಂದು ವಿಜಯ್ ತಿಳಿಸಿದ್ದಾರೆ.
ವಿಜಯ್ ಮತ್ತು ತಂಡ ಶೀಘ್ರದಲ್ಲೇ ಸಕ್ಸಸ್ ಟೂರ್ ಆರಂಭಿಸಲಿದೆ. ನಾವು ತುಮಕೂರಿನಿಂದ ಆರಂಭಿಸಿ ಕರ್ನಾಟಕದಾದ್ಯಂತ ಪ್ರಯಾಣಿಸಲಿದ್ದೇವೆ, ಚಿತ್ರದ ಯಶಸ್ಸಿಗೆ ಅಪಾರ ಕೊಡುಗೆ ನೀಡಿದ ನನ್ನ ಪ್ರೇಕ್ಷಕರಿಗೆ ಅಭಿನಂದನೆ ಸಲ್ಲಿಸಲು ನಾವು ಈ ಪ್ರವಾಸವನ್ನು ಮಾಡುತ್ತಿದ್ದೇವೆ. ಸಾಂಕ್ರಾಮಿಕ ಸಮಯದಲ್ಲಿ ಬರುವ ಈ ರೀತಿಯ ಪ್ರತಿಕ್ರಿಯೆ ಹೆಚ್ಚು ಕಡಿಮೆ ಪವಾಡವಾಗಿದೆ ಎಂದು ವಿಜಯ್ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ 'ಸಲಗ' ಸಿನಿಮಾ ನನಗೆ ಫ್ರೆಶ್ ಸ್ಟಾರ್ಟ್ ನೀಡಲಿದೆ: ನಟಿ ಸಂಜನಾ ಆನಂದ್
ಲಾಕ್ ಡೌನ್, ನನ್ನ ತಾಯಿಯ ಸಾವು ಹಾಗೂ ರಿಲೀಸ್ ಟೆನ್ಸನ್ ನಿಂದ ನಾನು ಸಾಕಷ್ಟು ಒತ್ತಡದಲ್ಲಿದ್ದೆ. ನನ್ನ ಮುಂದಿನ ಪ್ರಾಜೆಕ್ಟ್ ಆರಂಭಿಸುವ ಮುನ್ನ ನಾನು ಮಾನಸಿಕವಾಗಿ ಸಿದ್ಧವಾಗಬೇಕು ಎಂದು ವಿಜಯ್ ತಿಳಿಸಿದ್ದಾರೆ.