ಮಿನುಗುವ ನಕ್ಷತ್ರದಂತಿದ್ದ 'ಅಪ್ಪು'ವಿನ ಸುಂದರ ಪಯಣಕ್ಕೆ ಹಠಾತ್ ಕೊನೆ: ಪುನೀತ್ ರಾಜ್ ಕುಮಾರ್ ಅಂತಿಮ ವಿದಾಯ 

ಕನ್ನಡ ಚಿತ್ರರಂಗದ ದಂತಕಥೆಯ ಪುತ್ರ, ಸ್ವತಃ ನಾಯಕ ನಟ. ಪವರ್ ಸ್ಟಾರ್ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದ ಈ ವ್ಯಕ್ತಿ ವೈಯಕ್ತಿಕ ಖಾಸಗಿ ಬದುಕಿನಲ್ಲಿ ಕೂಡ ಅಷ್ಟೇ ಸೌಮ್ಯ ವಿನಯವಂತ. ಆಗರ್ಭ ಶ್ರೀಮಂತ ಅಷ್ಟೇ ಕೊಡುಗೈ ದಾನಿ. ಇದು ಒಟ್ಟಾರೆಯಾಗಿ ಹೇಳಬಹುದಾದ ಪುನೀತ್ ರಾಜ್ ಕುಮಾರ್ ಪರಿಚಯ. ತೀವ್ರ ಹೃದಯಾಘಾತದಿಂದ 46 ವರ್ಷಕ್ಕೇ ನಮ್ಮನ್ನೆಲ್ಲಾ ಅಗಲಿ ಹೋಗಿದ್ದಾರೆ
ಬಾಲನಟನಾಗಿ ಪುನೀತ್
ಬಾಲನಟನಾಗಿ ಪುನೀತ್

ಬೆಂಗಳೂರು: ಕನ್ನಡ ಚಿತ್ರರಂಗದ ದಂತಕಥೆಯ ಪುತ್ರ, ಸ್ವತಃ ನಾಯಕ ನಟ. ಪವರ್ ಸ್ಟಾರ್ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದ ಈ ವ್ಯಕ್ತಿ ವೈಯಕ್ತಿಕ ಖಾಸಗಿ ಬದುಕಿನಲ್ಲಿ ಕೂಡ ಅಷ್ಟೇ ಸೌಮ್ಯ ವಿನಯವಂತ. ಆಗರ್ಭ ಶ್ರೀಮಂತ ಅಷ್ಟೇ ಕೊಡುಗೈ ದಾನಿ. ಇದು ಒಟ್ಟಾರೆಯಾಗಿ ಹೇಳಬಹುದಾದ ಪುನೀತ್ ರಾಜ್ ಕುಮಾರ್ ಪರಿಚಯ. ತೀವ್ರ ಹೃದಯಾಘಾತದಿಂದ 46 ವರ್ಷಕ್ಕೇ ನಮ್ಮನ್ನೆಲ್ಲಾ ಅಗಲಿ ಹೋಗಿದ್ದಾರೆ.

ಬಾಲ ನಟನಾಗಿಯೇ ಪುನೀತ್ ರಾಜ್ ಕುಮಾರ್ ಗುರುತಿಸಿಕೊಂಡಿದ್ದವರು. ಪ್ರೇಮದ ಕಾಣಿಕೆ ಚಿತ್ರದಲ್ಲಿ ತಮ್ಮ ತಂದೆ ಡಾ ರಾಜ್ ಕುಮಾರ್ ಜೊತೆ ಕೇವಲ 6 ತಿಂಗಳ ಮಗುವಿದ್ದಾಗ ತೆರೆ ಮೇರೆ ಬಂದಿದ್ದರು. 1975ರ ಮಾರ್ಚ್ 17ರಂದು ಜನಿಸಿದ್ದ ಪುನೀತ್ ರಾಜ್ ಕುಮಾರ್ ಡಾ ರಾಜ್ ಕುಮಾರ್ ಮತ್ತು ಪಾರ್ವತಮ್ಮ ಅವರ ಮೂರನೇ ಮತ್ತು ಕೊನೆಯ ಮಗನಾಗಿದ್ದು ಮುದ್ದಿನ ಮಗ. ಪುನೀತ್ ಅವರ ಮೂಲ ಹೆಸರು ಲೋಹಿತ್ ಕುಮಾರ್.

ಬೆಟ್ಟದ ಹೂವು ಚಿತ್ರದಲ್ಲಿ 10 ವರ್ಷದವನಿದ್ದಾಗ ರಾಮು ಎಂಬ ಪಾತ್ರ ಮಾಡಿದ್ದ ಪುನೀತ್ ಗೆ ರಾಷ್ಟ್ರಪ್ರಶಸ್ತಿ ಬಂದಿತ್ತು. ಬಾಲನಟನಾಗಿ 14 ಚಿತ್ರಗಳಲ್ಲಿ ಅಭಿನಯಿಸಿದ್ದರು. ವಸಂತ ಗೀತೆ 1980ರಲ್ಲಿ, ಭಾಗ್ಯವಂತರು 1981ರಲ್ಲಿ, ಚಲಿಸುವ ಮೋಡಗಳು 1982ರಲ್ಲಿ ಪ್ರಮುಖವಾದವು.

ನಂತರ ಪೂರ್ಣ ಪ್ರಮಾಣದಲ್ಲಿ ನಾಯಕನಟನಾಗಿ ತೆರೆ ಮೇಲೆ ಬಂದಿದ್ದು 2002ರಲ್ಲಿ ಅಪ್ಪು ಚಿತ್ರದ ಮೂಲಕ. ಸೂಪರ್ ಹಿಟ್ ಆಗಿತ್ತು. ನಂತರ ಅಭಿ ಚಿತ್ರ ಬಂದು ಅದು ಕೂಡ ಹಿಟ್ ಆಯಿತು. ನಂತರ ಹಿಂತಿರುಗಿ ನೋಡಲಿಲ್ಲ. ಈ ವರ್ಷದವರೆಗೆ 29 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಕೆಲವು ಚಿತ್ರ ಸೂಪರ್ ಹಿಟ್. ಜಾಕಿ ಮತ್ತು ಅಣ್ಣಾಬಾಂಡ್ ಚಿತ್ರಗಳು ಪುನೀತ್ ರನ್ನು ಸ್ಟಾರ್ ಮಾಡಿಬಿಟ್ಟಿದ್ದವು.

ಪುನೀತ್ ರಾಜ್ ಕುಮಾರ್ ಅವರ ವೃತ್ತಿಜೀವನದಲ್ಲಿ ಅತಿ ದೊಡ್ಡ ಹಿಟ್ ಆಗಿದ್ದು ರಾಜಕುಮಾರ ಚಿತ್ರ ಅದು ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂಪಾಯಿ ಗಳಿಸಿತ್ತು. ಆದರೆ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು ಮಾತ್ರ 10ರಲ್ಲಿ ಒಂದು ಭಾಗ ಮಾತ್ರ. ಇನ್ನು ಪೃಥ್ವಿ ಮತ್ತು ಮೈತ್ರಿ ಚಿತ್ರಗಳಲ್ಲಿ ಪುನೀತ್ ಅವರ ಪಾತ್ರ ತೀವ್ರ ವಿಮರ್ಶೆಗೆ ಒಳಗಾಗಿತ್ತು. 

ಪುನೀತ್ ಅವರು ರಾಷ್ಟ್ರಪ್ರಶಸ್ತಿಯೊಂದಿಗೆ 6 ರಾಜ್ಯ ಚಲನಚಿತ್ರೋತ್ಸವ ಪ್ರಶಸ್ತಿಯನ್ನು ಕೂಡ ಗಳಿಸಿದ್ದಾರೆ. ಮಿಲನ ಮತ್ತು ಜಾಕಿ ಚಿತ್ರಗಳಿಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಪುನೀತ್ ರಾಜ್ ಕುಮಾರ್ ಕೂಡ ಒಬ್ಬರಾಗಿದ್ದು ಸಾಯುವ ಮುನ್ನ ಜೇಮ್ಸ್ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. 90 ನಿಮಿಷಗಳ ಗಂಧದ ಗುಡಿ ಚಿತ್ರದ ತಯಾರಿ ಕೂಡ ಮುಗಿದಿದ್ದು ಅದರ ಬಿಡುಗಡೆ ದಿನಾಂಕ ನಾಡಿದ್ದು 1ರಂದು ಘೋಷಣೆಯಾಗಲಿದೆ.

ತಂದೆಯಂತೆ ಮಗ ಕೂಡ ಉತ್ತಮ ಗಾಯಕ:'ನಟ-ಗಾಯಕ-ನಿರ್ಮಾಪಕ-ಸಿನಿಮಾ ಜಗತ್ತು ಹಿಂದೆ-ಇಂದು-ಎಂದೆಂದು' ಎಂದು ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನು ಪುನೀತ್ ಬಣ್ಣಿಸಿಕೊಂಡಿದ್ದಾರೆ. ಆಫ್ ಬೀಟ್ ಸಿನಿಮಾಗಳಲ್ಲಿ ಕೂಡ ಅವರಿಗೆ ಆಸಕ್ತಿಯಿತ್ತು. ಕವಲುದಾರಿ, ಮಾಯಾ ಬಜಾರ್, ಫ್ರೆಂಚ್ ಬಿರಿಯಾನಿ ಚಿತ್ರಗಳನ್ನು ತಮ್ಮ ಬ್ಯಾನರ್ ಮೂಲಕ ನಿರ್ಮಿಸಿದ್ದರು. 

ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು. ತಂದೆ ಡಾ ರಾಜ್ ಕುಮಾರ್ ಅವರಂತೆ ಪುನೀತ್ ರಾಜ್ ಕುಮಾರ್ ಕೂಡ ಒಬ್ಬ ಉತ್ತಮ ಗಾಯಕ. ಭಾಗ್ಯವಂತರು ಚಿತ್ರದಲ್ಲಿ ಬಾನ ದಾರಿಯಲ್ಲಿ ಹಾಡನ್ನು ಇಂದಿಗೂ ಹಲವರು ಗುನುಗುನಿಸುತ್ತಿರುತ್ತಾರೆ. ಬೆಟ್ಟದ ಹೂವು ಚಿತ್ರದಲ್ಲಿ ಬಿಸಿಲೆ ಇರಲಿ ಹಾಡನ್ನು ಕೂಡ ಚಿಕ್ಕವನಿದ್ದಾಗ ಹಾಡಿ ಫೇಮಸ್ಸಾಗಿದ್ದರು. ನಂತರದ ದಿನಗಳಲ್ಲಿ ನಾಯಕ ನಟನಾಗಿ ಕೂಡ ಅನೇಕ ಗೀತೆಗಳನ್ನು ಹಾಡಿದ್ದಾರೆ. ಹಾಡಿನಿಂದ ಬಂದ ದುಡ್ಡನ್ನು ಸಮಾಜ ಸೇವೆಗೆ ಪುನೀತ್ ಬಳಸಿಕೊಳ್ಳುತ್ತಿದ್ದರು.

ಬಹುಮುಖ ಪ್ರತಿಭೆ ಕಲಾವಿದರಾಗಿದ್ದ ಪುನೀತ್ ರಾಜ್ ಕುಮಾರ್ ಪಿಆರ್ ಕೆ ಆಡಿಯೊದಡಿ ಮ್ಯೂಸಿಕ್ ಪ್ರೊಡಕ್ಷನ್ ಹೌಸ್ ನ್ನು ಆರಂಭಿಸಿದ್ದರು. ಇನ್ನು ಅನಾಥಾಶ್ರಮ, ಶಾಲೆಗಳು, ವೃದ್ಧರಿಗೆ ಆಶ್ರಯ ಮನೆಗಳು, ಗೋಶಾಲೆಗಳು, 1500ಕ್ಕೂ ಹೆಚ್ಚು ಮಕ್ಕಳ ಶಿಕ್ಷಣಕ್ಕೆ ಶುಲ್ಕ ಇತ್ಯಾದಿ ಬಹುಪಕಾರಿ ಸಮಾಜಸೇವೆಯನ್ನು ಕೂಡ ಮಾಡಿ ಹೆಸರಾಗಿದ್ದರು. 

ಇನ್ನು ಸಾವಿನಲ್ಲಿ ಕೂಡ ಸಾರ್ಥಕತೆ ಮೆರೆದಿದ್ದು ಅವರ ಕಣ್ಣುಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. ಪಡ್ಡೆಹುಲಿ, ಹಂಬಲ್ ಪೊಲಿಟಿಷಿಯನ್ ನೋಗರಾಜ್ ಮತ್ತು ಲಕ್ಕಿ ಮ್ಯಾನ್ ಗಳಂಥ ಚಿತ್ರಗಳಲ್ಲಿ ಸಣ್ಣ ಕಲಾವಿದರನ್ನು ಕೂಡ ಪ್ರೋತ್ಸಾಹಿಸಿ ತೆರೆಯ ಮೇಲೆ ತರಲು ಪ್ರಯತ್ನಿಸಿದ್ದರು.

ನಿನ್ನೆ ಶುಕ್ರವಾರ ನಟ ಪುನೀತ್ ಅವರ ಹಿರಿಯ ಸೋದರ ಶಿವರಾಜ್ ಕುಮಾರ್ ಅವರ ಭಜರಂಗಿ 2 ಚಿತ್ರ ತೆರೆಗೆ ಬಂದಿತ್ತು. ಬೆಳಗಿನ ಪ್ರದರ್ಶನ ನಂತರ ಎರಡನೇ ಪ್ರದರ್ಶನ ಅರ್ಧದಲ್ಲಿಯೇ ನಿಂತುಹೋಯಿತು. ಇಡೀ ಚಿತ್ರರಂಗವನ್ನು ಮತ್ತು ಕರ್ನಾಟಕವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com