ಬಾರದ ಲೋಕಕ್ಕೆ ಹೋದ ಪುನೀತ್ ರಾಜ್ ಕುಮಾರ್: ಗಾಜನೂರಿನಲ್ಲಿ ನೀರವ ಮೌನ

ವರನಟ ಡಾ.ರಾಜ್ ಕುಮಾರ್ ತವರೂರಾದ ತಮಿಳುನಾಡಿನ ತಾಳವಾಡಿ ಸಮೀಪದ ದೊಡ್ಡಗಾಜನೂರಿನಲ್ಲಿ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಜನರು ಕಂಬನಿ ಮಿಡಿಯುತ್ತಿದ್ದು, ಊರಲ್ಲಿ ಇದೀಗ ನೀರವ ಮೌನ ಆವರಿಸಿದೆ.
ಗಾಜನೂರು ಮನೆ
ಗಾಜನೂರು ಮನೆ

ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ತವರೂರಾದ ತಮಿಳುನಾಡಿನ ತಾಳವಾಡಿ ಸಮೀಪದ ದೊಡ್ಡಗಾಜನೂರಿನಲ್ಲಿ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಜನರು ಕಂಬನಿ ಮಿಡಿಯುತ್ತಿದ್ದು, ಊರಲ್ಲಿ ಇದೀಗ ನೀರವ ಮೌನ ಆವರಿಸಿದೆ.

ಸ್ಟಾರ್ ಕುಟುಂಬದಲ್ಲಿ ಹುಟ್ಟಿದ್ದರೂ ಅಹಂ ಪ್ರದರ್ಶಿಸದ ನಟ ಪುನೀತ್ ರಾಜ್‍ಕುಮಾರ್ ತಾಳವಾಡಿಯ ದೊಡ್ಡ ಗಾಜನೂರಿಗೆ ಆಗಾಗ ಬಂದು ಹೋಗುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ನಂಟನ್ನು ಬೆಳೆಸಿಕೊಂಡಿದ್ದರು.

ದೊಡ್ಡಗಾಜನೂರಿಗೆ ಕುಟುಂಬ ಸಮೇತ, ಇಲ್ಲವೇ ಒಬ್ಬರೇ ಬಂದು ಹೋಗುತ್ತಿದ್ದ ಅಪ್ಪು ಇಂದು ಇಲ್ಲವೇ ನಾಳೆ ಗಾಜನೂರಿಗೆ ಬರುವುದಾಗಿ ಸಹೋದರ ಸಂಬಂಧಿಗಳಿಗೆ ತಿಳಿಸಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಗಾಜನೂರಿಗೆ ಬಂದಾಗಲೆಲ್ಲ ತಮ್ಮ ಒಡೆತನ ವ್ಯಾಪ್ತಿಗೆ ಬರುವ ಜಮೀನಿನಲ್ಲಿ ಸುತ್ತಾಡುತ್ತಿದ್ದ ಅಪ್ಪು, ಅಣ್ಣಾವ್ರ ನೆಚ್ಚಿನ ಆಲದ ಮರದ ಕೆಳಗೆ ಕುಳಿತು ಧ್ಯಾನ ಮಾಡುತ್ತಿದ್ದರು.

ರಾಜ್​​ಕುಮಾರ್ ಹುಟ್ಟಿದ ಹಳೆಯ ಮನೆಗೂ ಭೇಟಿ ಕೊಟ್ಟು ಗ್ರಾಮಸ್ಥರನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಶಿವಣ್ಣ ಮತ್ತು ಅಪ್ಪು ತಮ್ಮ ಇಡೀ ಕುಟುಂಬದೊಂದಿಗೆ ಗಾಜನೂರಿಗೆ ಭೇಟಿಯಿತ್ತು ಬಾಡೂಟ ಸವಿದು, ಸ್ಥಳೀಯರೊಟ್ಟಿಗೆ ಆತ್ಮೀಯವಾಗಿ ಮಾತನಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.

ಆ ವೇಳೆ, ಮುತ್ತಣ್ಣನ ಮಗ ಎಂದು ಹಾರೈಸಿದ್ದ ಹಿರಿಯರೊಬ್ಬರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅಪ್ಪು ಸಂಭ್ರಮಿಸಿದ್ದ ಫೋಟೋ ಸಖತ್ ವೈರಲ್​​ ಕೂಡ ಆಗಿತ್ತು. ತವರಿನ ಮೋಹ ಬಿಡದ ಅಪ್ಪು ಶುಕ್ರವಾರ ಗಾಜನೂರಿಗೆ ಭೇಟಿ ನೀಡಬೇಕಿತ್ತು. ಈ ವೇಳೆ ಹಾಸಿಗೆ ಹಿಡಿದಿರುವ ಡಾ.ರಾಜ್ ಕುಮಾರ್ ಅವರ ಸಹೋದರಿ ನಾಗಮ್ಮ ಅವರನ್ನು ಭೇಟಿ ಮಾಡುವುದಾಗಿ ಆಪ್ತರೊಂದಿಗೆ ಹೇಳಿಕೊಂಡಿದ್ದರು. ಅಲ್ಲದೆ, ಎರಡು ದಿನ ಗಾಜನೂರಿನಲ್ಲಿಯೇ ಇದ್ದು, ಸೋಮವಾರ ಮೈಸೂರಿಗೆ ಭೇಟಿ ನೀಡಿ ಕಾಲ್ನಡಿಗೆ ಮೂಲಕ ಬೆಟ್ಟ ಹತ್ತಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುವುದಾಗಿ ಹೇಳಿಕೊಂಡಿದ್ದರು.

ಪುನೀತ್ ರಾಜ್ ಕುಮಾರ್ ಅವರು ಭೇಟಿ ನೀಡುವುದಾಗಿ ಹೇಳಿದ್ದ ಹಿನ್ನೆಲೆಯಲ್ಲಿ ಗಾಜನೂರಿನಲ್ಲಿರುವ ಫಾರ್ಮ್ ಹೌಸ್ ನ ಮುಖ್ಯ ದ್ವಾರದ ಬಳಿ ಗೇಟ್ ಗಳನ್ನೂ ಹಾಕಿಸಲಾಗಿತ್ತು. ಈ ನಡುವೆಯೇ ಪುನೀತ್ ಅವರು ಸಾವನ್ನಪ್ಪಿದ್ದಾರೆಂಬ ಸುದ್ದಿ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಗ್ರಾಮಸ್ಥರು ಆಘಾತಕ್ಕೊಳಗಾಗಿದ್ದು, ಗ್ರಾಮದಲ್ಲಿ ಇದೀಗ ನೀರವ ಮೌನ ಆವರಿಸಿದೆ. ಅಲ್ಲದೆ, ಕೊಳ್ಳೆಗಾಲ ಹಾಗೂ ಚಾಮರಾಜನ ನಗರದ ಜಿಲ್ಲೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಜನರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದು, ನೆಚ್ಚಿನ ನಟನಿಗೆ ಗೌರವ ಸೂಚಿಸಿದ್ದಾರೆ.

ಗ್ರಾಮಕ್ಕೆ ಭೇಟಿ ನೀಡಿದಾಗಲೆಲ್ಲೇ ಜನರನ್ನು ನೋಡಿ ನಗುತ್ತಲೇ ನಮಸ್ಕರಿಸುತ್ತಿದ್ದರು. ಇದೀಗ ಕುಟುಂಬದ ಸದಸ್ಯರೊಬ್ಬರನ್ನು ಕಳೆದುಕೊಂಡ ದುಃಖ ನಮಗಾಗುತ್ತಿದೆ ಎಂದು ತಳವಾಡಿಯಲ್ಲಿರುವ ಅಂಗಡಿಯ ಮಾಲೀಕ ಮಹೇಶ್ ಎಂಬುವವರು ಹೇಳಿದ್ದಾರೆ.

ಗ್ರಾಮದಲ್ಲಿ ಪ್ರತೀಯೊಬ್ಬರು ದುಃಖತಪ್ತರಾಗಿದ್ದಾರೆ. ಅಪ್ಪು ಸಾವು ಕರ್ನಾಟಕಕ್ಕೆ ಹಾಗೂ ಚಿತ್ರರಂಗಕ್ಕೆ ಹಾಗೂ ಮಾನವೀಯತೆ ಆಗಿರುವ ದೊಡ್ಡ ನಷ್ಟ ಎಂದು ತಿಳಿಸಿದ್ದಾರೆ.

ಗ್ರಾಮದಲ್ಲಿ ರೈತರಾಗಿರುವ ನಾಗರಾಜಪ್ಪ ಎಂಬುವವರು ಮಾತನಾಡಿ, ಪುನೀತ್ ರಾಜ್ ಕುಮಾರ್ ರಲ್ಲಿ ಅವರ ತಂದೆ ರಾಜ್ ಕುಮಾರ್ ಅವರ ಸಾಕಷ್ಟು ಗುಣಗಳಿದ್ದವು. ಪುನೀತ್ ರನ್ನು ನೋಡಿದರೆ ರಾಜ್ ಕುಮಾರ್ ಅವರನ್ನೇ ನೋಡಿದಂತಾಗುತ್ತಿತ್ತು. ಗ್ರಾಮಕ್ಕೆ ಭೇಟಿ ನೀಡಿದಾಗಲೆಲ್ಲಾ ನಮ್ಮ ಯೋಗಕ್ಷೇಮ ವಿಚಾರಿಸುತ್ತಿದ್ದರು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com