ಕನ್ನಡ ಸಿನಿಮಾದ ಯುವ ಪ್ರತಿಭೆಗಳಿಗೆ ಭರವಸೆಯಾಗಿದ್ದ 'ಅಪ್ಪು' ವನ್ನು ಕಸಿದುಕೊಂಡ ಸಾವೇ... ನೀ ಹೆಮ್ಮೆಪಡಬೇಡ!
ನಟ ಪುನೀತ್ ರಾಜಕುಮಾರ್ ಅಕಾಲಿಕ ಮರಣ ಇಡೀ ಕರ್ನಾಟಕವನ್ನೇ ದುಃಖ ಸಾಗರದಲ್ಲಿ ಮುಳುಗುವಂತೆ ಮಾಡಿದೆ, ಈ ಹಿನ್ನೆಲೆಯಲ್ಲಿ ಹಿರಿಯ ನಟ ಪ್ರಕಾಶ್ ಬೆಳವಾಡಿ ತಮ್ಮ ಅನಿಸಿಕೆಯನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಹಂಚಿಕೊಂಡಿದ್ದಾರೆ
Published: 30th October 2021 09:49 AM | Last Updated: 30th October 2021 08:12 PM | A+A A-

ಪುನೀತ್ ರಾಜಕುಮಾರ್
ನಟ ಪುನೀತ್ ರಾಜಕುಮಾರ್ ಅಕಾಲಿಕ ಮರಣ ಇಡೀ ಕರ್ನಾಟಕವನ್ನೇ ದುಃಖ ಸಾಗರದಲ್ಲಿ ಮುಳುಗುವಂತೆ ಮಾಡಿದೆ, ಈ ಹಿನ್ನೆಲೆಯಲ್ಲಿ ಹಿರಿಯ ನಟ ಪ್ರಕಾಶ್ ಬೆಳವಾಡಿ ತಮ್ಮ ಅನಿಸಿಕೆಯನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಹಂಚಿಕೊಂಡಿದ್ದಾರೆ.
ಪುನೀತ್ ಫಿಟ್ ಆಗಿದ್ದರು, ಜೊತೆಗೆ ಸದಾ ಕ್ರಿಯಾಶೀಲರಾಗಿದ್ದರು, ಡೌನ್ ಟು ಅರ್ಥ್ ಆಗಿದ್ದ ಪುನೀತ್ ಹೊಸ ಯೋಜನೆಗಳನ್ನು ತಲೆಗೆ ತುಂಬಿಕೊಂಡಿದ್ದರು.
ಅಪ್ಪು ಹುಟ್ಟಿದ ಮೊದಲ ಆರು ತಿಂಗಳನ್ನು ಹೊರತು ಪಡಿಸಿ ಉಳಿದ 46 ವರ್ಷಗಳ ಕಾಲ ಪರದೆಯ ಮೇಲೆ ಸ್ಟಾರ್ ಆಗಿ ಎಲ್ಲರನ್ನೂ ರಂಜಿಸಿದ್ದರು. ಅವರು ಇನ್ನೂ 40 ವರ್ಷ ಬದುಕಬಹುದು ಎಂದು ಅವರನ್ನು ನೋಡಿದ್ದ ಯಾರಾದರೂ ಹೇಳುತ್ತಾರೆ.
ನಿನ್ನೆಯಿಂದ ಅವರ ಅಭಿಮಾನಿಗಳು, ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಸಿನಿಮಾರಂಗದಲ್ಲಿ ಅವರನ್ನು ತಿಳಿದಿರುವ ಪ್ರತಿಯೊಬ್ಬ ವ್ಯಕ್ತಿ ಹಾಗೂ ಹಿತೈಷಿಗಳ ಕಣ್ಣೀರಿಗೆ ಮಿತಿಯೇ ಇಲ್ಲ.
ಸಭ್ಯ, ಕರುಣಾಮಯಿ ಅಪ್ಪು, ವಿಶ್ವಮಾನವನನ್ನು ದೇವರು ಇಷ್ಟು ಬೇಗ ಕಿತ್ತುಕೊಳ್ಳುತ್ತಾನೆ ಎಂದು ಯಾರೂ ಎಣಿಸಿರಲಿಲ್ಲ,. ವಿಧಿ ಯಾವಾಗ ಯಾರ ಜೀವನದಲ್ಲಿ ಹೇಗೆ ಬೇಕಾದರೂ ಆಟವಾಡುತ್ತದೆ.
ಅಪ್ಪು ಅಗಲಿಕೆಯ ನಷ್ಟ ಕೇವಲ ಭಾವನಾತ್ಮಕವಲ್ಲ. ಡಿಜಿಟಲ್ ಸಿನಿಮಾ ತಂದ ಸವಾಲಿನ ಈ ಸಮಯದಲ್ಲಿ ಕನ್ನಡ ಚಿತ್ರರಂಗವನ್ನು ಮುನ್ನಡೆಸಲು ಹೊಸ ಸ್ಕ್ರಿಪ್ಟ್‌ಗಳನ್ನು ಕಲ್ಪಿಸಿ ಬರೆಯುತ್ತಿರುವ ಹೊಸ ತಲೆಮಾರಿನ ಯುವ ಚಲನಚಿತ್ರ ನಿರ್ಮಾಪಕರಿಗೆ ಪುನೀತ್ ರಾಜ್‌ಕುಮಾರ್ ಅನೇಕ ರೀತಿಯಲ್ಲಿ ಭರವಸೆಯಾಗಿದ್ದರು.
ತಮ್ಮ ಉದ್ಯಮಿ ಪತ್ನಿ ಅಶ್ವಿನಿಯೊಂದಿಗೆ, ಅವರು ನಾಲ್ಕು ವರ್ಷಗಳ ಹಿಂದೆ ದೊಡ್ಡ ಪರದೆಯಲ್ಲಿ ಯುವ ಪ್ರತಿಭೆಗಳನ್ನು ಬೆಂಬಲಿಸಲು ಪಿಆರ್ ಕೆ ಪ್ರೊಡಕ್ಷನ್ಸ್ ಪ್ರಾರಂಭಿಸಿದರು. ಪುನೀತ್ ದಂಪತಿ ತಾಳ್ಮೆಯಿಂದ ಕಥೆ ಕೇಳುತ್ತಿದ್ದರು, ಹಣಕಾಸು ಮತ್ತು ಸಿನಿಮಾ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದರು. ಒಟಿಟಿ ಫ್ಲಾಟ್ ಫಾರ್ಮ್ ಗಳ ಬಗ್ಗೆ ಗಮನ ಹರಿಸುತ್ತಿದ್ದ ಕನ್ನಡದ ಕೆಲವೇ ಕೆಲವು ಬ್ಯಾನರ್ ಗಳಲ್ಲಿ ಪಿಆರ್ ಕೆ ಪ್ರೊಡಕ್ಷನ್ ಕೂಡ ಒಂದಾಗಿದೆ.
ಇದನ್ನೂ ಓದಿ: ಬಾರದ ಲೋಕಕ್ಕೆ ಹೋದ ಪುನೀತ್ ರಾಜ್ ಕುಮಾರ್: ಗಾಜನೂರಿನಲ್ಲಿ ನೀರವ ಮೌನ
ಕೋವಿಡ್ ಸೋಂಕು ಜಗತ್ತನ್ನು ಪೀಡಿಸುತ್ತಿರುವಾಗ, ಇತರ ಭಾಷೆಯ ಚಲನಚಿತ್ರಗಳಿಂದ ಆಕ್ರಮಣಕಾರಿ ಸ್ಪರ್ಧೆಯಿಂದಾಗಿ ಈಗಾಗಲೇ ಕನ್ನಡ ಸಿನಿಮಾ ನಿರ್ಮಾಣ ಅಪಾಯದಲ್ಲಿದೆ. ಅಪ್ಪು ಸಾವಿನ ಆಘಾತ ಹೆಚ್ಚಿನ ಹತಾಶೆ ತಂದಿದೆ. ಇಂತಹ ಸದರ್ಭದಲ್ಲಿ ನಮಗೆ ಪುನೀತ್ ರಾಜ್ ಕುಮಾರ್ ಬೇಕಿತ್ತು.
ಪುನೀತ್ ಅವರನ್ನು ಜನ ತುಂಬಾ ಪ್ರೀತಿಸುತ್ತಿದ್ದರು, ಮಾಸ್ ಫಾಲೋಯಿಂಗ್ ಹೊಂದಿರುವ ಅಪ್ಪಟ ಸ್ಟಾರ್. ಇತ್ತೀಚೆಗೆ ಕೋವಿಡ್ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಹೊಸಪ್ರಾಜೆಕ್ಟ್ ಘೋಷಿಸಲು ತಯಾರಾಗುತ್ತಿದ್ದರು. ಅವರ ಅಗಲಿಕೆಯು ನಮಗೆ ನೋವುಂಟು ಮಾಡಿದೆ, ಕನ್ನಡ ಸಿನಿಮಾ ಜಗತ್ತನ್ನು ಖಾಲಿ ಖಾಲಿ ಎನಿಸುತ್ತಿದೆ, ಇದು ನಮಗೆ ದುಃಖ ಮತ್ತು ಸ್ವಲ್ಪ ಕೋಪವನ್ನು ಉಂಟುಮಾಡುತ್ತಿದೆ, ಸಾವಿಗೆ ಪುನೀತ್ ಅವರೇ ಬೇಕಿತ್ತೆ? ಇಂತಹ ಒಬ್ಬ ಅಪರೂಪದ ಕಲಾವಿದನನ್ನು ಕಸಿದುಕೊಂಡಿರುವ ಸಾವೇ ನೀ ಹೆಮ್ಮಪಡಬೇಡ.