ಬೆಂಗಳೂರು: ಡಾರ್ಲಿಂಗ್ ಕೃಷ್ಣ, ರಚಿತಾ ರಾಮ್ ಅಭಿನಯದ "ಲವ್ ಮಿ or ಹೇಟ್ ಮಿ" ಮುಹೂರ್ತ ನೆರವೇರಿದೆ. ಬೆಂಗಳೂರಿನ ದೇವಾಲಯವೊಂದರಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಚಿತ್ರದ ಮೊದಲ ಸನ್ನಿವೇಶಕ್ಕೆ ಮಿಲನ ನಾಗರಾಜ್ ಆರಂಭ ಫಲಕ ತೋರಿದ್ದು, ದಿನಕರ್ ತೂಗುದೀಪ ಕ್ಯಾಮೆರಾ ಚಾಲನೆ ಮಾಡಿದರು.
ದೀಪಕ್ ಗಂಗಾಧರ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ತೂಗುದೀಪ ಸಂಸ್ಥೆಯ ಕೆಲವು ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ, ದೀಪಕ್ ಗಂಗಾಧರ್ ಆ ನಂತರ ವಿತರಕರಾಗಿಯೂ ಹೆಸರು ಮಾಡಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
ಗೌರಿ ಹಬ್ಬದ ಶುಭದಿನದಂದು ಚಿತ್ರ ಆರಂಭಿಸಿದ್ದೇವೆ. ಇದೇ ಹದಿಮೂರರಿಂದ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಇದೊಂದು ಪಕ್ಕಾ ಲವ್ ಸ್ಟೋರಿ. ನಿಮ್ಮೆಲ್ಲರ ಬೆಂಬಲ ನಮಗಿರಲಿ ಎನ್ನುತ್ತಾರೆ ದೀಪಕ್ ಗಂಗಾಧರ್.
ಒಳ್ಳೆಯ ಕಥೆ. ಈ ಚಿತ್ರದಲ್ಲಿ ನನ್ನದು ಎರಡುರೀತಿಯ ಪಾತ್ರ. ಕಾಲೇಜ್ ಹುಡುಗನಾಗಿ ಹಾಗೂ ಕಾಲೇಜ್ ನಂತರದ ದಿನಗಳದ್ದು. ಲವ್ ಸಬ್ಜೆಕ್ಟ್ ನನಗೆ ಇಷ್ಟ ಹಾಗಾಗಿ ಹೆಚ್ಚಾಗಿ ಅದನೇ ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ಮತ್ತು ರಚಿತಾ ರಾಮ್ ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿದ್ದೇವೆ. ನಾವಿಬ್ಬರು ಒಂದೇ ದಿನ ಚಿತ್ರರಂಗ ಪ್ರವೇಶಿಸಿದವರು. ಎಂಟು ವರ್ಷಗಳ ಹಿಂದೆ ನನ್ನ ಮದರಂಗಿ, ರಚಿತಾ ಅವರ ಬುಲ್ ಬುಲ್ ಒಂದೇ ದಿನ ತೆರೆ ಕಂಡಿತ್ತು. ಇಷ್ಟು ವರ್ಷಗಳ ನಂತರ ಒಂದೇ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಕೂಡಿ ಬಂದಿದೆ ಎಂದು ಡಾರ್ಲಿಂಗ್ ಕೃಷ್ಣ ಹೇಳಿದರು.
ನಿರ್ಮಾಪಕ ಸುನೀಲ್, ನನಗೆ ಕಾಲೇಜು ದಿನಗಳಿಂದಲ್ಲೂ ಸಿನಿಮಾ ನಿರ್ಮಾಣ ಮಾಡಬೇಕೆಂಬ ಹಂಬಲ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ ಎಂದರು. ಚಿತ್ರದಲ್ಲಿ ಐದು ಹಾಡುಗಳಿವೆ. ಅಣ್ಣಾವ್ರ ಜನಪ್ರಿಯ ಹಾಡೇ ಚಿತ್ರದ ಗೀತೆಯಾಗಿದೆ. ತುಂಬಾ ಸುಮಧುರ ಗೀತೆಗಳು ಈ ಪ್ರೇಮಕಾಥಾನಕದಲಿರಲ್ಲಿದೆ ಎಂದು ಹಾಡುಗಳ ಹಾಗೂ ಸಂಗೀತದ ಬಗ್ಗೆ ವಿವರಣೆ ನೀಡಿದರು ಸಂಗೀತ ನಿರ್ದೇಶಕ ಹಾಗೂ ಸಹ ನಿರ್ಮಾಪಕ ಶ್ರೀಧರ್ ಸಂಭ್ರಮ್.
ಸಾಕಷ್ಟು ಪ್ರೇಮಕಥೆಗಳು ಬಂದಿವೆಯಾದರೂ, ಈ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ಸುಂದರ ಪರಿಸರಗಳಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂದು ಛಾಯಾಗ್ರಹಕ ಸಂತೋಷ್ ರೈ ಪಾತಾಜೆ ತಿಳಿಸಿದರು.
Advertisement